ಹಾರೋಹಳ್ಳಿ : ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಂದಾಗ ದೊಡ್ಡ ಕುರುಬರಹಳ್ಳಿಯ ಬಿಸಿಲು ಮಾರಮ್ಮ ದೇವಸ್ಥಾನಕ್ಕೆ ಬೀಗ ಜಡಿದು ದೇವರ ದರ್ಶನಕ್ಕೆ ಅವಕಾಶ ನೀಡದ ವಿಷಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕ್ಷಮೆಯಾಚಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾರ್ಯಕರ್ತರಾದ ಅನಿಲ್, ರವಿಕುಮಾರ್, ನಿಖಿಲ್ ದೇವಸ್ಥಾನಕ್ಕೆ ಬಂದರೆ ನಾವೇ ಮುಂದೆ ನಿಂತು ಅವರಿಗೆ ದೇವರ ದರ್ಶನ ಮಾಡಿಸಿ ಸನ್ಮಾನ ಮಾಡುವುದಾಗಿಯೂ ಮತ್ತು ನಿಖಿಲ್ ಹಾಗೂ ರಾಜ್ಯದ ಜನರ ಬಹಿರಂಗ ಕ್ಷಮೆಯಾಚಿಸುವುದಾಗಿಯೂ ಸ್ಪಷ್ಟನೆ ನೀಡಿದರು.
ಇತ್ತೀಚೆಗೆ ನಿಖಿಲ್ ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ವಿಚಾರವಾಗಿ ಜೆಡಿಎಸ್ ಕಾರ್ಯಕರ್ತರು ದೇವಸ್ಥಾನ ಉದ್ಘಾಟನೆ ಸಮಾರಂಭದ ಆಯೋಜಕರ ಮೇಲೆ ಹಲ್ಲೆ ನಡೆಸಲು ಮುಂದಾದರು. ಇದರಿಂದ ನಾವುಗಳು ಭಯಪಟ್ಟು ರಕ್ಷಣೆ ಪಡೆಯುವುದಕ್ಕಾಗಿ ದೇವಾಲಯದ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದೆವು. ಇದರಲ್ಲಿ ಯಾವುದೇ ರೀತಿಯ ರಾಜಕೀಯ ದುರುದ್ದೇಶ ಇರಲಿಲ್ಲ ಎಂದು ತಿಳಿಸಿದರು.
ನಿಖಿಲ್ ಯಾವಾಗ ಗ್ರಾಮಕ್ಕೆ ಬಂದರೂ ತಾವೇ ಮುಂದೆ ನಿಂತು ಸ್ವಾಗತಿಸುತ್ತೇವೆ, ಅವರ ಬರುವಿಕೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಶಾಂತಿ, ಸೌಹಾರ್ದ ಕಾಪಾಡಿ ಗ್ರಾಮದಲ್ಲಿ ದೇವಸ್ಥಾನದ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೆ ಒಮ್ಮತವಾಗಿ ಹೋಗಲಾಗುವುದು, ಈ ವಿಚಾರ ರಾಜ್ಯ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದು ಮತ್ತೆ ಇಂತಹ ತಪ್ಪು ನಡೆಯುವುದಿಲ್ಲ. ನಿಖಿಲ್ ಭೇಟಿ ಸಂದರ್ಭದಲ್ಲಿ ನಡೆದ ಘಟನೆಯ ಬಳಿಕ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದವೂ ನಡೆದಿತ್ತು. ಜತೆಗೆ ಮಾರಾಮಾರಿಯೂ ನಡೆದಿತ್ತು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೂ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿತ್ತು.