- ಹಾವು ಕಡಿತಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಬಾಲಕನ ಸಾವು ಪ್ರಕರಣ
- ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದ್ದ ಘಟನೆ
- ನಾಲ್ಕು ತಿಂಗಳ ನಂತರ ಪ್ರಕರಣ ದಾಖಲು
ಹಾವು ಕಡಿತಕ್ಕೆ ಒಳಗಾಗಿದ್ದ ಬಾಲಕ ಸಾತ್ವಿಕ್ಗೆ ಸರಿಯಾದ ಚಿಕಿತ್ಸೆ ನೀಡದೆ ಆತನ ಸಾವಿಗೆ ಕಾರಣವಾದ ಆರೋಪದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಡಾ.ರಂಜಿತ್ ವಿರುದ್ಧ ಚನ್ನಪಟ್ಟಣ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚನ್ನಪಟ್ಟಣದ ಮಹದೇಶ್ವರ ನಗರ ನಿವಾಸಿ ಕುಶಾಲ್ ಎಂಬುವರು ನೀಡಿದ ದೂರಿನ ಮೇರೆಗೆ ಡಾ.ರಂಜಿತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಕುಶಾಲ್ ಅವರ ಸಹೋದರಿ ಅಶ್ವಿನಿ ಮತ್ತು ನಿರಂಜನ್ ದಂಪತಿ ಪುತ್ರ ನಾಲ್ಕು ವರ್ಷದ ಸಾತ್ವಿಕ್ ಚನ್ನಪಟ್ಟಣದಲ್ಲಿ ತನ್ನ ಅಜ್ಜಿ ಮನೆಯಲ್ಲಿಯೇ ವಾಸವಿದ್ದು, ಮನೆ ಹತ್ತಿರದ ಖಾಸಗಿ ಶಾಲೆಯಲ್ಲಿ ಪ್ರೀ ನರ್ಸರಿ ಕಲಿಯುತ್ತಿದ್ದ. 2026ರ ಏಪ್ರಿಲ್ 24ರಂದು ರಜೆ ಇದ್ದ ಕಾರಣ ಮನೆ ಬಳಿ ಸಂಜೆ ಆಟವಾಡುತ್ತಿದ್ದಾಗ ಹಾವು ಕಚ್ಚಿತ್ತು. ತಕ್ಷಣವೇ ಸಾತ್ವಿಕ್ನನ್ನು ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ವೈದ್ಯ ಡಾ.ರಂಜಿತ್, ಮಕ್ಕಳ ವೈದ್ಯರು ಇಲ್ಲ ಮತ್ತು ಹೆಚ್ಚಿನ ಸೌಲಭ್ಯ ಇಲ್ಲ ಎಂದು ಹೇಳಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ತಕ್ಷಣ ಸಾತ್ವಿಕ್ನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಚನ್ನಪಟ್ಟಣದಲ್ಲಿ ವೈದ್ಯರು ನೀಡಿದ ಚಿಕಿತ್ಸೆಯ ವಿವರಗಳನ್ನು ಪರಿಶೀಲನೆ ಮಾಡಿದ್ದು, ವೈದ್ಯರು ಹಾವು ಕಡಿತಕ್ಕೆ ಪ್ರತಿಬಂಧಕ ಚುಚ್ಚುಮದ್ದು ನೀಡದೆ ಕೇವಲ ಟಿಟಿ ಮತ್ತು ರ್ಯಾಂಟಕ್ ಇಂಜೆಕ್ಷನ್ ನೀಡಿದ್ದಾರೆ. ಹಾವು ಕಡಿತಕ್ಕೆ ಪ್ರತಿಬಂಧಕ ಇಂಜೆಕ್ಷನ್ ನೀಡಿದ್ದರೆ ವಿಷ ಹರಡುವಿಕೆ ಕಡಿಮೆ ಆಗುತಿತ್ತು ಎಂದು ಹೇಳಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಮಗು ಏ.30ರಂದು ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ರ್ನಿಲಕ್ಷ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಶಾಲ್ ದೂರು ನೀಡಿದ್ದರು.
ಕೋರ್ಟ್ ಮೆಟ್ಟಿಲೇರಿದ್ದ ತಂದೆ
ಸಾತ್ವಿಕ್ ಸಾವಿನ ನಂತರ ಇವರ ತಂದೆ ನಿರಂಜನ್ ಕರ್ತವ್ಯಲೋಪ ಎಸಗಿದ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹೋರಾಟಕ್ಕೆ ಇಳಿದರು. ಪ್ರಕರಣದಲ್ಲಿ ವೈದ್ಯರ ರ್ನಿಲಕ್ಷ ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯ ಡಾ.ರಂಜಿತ್ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಇಲಾಖೆ ಆದೇಶ ಮಾಡಿತ್ತು. ನಂತರ ಇವರ ವಿರುದ್ಧ ವಿಚಾರಣೆ ಕೂಡ ನಡೆಯುತ್ತಿದೆ. ಆದರೆ, ಇವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳುವಲ್ಲಿ ಮತ್ತು ತನಿಖೆ ಮಾಡುವಲ್ಲಿ ಪೊಲೀಸ್ ಇಲಾಖೆ ಹಿಂದೇಟು ಹಾಕಿತ್ತು. ಆದರೆ ಇದರಿಂದ ವಿಚಲಿತರಾಗದ ನಿರಂಜನ್ ಹೈ ಕೋರ್ಟ್ನಲ್ಲಿ ಅರ್ಜಿ ದಾಖಲು ಮಾಡಿ ವೈದ್ಯರ ವಿರುದ್ಧ ಕ್ರಮಕ್ಕಾಗಿ ಹೋರಾಟ ನಡೆಸಿದ್ದರು. ಇದರ ಫಲವಾಗಿ ವೈದ್ಯರ ವಿರುದ್ಧ ಕೂಡಲೇ ತನಿಖೆ ಮಾಡುವಂತೆ ಸೂಚನೆ ನೀಡಿ 60 ದಿನಗಳ ಒಳಗೆ ತನಿಖೆ ಪೂರ್ಣಗೊಳಿಸುವಂತೆ ಠಾಣೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದ ಹೈಕೋರ್ಟ್, ಇದನ್ನು ಮೇಲುಸ್ತುವಾರಿ ಮಾಡುವಂತೆಯೂ ತಿಳಿಸಿ ಜೂನ್.23ರಂದು ಆದೇಶ ನೀಡಿತ್ತು. ಆದರೂ ವೈದ್ಯರ ವಿರುದ್ಧ ಪ್ರಕರಣ ದಾಖಲು ಮಾಡುವಲ್ಲಿ ಪೊಲೀಸ್ ಇಲಾಖೆ ವಿಳಂಬ ಮಾಡಿತ್ತು. ಅಂತಿಮವಾಗಿ ಆ.24ರಂದು ಪ್ರಕರಣ ದಾಖಲು ಮಾಡಲಾಗಿದೆ.
ದಯಾಮರಣಕ್ಕೆ ಅರ್ಜಿ ಯಾಕೆ?:
ತಮ್ಮ ಮಗನ ಸಾವಿಗೆ ಕಾರಣವಾದ ವೈದ್ಯರ ವಿರುದ್ಧ ಪ್ರಕರಣ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಗೃಹ ಇಲಾಖೆ ಕಾರ್ಯದರ್ಶಿ, ಡಿಜಿಪಿ ಸೇರಿ ಹಲವು ಅಧಿಕಾರಿಗಳು ಮತ್ತು ಸಚಿವರಿಗೆ ನಿರಂಜನ್ ಮನವಿ ಸಲ್ಲಿಸಿದ್ದರು. ಈ ನಡುವೆ ಹೈಕೋರ್ಟ್ ಆದೇಶದ ಹೊರತಾಗಿಯೂ ಆಡಳಿತ ಯಂತ್ರ ದಾಟಿ ಬದಲಾವಣೆ ಆಗದ ಹಿನ್ನೆಲೆಯಲ್ಲಿ ಬೇಸತ್ತ ನಿರಂಜನ್ ಆ.21ರಂದು ವರಮಹಾಲಕ್ಷಿ$್ಮ ಹಬ್ಬದ ದಿನದಂದು ರಾಷ್ಟ್ರಪತಿಗಳಿಗೆ ಇಮೇಲ್ ಮಾಡಿ ದಯಾಮರಣ ಕೋರಿದ್ದಾರೆ. ತಮಗೆ ಆಗುತ್ತಿರುವ ನೋವನ್ನು ತೋಡಿಕೊಂಡಿದ್ದರು. ಇದಾದ ಮೂರನೇ ದಿನಕ್ಕೆ ಅಂದರೆ ಆ.24ರಂದು ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಬರೋಬ್ಬರಿ ಟನೆ ನಡೆದ 4 ತಿಂಗಳ ನಂತರ ಪ್ರಕರಣ ದಾಖಲಾದಂತಾಗಿದೆ. ಆದರೆ ಎಫ್ಐಆರ್ನಲ್ಲಿ ಯಾವುದೇ ಸೆಕ್ಷನ್ಗಳನ್ನು ದಾಖಲು ಮಾಡದೆ ಇರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮುಂದುವರಿಸುವುದಾಗಿ ನಿರಂಜನ್ ಹೇಳಿದ್ದಾರೆ.
ಸೂಕ್ತ ವ್ಯವಸ್ಥೆ ಇದ್ದರೂ ಚಿಕಿತ್ಸೆ ನೀಡುವಲ್ಲಿ ವೈದ್ಯರು ರ್ನಿಲಕ್ಷ ತೋರಿದ ಕಾರಣ ಹಾವು ಕಡಿತಕ್ಕೆ ಒಳಗಾದ ನನ್ನ ಮಗ ಮೃತಪಟ್ಟ. ನನ್ನ ಮಗನಿಗೆ ಆದ ಅನ್ಯಾಯ ಯಾರಿಗೂ ಆಗಬಾರದು ಎನ್ನುವ ನಿಟ್ಟಿನಲ್ಲಿ ಈ ಹೋರಾಟ ಮಾಡುತ್ತಿದ್ದೇನೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಕೊಡಬೇಕು. ಇಲಾಖೆಗಳಿಂದ ಸೂಕ್ತ ಸ್ಪಂದನೆ ಸಿಗದ ಕಾರಣದಿಂದಲೇ ನಾನು ಮತ್ತು ನನ್ನ ಪತ್ನಿ ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಮಾಡಿದ್ದೇವೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ವೈದ್ಯರನ್ನು ಅಮಾನತು ಮಾಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ.
ಡಾ.ಬಿ.ಎಸ್.ನಿರಂಜನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ