ಕೆಂಚನಕುಪ್ಪೆ ಗ್ರಾಮದಲ್ಲಿ ರಾಗಿ ಮೆದೆಗೆ ಬೆಂಕಿ ತಗುಲಿ ಬೆಳೆ ಬೆಂಕಿಗೆ ಆಹುತಿಯಾಗಿದೆ.
ಬಿಡದಿ: ಕೆಂಚನಕುಪ್ಪೆ ಗ್ರಾಮದ ಜಮೀನೊಂದರಲ್ಲಿ ಒಕ್ಕಣೆ ಮಾಡಲು ಇಟ್ಟಿದ್ದ ರಾಗಿ ಮೆದೆಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ಮೆದೆಗಳು ಸಂಪೂರ್ಣ ಭಸ್ಮವಾಗಿವೆ.
ಗ್ರಾಮದ ನಾಗೇಶ್ ಅವರು ಇತ್ತೀಚೆಗೆ ರಾಗಿಯನ್ನು ಕಟಾವು ಮಾಡಿ, ಒಕ್ಕಣೆ ಮಾಡುವುದಕ್ಕಾಗಿ ಜಮೀನಿನಲ್ಲಿ ಮೆದೆ ಹಾಕಿದ್ದರು. ಆದರೆ ರಾಗಿಗೆ ಯಾರೋ ಕಿಡಿಕೇಡಿಗಳು ಬೆಂಕಿ ಇಟ್ಟಿದ್ದು, ಮೆದೆಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳಿಯರು, ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯು ಮುಟ್ಟಿಸಿದ್ದಾರೆ. ಅಲ್ಲದೆ ತಾವೂ ಸಹ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬಹುತೇಕ ರಾಗಿ ಸುಟ್ಟುಭಸ್ಮವಾಗಿತ್ತು.
ಈ ವೇಳೆ ರೈತ ನಾಗೇಶ್, ದುಷ್ಕರ್ಮಿಗಳು ಮೆದೆಗೆ ಬೆಂಕಿ ಇಟ್ಟಿದ್ದು, ಸಂಪೂರ್ಣ ಬೆಳೆ ಸುಟ್ಟುಹೋಗಿದೆ. ನಮಗೆ ಆರ್ಥಿಕ ಸಂಕಷ್ಟವಲ್ಲದೆ, ಜಾನುವಾರಿಗೆ ಮೇವು ಸಹ ಇಲ್ಲದಂತಾಗಿದೆ. ಸಂಬಂಧಿತ ಇಲಾಖೆಯವರು ನಮಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಅವಲತ್ತುಕೊಂಡರು.