ಮಾಗಡಿ ತಾಲೂಕಿನ ಹೊಸಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಚ್.ಸಿ.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಕುದೂರು-ತಿಪ್ಪಸಂದ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ಜಿ.ವೆಂಕಟೇಶ್, ದಿಶಾ ಸಮಿಸಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಪ್ರಕಾಶ್, ತಗ್ಗಿಕುಪ್ಪೆ ಗ್ರಾಪಂ ಅಧ್ಯಕ್ಷೆ ಪದ್ಮಾ, ಉಪಾಧ್ಯಕ್ಷ ಕುಮಾರ್ ಇದ್ದರು.
ಬೆಂಗಳೂರು ದಕ್ಷಿಣ

ಎಚ್‌ಡಿಕೆ ಒಂದೂ ಕೈಗಾರಿಕೆ ಪ್ರದೇಶ ಮಾಡಿಲ್ಲ

* ಸಚಿವ ಎಚ್.ಸಿ.ಬಾಲಕೃಷ್ಣ ಆರೋಪ * ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

ಮಾಗಡಿ: ಕುಮಾರಸ್ವಾಮಿ ಕೇಂದ್ರ ಸಚಿವರಾಗಿ 3 ವರ್ಷ ಆಗಿದೆ, ಸುಮ್ಮನೆ ಕಥೆ ಹೇಳಿಕೊಂಡು ಓಡಾಡಿದರೆ ಪ್ರಯೋಜನವಿಲ್ಲ. ಮೇಕೆದಾಟು ಯೋಜನೆಗೆ ಮಂಜೂರಾತಿ ಕೊಡಿಸಲಿಲ್ಲ, ಒಂದು ಕೈಗಾರಿಕೆ ಪ್ರದೇಶ ಮಾಡಲಿಲ್ಲ ಎಂದು ಸಚಿವ ಎಚ್.ಸಿ.ಬಾಲಕೃಷ್ಣ ಆರೋಪಿಸಿದರು.

ಹೊಸಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯಕಲ್ಪಿಸುವ ಮೂಲಕ ಜನಪರ ಕೆಲಸ ಮಾಡುತ್ತಿದ್ದೇವೆ. ಮಾಗಡಿ ತಾಲೂಕಿನಲ್ಲಿ 150 ಎಕರೆ ಜಾಗ ನೀಡುತ್ತೇನೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒಂದು ಕಾರ್ಖಾನೆ ನಿರ್ಮಿಸಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ಕೇಂದ್ರದಿಂದ ಸಾಮಾಜಿಕ ನ್ಯಾಯಕೊಡಲಿ. ಎಲ್ಲರಿಗೂ ಬರೀ ಚಾಕ್‌ಲೇಟ್ ಕೊಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ವಿರೋಧ ಪಕ್ಷದವರು ನಮ್ಮ ಸರ್ಕಾರ, ನಾವು ನಮ್ಮ ಸರ್ಕಾರ ಬರುತ್ತದೆ ಎನ್ನುತ್ತೇವೆ. ಚುನಾವಣೆಗೆ ಒಂದುವರೆ ವರ್ಷ ಬಾಕಿ ಇದೆ. ದೇಶ ಎನ್ನೇನು ಆಗುತ್ತದೆ ನೋಡೋಣ ಎಂದರು. ಕಬ್ಬು ಬೆಳೆಗಾರರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೇಂದ್ರದಿಂದ ಸಹಕಾರ ಮಾಡಲಿ. ಅದನ್ನು ಬಿಟ್ಟು ರಾಜ್ಯ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಮಾಡುವುದು ಸರಿಯಲ್ಲ ಎಂದರು.

ಡಿ.14 ರಂದು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕುದೂರಿನಲ್ಲಿ ಸಿಎಂ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಸೋನಿಯಾ ಗಾಂಧಿ ಅವರ ಪುಸ್ತಕ ಇಂಗ್ಲಿಷ್‌ನಲ್ಲಿದ್ದು, ತಾಲೂಕಿನಲ್ಲಿ ಜನ ಇಂಗ್ಲಿಷ್ ಓದುವುದಾದರೆ ಕೊಡಿಸುತ್ತೇನೆ, ಇಂಗ್ಲಿಷ್ ಪುಸ್ತಕವನ್ನು ಕನ್ನಡದಲ್ಲಿ ಅನುವಾದ ಮಾಡಿ ಪುಸ್ತಕ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಇದನ್ನು ಕಾರ್ಯಕರ್ತರು, ಮುಖಂಡರಿಗೆ ವಿತರಿಸುತ್ತೇನೆ. ನಾನು 10 ಪೇಜ್ ಓದಿದ್ದೇನೆ ಎಂದರು.

ಮುಖಂಡರಾದ ಶಿವರಾಜು, ರಮೇಶ್, ಶಣ್ಮುಖ, ಉಮೇಶ್, ನರಸಿಂಹಯ್ಯ, ಮುನಿರಾಜು, ತಹಸೀಲ್ದಾರ್ ಕೆ.ಆರ್. ರಂಜಿತ್, ಇಒ ಜಯಪಾಲು, ಸಿಡಿಪಿಒ ಸುರೇಂದ್ರ, ಎಡಿಎಲ್‌ಆರ್ ಆನಂದ್ ಇತರರು ಇದ್ದರು.

ವಾರದೊಳಗೆ ಮಾಗಡಿ- ಬೆಂಗಳೂರು ಕೆಶಿಪ್ ರಸ್ತೆ ಕಾಮಗಾರಿ ಆರಂಭ: ಮಾಗಡಿ- ಬೆಂಗಳೂರು ಕೆಶಿಪ್ ರಸ್ತೆ ಕಾಮಗಾರಿಯನ್ನು ಇನ್ನೊಂದು ವಾರದೊಳಗೆ ಆರಂಭಿಸಿ ಆರು ತಿಂಗಳಲ್ಲಿ ರಸ್ತೆ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಎಪಿಎಂಸಿ ಮಾರುಕಟ್ಟೆ ನಿರ್ಮಿಸಲು ಜಾಗ ಮತ್ತು 5 ಕೋಟಿ ರೂ. ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡುತ್ತೇನೆ. ಹಿರಿಯೂರು ತಾಲೂಕಿನ ಧರ್ಮಪುರಿ ಹೋಬಳಿ ಜವಾಬ್ದಾರಿ ನೀಡಿದ್ದು, ನೀರಾವರಿ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತಂದು ಬಗೆಹರಿಸಿದ್ದೇನೆ. ಈ ಹೋಬಳಿ ಜೆಡಿಎಸ್ ಪರವಾಗಿದ್ದು, ಈ ಬಾರಿ ಕಾಂಗ್ರೆಸ್, ಸಿಎಂ ಹಾಗೂ ನನ್ನ ಬಗ್ಗೆ ವಿಶ್ವಾಸವಿಟ್ಟು ಕಾಂಗ್ರೆಸ್ ಪರವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ ಎಂದರು.

ವಾರದೊಳಗೆ ನೂತನವಾಗಿ ಬಗರ್ ಹುಕುಂ ಕಮಿಟಿ ರಚಿಸಿ ನಿರಂತರ ಸಭೆ ನಡೆಸಿ 6 ತಿಂಗಳಲ್ಲಿ ಹಕ್ಕುಪತ್ರಗಳನ್ನು ನೀಡುವಂತೆ ಸೂಚಿಸಲಾಗಿದೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಭಸ್ಮಾಸುರ ಇದ್ದಂತೆ!

ಎಚ್.ಡಿ.ಕುಮಾರಸ್ವಾಮಿ ಭಸ್ಮಾಸುರ ಇದ್ದಂತೆ. ನಮ್ಮ ಹಳೆಯ ಬಾಸ್ ಕುಮಾರಣ್ಣ ಯಾರ ತಲೆಯ ಮೇಲೆ ಕೈ ಇಟ್ಟರೂ ಅವರು ಭಸ್ಮ ಆಗ್ತಾರೆ ಎಂದು ಸಚಿವರು ವ್ಯಂಗ್ಯವಾಡಿದರು. ಪುರಾಣದಲ್ಲಿ ಪರಶಿವನೇ ಭಸ್ಮಾಸುರನಿಗೆ ವರಕೊಟ್ಟು ಮತ್ತೆ ಭಸ್ಮಾಸುರನಿಂದ ತನ್ನಪ್ರಾಣಕ್ಕೆ ಕುತ್ತುತಂದುಕೊಂಡಿದ್ದ. ಶಿವನು ತನ್ನ ಪ್ರಾಣ ಉಳಿಸಿಕೊಳ್ಳಲು ವಿಷ್ಣುವಿನ ಮೊರೆಹೋಗಿ ವಿಷ್ಣು ಮೋಹಿನಿ ರೂಪ ತಾಳಿ ಭಸ್ಮಾಸುರ ತನ್ನಿಂದ ತಾನೇ ಭಸ್ಮವಾಗುವಂತೆ ಭಸ್ಮಾಸುರನ ಸಾವಿಗೆ ಕಾರಣನಾದ ಕಥೆಯನ್ನು ಉಲ್ಲೇಖಮಾಡಿ ಕುಮಾರಸ್ವಾಮಿ ಬಗ್ಗೆ ವ್ಯಂಗ್ಯವಾಡಿದರು.