DR CN Manjunath 
ಬೆಂಗಳೂರು ದಕ್ಷಿಣ

ಆರೋಗ್ಯ ವಿವಿ ಕ್ಯಾಂಪಸ್ ನಲ್ಲೇ ಆಸ್ಪತ್ರೆ ನಿರ್ಮಿಸಿ

ಪ್ರಮುಖ ಮುಖ್ಯಾಂಶಗಳು

  • ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣ
  • ಡಾ.ಸಿ.ಎಸ್. ಮಂಜುನಾಥ್ ಅವರಿಂದ ವೈಧ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ
  • ಕ್ಯಾಂಪಸ್ ಆವರಣದಲ್ಲೇ ಆಸ್ಪತ್ರೆ ನಿರ್ಮಿಸಲು ಆಗ್ರಹ
ರಾಮನಗರ: ನಗರದ ಅರ್ಚಕರಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ನೂತನ ಕ್ಯಾಂಪಸ್‌ನಲ್ಲೇ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲೇಜು ಕ್ಯಾಂಪಸ್‌ನಲ್ಲೇ ಆಸ್ಪತ್ರೆಯೂ ಇರಬೇಕು ಎಂದಿರುವ ಅವರು, ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಮತ್ತು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಅವರಿಗೆ ಪತ್ರ ಬರೆದಿದ್ದಾರೆ.
ಆರೋಗ್ಯ ವಿವಿ ಕ್ಯಾಂಪಸ್‌ನಲ್ಲಿ ಕೇವಲ ಆಡಳಿತ ಭವನ ಮತ್ತು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಮಾತ್ರ ನಡೆಯುತ್ತಿರುವುದು ತಿಳಿದು ಬಂದಿದೆ. ಕಾಲೇಜು ಆವರಣದಲ್ಲೇ ಆಸ್ಪತ್ರೆನಿರ್ಮಾಣವನ್ನು ಪ್ರಸ್ತಾವಿತ ಯೋಜನೆಯಲ್ಲಿ ಸೇರಿಸದೇ ಇರುವುದರಿಂದ ಯೋಜನೆ ಪೂರ್ಣವಾಗುವುದಿಲ್ಲ. ಯಾವುದೇ ವೈದ್ಯಕೀಯ ಕಾಲೇಜಿಗೆ ಶೈಕ್ಷಣಿಕ, ಸಾರ್ವಜನಿಕ ಆರೋಗ್ಯ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಮಾನ್ಯತೆ ದಷ್ಟಿಯಿಂದ 650 ಹಾಸಿಗೆಗಳ ಸಂಪೂರ್ಣ ಕಾರ್ಯನಿರ್ವಹಣೆಯ ಆಸ್ಪತ್ರೆ ಅನಿವಾರ್ಯವಾಗಿರುತ್ತದೆ. ವಿವಿಯ ಸಂಪೂರ್ಣ ಅನುದಾನದಡಿ ಸುವಾರು 1600 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತುತ್ತಿರುವ ಕ್ಯಾಂಪಸ್ ಮತ್ತು ಕಾಲೇಜಿಗೆ 650 ಹಾಸಿಗೆಗಳ ಆಸ್ಪತ್ರೆಗೆ ಅಗತ್ಯವಿದೆ ಎಂದು ತಮ್ಮ ಪತ್ರದಲ್ಲಿ ಡಾ. ಮಂಜುನಾಥ್ ಗಮನ ಸೆಳೆದಿದ್ದಾರೆ.
ಸುಸಜ್ಜಿತ ಆಸ್ಪತ್ರೆ ಸ್ಥಾಪನೆಯು ವೈದ್ಯಕೀಯ ಮಂಡಳಿ ಮತ್ತು ಎನ್‌ಎಂಸಿ ಕ್ಲಿನಿಕಲ್ ತರಬೇತಿ ವಾನದಂಡಗಳನ್ನು ಪೂರೈಸುವ ಜೊತೆಗೆ, ಜಿಲ್ಲಾ ಕೇಂದ್ರವಾಗಿರುವ ರಾಮನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ದ್ವಿತೀಯ ಮತ್ತು ತತೀಯ ಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ಸಿಗುವಂತಾಗಲಿದೆ. ರಾಜ್ಯ ಸರ್ಕಾರ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಈ ಯೋಜನೆಯನ್ನು ಮತ್ತೆ ಪರಿಶೀಲಿಸಿ, ವೈದ್ಯಕೀಯ ಕಾಲೇಜು ಆವರಣದಲ್ಲಿಯೇ ಸುಸಜ್ಜಿತ ಆಸ್ಪತ್ರೆ ನಿರ್ವಾಣ ವಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಸದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪ್ರಾಯೋಗಿಕ ಅಡಚಣೆ ರಾಮನಗರದಲ್ಲಿರುವ ಜಿಲ್ಲಾಸ್ಪತ್ರೆ ಕೇವಲ 250 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಅದು ವೈದ್ಯಕೀಯ ಕಾಲೇಜು ಆವರಣದಿಂದ ಸುವಾರು 3 ಕಿ.ಮೀ. ದೂರದಲ್ಲಿದೆ. ಇದರಿಂದ ಶೈಕ್ಷಣಿಕ ಸಮನ್ವಯ, ರೋಗಿಗಳ ಆರೈಕೆ, ತುರ್ತು ಸೇವೆಗಳು, ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಗಂಭೀರವಾದ ಪ್ರಾಯೋಗಿಕ ಅಡಚಣೆಗಳು ಉಂಟಾಗುತ್ತವೆ. ರೋಗಿಗಳು ಹಾಗೂ ಅಧ್ಯಾಪಕರು ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಮಧ್ಯೆ ನಿತ್ಯ ಓಡಾಡಬೇಕಾಗುತ್ತದೆ. ಇದರಿಂದ ಅನಾನುಕೂಲದ ಜೊತೆಗೆ ಕಾರ್ಯಕ್ಷಮತೆಯ ಕೊರತೆ ಉಂಟಾಗಲಿದೆ. ವೈದ್ಯಕೀಯ ಕಾಲೇಜು ಸ್ಥಾಪನೆಯ ಮೂಲ ಉದ್ದೇಶ ಈಡೇರಿದಂತಾಗುವುದಿಲ್ಲ ಎಂದು ಡಾ. ಸಿ.ಎನ್. ಮಂಜುನಾಥ್ ಪತ್ರದಲ್ಲಿ ತಿಳಿಸಿದ್ದಾರೆ.

ಮಾಹಿತಿ ನೀಡಲಾಗುವುದು

ಕ್ಯಾಂಪಸ್‌ನಲ್ಲಿಯೇ 650 ಹಾಸಿಗೆಗಳ ಸಾಮರ್ಥ್ಯದ ಜನರಲ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿವಿ ಮತ್ತು ಆಸ್ಪತ್ರೆ ನೌಕರರಿಗೆ ವಸತಿ ಗೃಹಗಳು, ಕಾಲೇಜು ಸಭಾಂಗಣ, ಕ್ರೀಡಾ ಸಂಕೀರ್ಣ ಸೇರಿದಂತೆ ಇತರ ಮೂಲಸೌಕರ್ಯ ಒಳಗೊಂಡ ಯೋಜನೆಗೆ ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುವಾರ್ ಅವರು ಈ ಕುರಿತು ಸೂಚನೆ ನೀಡಿದ್ದಾರೆ, ವಿವಿ ಸಿಂಡಿಕೇಟ್ ಸಭೆಯೂ ಒಪ್ಪಿದೆ. ಸದ್ಯ ವಿವಿ ಬಿಡುಗಡೆ ವಾಡಿರುವ 600 ಕೋಟಿ ವೆಚ್ಚದಲ್ಲಿ ಆಡಳಿತ ಭವನ ಮತ್ತು ವೈದ್ಯಕೀಯ ಕಾಲೇಜು ವಾತ್ರ ನಿರ್ಮಾಣವಾಗುತ್ತಿದೆ. ಹಾಗಾಗಿ, ವಿವಿ ಕೈಗೊಂಡಿರುವ ಕ್ರಮಗಳ ಕುರಿತು ಸಂಸದ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಪತ್ರ ಬರೆಯಲಾಗುವುದು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಮಾಹಿತಿ ನೀಡಿದ್ದಾರೆ.