ರಾಮನಗರದಲ್ಲಿ ಜಿಲ್ಲಾ ಕೋರ್ಟ್ ಆವರಣದಲ್ಲಿ ಬಾಂಬ್ ಪತ್ತೆ ದಳದಿಂದ ಪರಿಶೀಲನೆ. ಮಾಡುತ್ತಿರುವುದು.  
ಬೆಂಗಳೂರು ದಕ್ಷಿಣ

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ದಕ್ಷಿಣ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ
  • ಇ ಮೇಲ್ ಮೂಲಕ ಬೆದರಿಕೆ
  • ಆರ್ ಡಿ ಎಕ್ಸ್ ಇಟ್ಟು ಸ್ಪೋಟಿಸುವ ಬೆದರಿಕೆ
ಮಧ್ಯಾಹ್ನ 12.35ರ ಸುಮಾರಿಗೆ ಕೋರ್ಟ್ ನಲ್ಲಿ ಹನ್ನೆರಡು ಆರ್.ಡಿ.ಎಕ್ಸ್ ಬಾಂಬ್‌ ಇಟ್ಟಿರುವುದಾಗಿ ಇಮೇಲ್ ಬಂದಿರುವುದನ್ನು ಗಮನಿಸಿದ ನ್ಯಾಯಾಧೀಶರು, ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದಾರೆ. ತಕ್ಷಣ ಅಲರ್ಟ್ ಆದ‌ ಪೊಲೀಸರು ನ್ಯಾಯಾಲಯದ ಆವರಣಕ್ಕೆ ಬಂದರು. ಕೋರ್ಟ್ ಒಳಗಡೆ ಇದ್ದ ನ್ಯಾಯಾಧೀಶರು, ಸಿಬ್ಬಂದಿ, ವಕೀಲರು ಹಾಗೂ ಹೊರಭಾಗದಲ್ಲಿದ್ದ ಸಾರ್ವಜನಿಕರನ್ನು ಹೊರಕ್ಕೆ ಕಳಿಸಿದರು. ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಸಹ ತೆರವುಗೊಳಿಸಿದವರು.
ಅಷ್ಟೊತ್ತಿಗೆ ಸ್ಥಳಕ್ಕೆ ಬಾಂಬ್ ಪತ್ತೆ ದಳ ಮತ್ತು ಶ್ವಾನದಳದ ಸಿಬ್ಬಂದಿ ಬಂದು, ಬಾಂಬ್ ಗಾಗಿ ಶೋಧ ಕಾರ್ಯಾಚರಣೆ ನಡೆಸಿದರು. ಪೊಲೀಸರು ಸಹ ಸಿಬ್ಬಂದಿಗೆ ಸಾಥ್ ನೀಡಿದರು. ಬಾಂಬ್ ಇಟ್ಟಿರುವ ಇಮೇಲ್ ವಿಷಯ ತಿಳಿಯುತ್ತಿದ್ದಂತೆ, ಸಾರ್ವಜನಿಕರು ಕೋರ್ಟ್ ಹೊರಭಾಗದಲ್ಲಿ ಜಮಾಯಿಸಿದರು. ಸ್ಥಳಕ್ಕೆ ಬಂದು ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಕುತೂಹಲದಿಂದ ವೀಕ್ಷಿಸಿದರು.
ಇಮೇಲ್ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ, ಮಧ್ಯಾಹ್ನ 12.45ಕ್ಕೆ ಇಮೇಲ್ ಬಂದಿದ್ದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು. ತಮಿಳುನಾಡಿನಲ್ಲಿ ಇ.ಡಬ್ಲ್ಯೂ.ಎಸ್ ಮೀಸಲಾತಿ ಜಾರಿ ವಿರೋಧಿಸಿ ಬಾಂಬ್‌ ಇರಿಸಲಾಗಿದೆ ಎಂದು ಇಮೇಲ್ ನಲ್ಲಿ ಬರೆಯಲಾಗಿದೆ ಎಂದರು.