ರಾಮನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್‌ಗೌಡ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಬೆಂಗಳೂರು ದಕ್ಷಿಣ

ಸಂಪುಟದಿಂದ ನಾಗೇಂದ್ರ ಕೈ ಬಿಡಲು ಬಿಜೆಪಿ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು
  • ಕಳಂಕಿತರಿಗೆ ಸಚಿವ ಸ್ಥಾನದ ಭಾಗ್ಯ
  • ಸಂಪುಟದಿಂದ ವಜಾ ಮಾಡಲು ಒತ್ತಡ

ರಾಮನಗರ: ಮಹರ್ಷಿ ಶ್ರೀ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಮೊತ್ತದ ಹಗರಣ ಮಾಡಿ ಜೈಲಿಗೆ ಹೋಗಿದ್ದ ನಾಗೇಂದ್ರ ಅವರನ್ನು ಸಚಿವ ಸಂಪುಟದಿAದ ಕೈ ಬಿಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮುಖಂಡ ಗೌತಮ್‌ಗೌಡ ಎಚ್ಚರಿಕೆ ನೀಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದ ಈ ಹಗರಣದಲ್ಲಿ ನಾಗೇಂದ್ರ ಜೈಲಿಗೆ ಹೋಗಿ ಬಂದಿದ್ದರು. ಹಗರಣ ನಡೆದಿರುವುದನ್ನು ಅಂದಿನ ಮುಖ್ಯಮಂತ್ರಿಗಳು ಸದನದಲ್ಲಿಯೇ ಒಪ್ಪಿಕೊಂಡಿದ್ದಾರೆ. ಇದರ ನಡುವೆ ಇಡಿ ಪ್ರಕರಣ ದಾಖಲು ಮಾಡುತ್ತಿದ್ದಂತೆ ನಾಗೇಂದ್ರ ಜೈಲಿಗೆ ಸಹ ಹೋಗಿ ಬಂದಿದ್ದಾರೆ. ಇಂತವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಅಗತ್ಯವಾದರೂ ಏನಿತ್ತು ಎಂದು ಗೌತಮ್‌ಗೌಡ ಪ್ರಶ್ನಿಸಿದರು.

ವಾಲ್ಮೀಕಿ ಸಮೂದಾಯಕ್ಕೆ ಸೇರಬೇಕಾಗಿದ್ದ 187 ಕೋಟಿ ರೂ.ಗಳನ್ನು ಪಕ್ಕದ ತೆಲಾಂಗಣ ಚುನಾವಣೆಗೆ ಬಳಕೆ ಮಾಡಿಕೊಂಡಿರುವುದು ಇ ಡಿ ತನಿಖೆ ವೇಳೆ ಸಾಬೀತಾಗಿದೆ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸುವ ಅನಿವಾರ್ಯತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಏನಿತ್ತು. ಯಾರದ್ದಾರೂ ಭಯವಿತ್ತೇ? ಇಲ್ಲವೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಒತ್ತಡ ಏನಾದರೂ ಇತ್ತೇ? ಎಂದರು.

ಇದು ನೇರವಾಗಿ ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಕಪ್ಪವಾಗಿದ್ದು, ಇದಕ್ಕೆ ಬದಲಿಯಾಗಿ ಪಕ್ಷ ಇವರನ್ನು ಮತ್ತೆ ಮಂತ್ರಿ ಮಾಡಿದೆ. ನಾಗೇಂದ್ರ ಅವರ ವಿರುದ್ಧ ಆರೋಪಪಟ್ಟಿಯೂ ಇದೆ. ಆದರೂ ಅವರನ್ನು ಮತ್ತೆ ಮಂತ್ರಿ ಮಾಡಿರುವುದು ಅಕ್ಷಮ್ಯ ಅಪರಾಧ. ಮಹರ್ಷಿ ವಾಲ್ಮೀಕಿ ನಿಗಮದ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಮೀಸಲಿಟ್ಟ ಹಣ ನುಂಗಿದವರನ್ನೇ ಸಚಿವರನ್ನಾಗಿ ಮಾಡಿ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮಾಡಿದ ದ್ರೋಹವಾಗಿದೆ ಎಂದು ಟೀಕಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ರೂ. 186 ಕೋಟಿ ಹಗರಣ ನಡೆದ ಕಾರಣಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರು ಎಂಬುದನ್ನು ಈಗಿನ ಮುಖ್ಯಮಂತ್ರಿಗಳು ನೆನಪಿಸಿಕೊಳ್ಳಬೇಕು. ಸಚಿವರಾಗಿ ನೇಮಕಗೊಂಡ ನಾಗೇಂದ್ರ ಅವರಿಗೆ ಇನ್ನೂ ಕ್ಲೀನ್‌ಚಿಟ್ ಸಿಕ್ಕಿಲ್ಲ. ಅವರ ವಿರುದ್ಧ ಈಗಲೂ ತನಿಖೆ ನಡೆಯುತ್ತಿದೆ. ಆದರೂ ಮತ್ತೆ ಅವರನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಡೆಯಕೊಳ್ಳಲೇಬೇಕು. ಇಲ್ಲವಾದರೆ ಎನ್‌ಡಿಎ ಮೈತ್ರಿ ಕೂಟ ಬೃಹತ್ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧ್ಯಕ್ಷ ಆನಂದ ಸ್ವಾಮಿ ಮಾತನಾಡಿ, ನಿಗಮದ ಹಣ ಕೊಳ್ಳೆ ಹೊಡೆದು ತೆಲಂಗಾಣದಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಡ್ರಾ ಮಾಡಿ ಚುನಾವಣೆಗೆ ಬಳಸಿದ್ದರು. ಇದೆಲ್ಲ ಜಾರಿ ನಿರ್ದೇಶನಾಲಯದ (ಇ.ಡಿ.) ದಾಖಲೆಯಲ್ಲಿ ಉಲ್ಲೇಖವಾಗಿದೆ. ಈ ಹಗರಣದಲ್ಲಿ ಅಮಾಯಕ ಅಧಿಕಾರಿ ಚಂದ್ರಶೇಖರ್ ಎಂಬುವರು ಆತ್ಮಹತ್ಯೆ ಮಾಡಿಕೊಂಡರು. ಈ ರೀತಿ ಭ್ರಷ್ಠಾಚಾರ ಮಾಡಿದರೆ ಅವರಿಗೆ ಹೆಗಲ ಮೇಲೆ ಸ್ಟಾರ್ ಬಂದAತೆ. ಹೆಚ್ಚು ಹೆಚ್ಚು ಸ್ಟಾರ್ ಇರುವವರಿಗೆ ಮಂತ್ರಿ ಗಿರಿ ಕೊಡಲಾಗುತ್ತಿದೆ ಎಂದು ಟೀಕಿಸಿದರು.

ಭ್ರಷ್ಟ ಸಚಿವರನ್ನು ಸಂಪುಟದಿAದ ಕೈ ಬಿಡಿ ಎಂದು ಸದನ ಆರಂಭವಾಗುವ ಮೊದಲೇ ಮುಖ್ಯಮಂತ್ರಿಗಳಿಗೆ ಬಿಜೆಪಿ ಆಗ್ರಹಿಸಿದೆ. ಬದಲಿಗೆ ಅವರದೇ ಸಮುದಾಯದವರನ್ನು ಬೇಕಿದ್ದರೆ ಸಚಿವರಾಗಿ ಮಾಡಿ. ರಾಜೀನಾಮೆ ಪಡೆಯುವರೆಗೆ ಸದನದ ಹೊರಗೆ ಮತ್ತು ಒಳಗೆ ಜೆಡಿಎಸ್ ಜೊತೆ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿಗಳು ನಾಗೇಂದ್ರ ಅವರ ರಾಜೀನಾಮೆ ಪಡೆದು ಪರಿಶಿಷ್ಟ ಪಂಗಡಕ್ಕೆ ನ್ಯಾಯ ನೀಡಬೇಕು.

ಮುಖಂಡ ಪ್ರಸಾದ್‌ಗೌಡ ಮಾತನಾಡಿ, ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು, ಕಳ್ಳನ ಕೈಗೆ ದೊಣ್ಣೆ ಕೊಟ್ಟು ಮನೆ ಕಾಯುವಂತೆ ನೇಮಕ ಮಾಡಿದಂತೆ ಆಗಿದೆ. ಸರ್ಕಾರಿ ಹಣವನ್ನು ಹೇಗೆ ಬೇಕಾದರೂ ಬಳಕೆ ಮಾಡಿಕೊಳ್ಳಬಹುದು ಎನ್ನುವುದನ್ನು ನಾಗೇಂದ್ರ ತೋರಿಸಿಕೊಟ್ಟಿದ್ದಾರೆ. ಇಂತವರಿಗೆ ಮಂತ್ರಿ ಮಾಡುತ್ತೇವೆ ಎನ್ನುವುದನ್ನು ಡಿ.ಕೆ.ಶಿವಕುಮಾರ್ ಸಾಬೀತು ಮಾಡಿದ್ದಾರೆ. ಕಚೇರಿಯಲ್ಲಿ ಯಾರಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ತಮಗೆ ಕರೆ ಮಾಡುವಂತೆ ಹೇಳಿದ್ದೀರಿ, ಈಗ ನಾವು ಯಾರಿಗೆ ಕರೆ ಮಾಡೋಣ ಎಂದು ವ್ಯಂಗವಾಡಿದರು.

ಈ ವೇಳೆ ಮುಖಂಡರಾ ಎಸ್.ಆರ್.ನಾಗರಾಜು, ಚಂದ್ರಶೇಖರ್, ಸುರೇಶ್, ಕಾಳಯ್ಯ, ರುದ್ರದೇವರು, ನಾಗೇಶ್ ಮುಂತಾದವರು ಇದ್ದರು.