ರಾಮನಗರ ಹುಣಸನಹಳ್ಳಿ ರಸ್ತೆಯಲ್ಲಿ ಬೈಕ್ ಸವಾರನಮೇಲೆ ಬೃಹತ್ ಗಾತ್ರದ ಹಸಿಮರ ಬಿದ್ದಿರುವುದು.
ರಾಮನಗರ: ಹುಣಸನಹಳ್ಳಿ ರಸ್ತೆ ಶಿಡ್ಲುಕಲ್ಲು ಬಳಿ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಾಗೋಹಳ್ಳಿಯ ಮರಿಸಿದ್ದೇಗೌಡ ಅವರ ಪುತ್ರ ಪ್ರಶಾಂತ್ (19) ಮೃತ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಸೋಮವಾರ ಬೆಳಗ್ಗೆ ನಾಗೋಹಳ್ಳಿಯಿಂದ ರಾಮನಗರದ ಕೊತ್ತೀಪುರಕ್ಕೆ ಹುಣಸನಹಳ್ಳಿ ಮಾರ್ಗವಾಗಿ ಬೈಕ್ನಲ್ಲಿ ಬರುತ್ತಿದ್ದಾಗ ಶಿಡ್ಲಕಲ್ಲು ಸಮೀಪ ರಸ್ತೆ ಪಕ್ಕದ ಬೃಹತ್ ಗಾತ್ರದ ಮರ ಬಿದ್ದಿದೆ. ಬೈಕ್ ಸಮೇತ ಮರದ ಕೆಳಗೆ ಪ್ರಶಾಂತ್ ಸಿಲುಕಿದ್ದ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮರ ತೆರವುಗೊಳಿಸಿ, ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದರು. ಮರಣೋತ್ತರ ಪರೀೆ ಬಳಿಕ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಸೋಮವಾರ ಸಂಜೆ ನಾಗೋಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಆಸ್ಪತ್ರೆ ಶವಾಗಾರದ ಮುಂದೆ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಇದೇ ರಸ್ತೆಯಲ್ಲಿ 11 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್ ಸಹ ಹಾದುಹೋಗಿತ್ತು. ಮರ ಬೀಳುತ್ತಲೇ ವಿದ್ಯುತ್ ಲೈನಿಗೆ ಮರದ ಕೊಂಬೆಗಳು ತಾಗಿ ವಿದ್ಯುತ್ ಸರಬರಾಜು ವ್ಯತ್ಯಯವಾಗಿದೆ. ಬೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸಿ ಲೈನ್ ಸಮಸ್ಯೆ ಬಗೆಹರಿಸಿ ವಿದ್ಯುತ್ ಸಂಪರ್ಕ ಸುಗಮಗೊಳಿಸಿದ್ದಾರೆ.