- ಪೌರ ಕಾರ್ಮಿಕರಿಗೆ ನಿಯಮ ಬಾಹಿರ ಹಣ ಬಿಡುಗಡೆ
- ಪೌರಾಯುಕ್ತೆ, ಸದಸ್ಯನ ವಿರುದ್ಧ ತನಿಖೆ
- ನಗರಾಭಿವೃದ್ಧಿ ಇಲಾಕೆಯಿಂದ ಆದೇಶ
- ಮೂವರು ಅಧಿಕಾರಿಗಳ ತಂಡ ರಚನೆ
ರಾಮನಗರ: ಬಿಡದಿ ಪುರಸಭೆಯ ಪೌರ ಕಾರ್ಮಿಕರಿಗೆ ವೇತನ ವ್ಯತ್ಯಾಸದ ಹಣ ಬಿಡುಗಡೆ ಮಾಡಿ ಲಂಚ ಪಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೌರಾಯುಕ್ತರಾದ ಮೀನಾಕ್ಷಿ ಎಂ. ಮತ್ತು ಪುರಸಭೆ ಸದಸ್ಯ ಉಮೇಶ್ ಸಿ ಅವರ ವಿರುದ್ಧ ತನಿಖೆ ನಡೆಸಲು ನಗರಾಭಿವೃದ್ಧಿ ಇಲಾಖೆ ತಂಡವನ್ನು ರಚಸಿ ಆದೇಶ ಹೊರಡಿಸಿದೆ.
ಬಿಡದಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಆದೇಶವೆಂದು ಹೇಳಿ 23 ಮಂದಿಗೆ ಒಟ್ಟು 18977786 ರೂಗಳನ್ನು ಪಾವತಿ ಮಾಡಲಾಗಿದೆ. ಹಣ ಬಿಡುಗಡೆಯಲ್ಲಿ ಪುರಸಭೆ ಆಯುಕ್ತರಾದ ಮೀನಾಕ್ಷಿ ಅವರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ವ್ಯತ್ಯಾಸದ ಹಣ ಬಿಡುಗಡೆಗಾಗಿ ಪುರಸಭೆ ಆಯುಕ್ತರು ಮತ್ತು ಸದಸ್ಯ ಉಮೇಶ್ ಸಿ ಅವರಿಗೆ ಬಿಡುಗಡೆಯಾದ ಹಣದಲ್ಲಿ ಶೇ.15ರಂದು ಹಣವನ್ನು ನೀಡಬೇಕು. ಇಲ್ಲವಾದರೆ ಹಣ ಬಿಡುಗಡೆ ವಿಳಂಭವಾಗುತ್ತದೆ ಎಂದು ಬಿಡದಿ ಪುರಸಭೆ ನೌಕರ ಶಿವಕುಮಾರ್ ಮತ್ತು ಇನ್ನೊಬ್ಬ ನೌಕರ ಸುರೇಶ್ ಎನ್ನುವರ ಪತ್ನಿ ನಡೆಸಿದ ಪೋನ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ. ನಂತರ ಈ ಸಂಬಂಧ ನೀರು ಗಂಟಿಗಳು ಸಹ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ.
ನ್ಯಾಯಾಲಯದ ಆದೇಶದ ಹೊರತಾಗಿಯೂ ಕೇವಲ 23 ಮಂದಿಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಕಾನೂನು ಬಾಹಿರವಾಗಿ ಬಿಡುಗಡೆ ಮಾಡಿರುವ ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ, ಅಮಾನತ್ತು ಮಾಡಬೇಕು. ಹಾಗೂ ಇವರೊಂದಿಗೆ ಶಾಮೀಲಾಗಿ ಅಕ್ರಮವೆಸಗಿರುವ ಸದಸ್ಯರಾದ ಉಮೇಶ್ ಸಿ ಅವರ ಸದಸ್ಯತ್ವವನ್ನು ಅರ್ಹಗೊಳಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಹಾಗೂ ಇತರೆ ಸದಸ್ಯರು ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತನಿಖಾ ತಂಡವನ್ನು ನೇಮಕ ಮಾಡಿ 2025 ರ ಡಿಸೆಂಬರ್ 31ರಂದೇ ನಗರಾಭಿವೃದ್ಧಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ತನಿಖಾ ತಂಡ
ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ -4 ಅದ ಡಾ.ನಾಗೇಂದ್ರ ಪ್ರಸಾದ್, ಅಧೀನ ಕಾರ್ಯದರ್ಶಿ ಲತಾ .ಕೆ ಮತ್ತು ಪೌರಾಢಳಿತ ನಿರ್ದೇಶನಾಲಯದ ಕೇಂದ್ರ ಸ್ಥಾನಿಕ ಸಹಾಯಕ ಅಮೀತ್ ತರದಾಳೆ ತನಿಖಾ ತಂಡದಲ್ಲಿದ್ದು. ಆದೇಶ ಹೊರಡಿಸಿದ 15 ದಿನಗಳ ಒಳಗಾಗಿ ದಾಖಲೆಗಳೊಂದಿಗೆ ತನಿಖಾ ವರದಿಯನ್ನು ನೀಡುವಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.