ರಾಮನಗರದ ಜಿಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಕೆ.ರಾಜು ಅಧ್ಯಕ್ಷಯಲ್ಲಿ ನಡೆಯಿತು.  
ಬೆಂಗಳೂರು ದಕ್ಷಿಣ

ಭಾರತ್ ಜೋಡೋ ಯುವ ಸಂಘ ಶೀಘ್ರ ರಚಿಸಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ಸೂಚನೆ
  • ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ

ರಾಮನಗರ

ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಗ್ರಾಮ ಪಂಚಾಯತ್ ಹಾಗೂ ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ಶೀಘ್ರವಾಗಿ ರಚಿಸಲು ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ಗ್ರಾಪಂನಲ್ಲಿ ಒಂದು ಸಂಘ, ಪ್ರತಿ ಪಪಂ ವ್ಯಾಪ್ತಿಯಲ್ಲಿ ಸರಾಸರಿ 4000 ಜನಸಂಖ್ಯೆಗೆ ಒಂದು ಸಂಘ, ಪ್ರತಿ ಪುರಸಭೆಯಲ್ಲಿ ಸರಾಸರಿ 6000 ಜನಸಂಖ್ಯೆಗೆ ಒಂದು ಸಂಘ, ಪ್ರತಿ ನಗರಸಭೆಯಲ್ಲಿ ಸರಾಸರಿ 8000 ಜನ ಸಂಖ್ಯೆಗೆ ಒಂದು ಸಂಘ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರಾಸರಿ 10000 ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಲು ಸ್ಥಾಪಿಸಲು ಸರ್ಕಾರವು ನಿರ್ದೇಶಿಸಿದೆ. ಅದರಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 127 ಗ್ರಾಪಂಗಳು, ಒಂದು ಪಪಂ, ಎರಡು ಪುರಸಭೆ ಹಾಗೂ ಮೂರು ನಗರಸಭೆ ವ್ಯಾಪ್ತಿಯಲ್ಲಿ ಸೇರಿ ಒಟ್ಟಾರೆ ಜಿಲ್ಲೆಯಲ್ಲಿ 179 ಭಾರತ್ ಜೋಡೊ ಯುವ ಸಂಘಗಳನ್ನು ಸ್ಥಾಪಿಸಲು ಅವಕಾಶವಿದೆ ಎಂದರು.

ಭಾರತ್ ಜೋಡೊ ಯುವ ಸಂಘದ ಸದಸ್ಯತ್ವ ಪ್ರಕ್ರಿಯೆ ಆರಂಭಗೊಂಡಿದ್ದು, ಜಿಲ್ಲೆಯ 16 ರಿಂದ 35 ವರ್ಷ ವಯಸ್ಸಿನ ಯುವಜನತೆ ನೋಂದಣಿ ಮಾಡಿಕೊಳ್ಳುವಂತೆ ಯುವ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವಂತೆ ತಿಳಿಸಿದರು.

ಬಿಜೆವೈಎಸ್ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಅಥವಾ ಗ್ರಾಪಂ ಹಾಗೂ ನಗರ ಪ್ರದೇಶಗಳಲ್ಲಿ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ನಾಗರಿಕ ಸೇವಾ ಕೇಂದ್ರಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ಸದಸ್ಯರ ನೋಂದಣಿಗೆ ಆಧಾರ್ ಕಡ್ಡಾಯವಾಗಿದೆ. ಒಂದು ಭಾರತ್ ಜೋಡೋ ಯುವ ಸಂಘ ಘಟಕ ರಚನೆಗೆ ಕನಿಷ್ಠ 100 ಯುವ ಸದಸ್ಯರಿರಬೇಕು. ಪ್ರತೀ ಸದಸ್ಯನಿಗೆ 10 ರೂ. ನೋಂದಣಿ ಶುಲ್ಕ ವಿಧಿಸಲಾಗುವುದು. ಪ್ರತಿ ಸಂಘವು ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ 1960ರಡಿಯಲ್ಲಿ ನೋಂದಾಯಿಸಲಾಗುವುದು. ಅರ್ಜಿದಾರರು ಅದೇ ಗ್ರಾಪಂ ಅಥವಾ ವಾರ್ಡಿನ ಸಾಮಾನ್ಯ ನಿವಾಸಿಯಾಗಿರಬೇಕು. ಒಬ್ಬರು ಒಂದು ಭಾರತ್ ಜೋಡೋ ಯುವ ಸಂಘದಲ್ಲಿ ಮಾತ್ರ ಸದಸ್ಯರಾಗಬಹುದು. ಪ್ರತೀ ಭಾರತ್ ಜೋಡೊ ಯುವ ಘಟಕವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ 15 ಜನ ಸದಸ್ಯರ ಆಂತರಿಕ ಕಾರ್ಯಕಾರಿ ಸಮಿತಿಯನ್ನು ಹೊಂದಿರಬೇಕು. ಒಬ್ಬರು ಅಧ್ಯಕ್ಷರು, ಒಬ್ಬರು ಉಪಾಧ್ಯಕ್ಷರು, ಒಬ್ಬರು ಖಜಾಂಚಿ ಮತ್ತು 12 ಜನ ಕಾರ್ಯಕಾರಿ ಸದಸ್ಯರಿರಬೇಕು. ಅಧ್ಯಕ್ಷರು ಅಥವಾ ಉಪಾಧ್ಯಕ್ಷರಲ್ಲಿ ಒಬ್ಬರು ಮಹಿಳೆಯರು ಕಡ್ಡಾಯವಾಗಿ ಇರಬೇಕು ಎಂದರು.

ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಹಣವನ್ನು ಹಿಂಪಡೆಯಲು ಜಿಲ್ಲೆಯ ಎಲ್ಲ ಬ್ಯಾಂಕುಗಳಿಗೆ ಸಂಬಂಧಿಸಿದ ಖಾತೆಗಳಲ್ಲಿರುವ ಹಣದ ಮಾಹಿತಿ ವಿವರವನ್ನು ಪಡೆದು ನೀಡುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ರಾಜು ನಿರ್ದೇಶನ ನೀಡಿದರು.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,31,975 ಮಂದಿ ನೋಂದಾಯಿಸಿಕೊಂಡಿದ್ದು, ಈ ಯೋಜನೆ ಪ್ರಾರಂಭವಾದಾಗಿನಿಂದ ಇದುವರೆಗೂ ಒಟ್ಟಾರೆ 450.85 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಶೇ.75 ಪೂರ್ಣಗೊಂಡಿದೆ ಎಂದರು.

ಪಡಿತರ ಚೀಟಿಗಳನ್ನು ಪರಿವರ್ತಿಸುವ ಸಂದ‘ರ್ದಲ್ಲಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಬೇಕು, ಅರ್ಹ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ವಹಿಸಬೇಕು. ಜಿಲ್ಲೆಯ 357 ಎಪಿಎಲ್ ಪಡಿತರ ಚೀಟಿಗಳನ್ನು ಬಿಪಿಎಲ್‌ಗೆ ಪರಿವರ್ತಿಸಲಾಗಿದೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಮಹದೇಶ್, ಎಸ್.ಸಿ. ಶೇಖರ್, ರಾಜು ವಿ.ಎಚ್., ಬೆಳ್ಳಿಯಪ್ಪ, ಶಿವಮಾದಯ್ಯ, ಸ್ವಾಮಿ, ಮಹದೇವ್, ರಮೇಶ್, ವನಜಾ, ಶೋಭಾ‘, ಕಾಳಮ್ಮ, ಜಿಪಂ ಸಿಇಓ ಅನ್ಮೋಲ್ ಜೈನ್, ಉಪಕಾರ್ಯದರ್ಶಿ ಧನರಾಜ್ ಮುಂತಾದವರು ಇದ್ದರು.

ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಕುಣಿಗಲ್‌ನಿಂದ ಮಾಗಡಿಗೆ, ಹುಲಿಯೂರು ದುರ್ಗದಿಂದ ಮಾಗಡಿಗೆ ಹಾಗೂ ಚನ್ನಪಟ್ಟಣದಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುವಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಸಭೆಯಲ್ಲಿ ಅಧ್ಯಕ್ಷರ ಗಮನಕ್ಕೆ ತಂದರು. ಜನದಟ್ಟಣೆ ಹೆಚ್ಚಿರುವ ಸಂದ‘ರ್ದಲ್ಲಿ ಪ್ರಯಾಣಿಕರಿಗೆ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಅವಶ್ಯವಿರುವ ಗ್ರಾಮಗಳಿಗೆ ಬಸ್ ವ್ಯವಸ್ಥೆ ಹಾಗೂ ಜನದಟ್ಟಣೆ ಸಮಯದಲ್ಲಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು, ಜಿಲ್ಲೆಯ ಆಯಾ ಡಿಪೋ ಮ್ಯಾನೇಜರ್‌ಗಳು ಪ್ರಯಾಣಿಕರ ದಟ್ಟಣೆಯ ಅವಧಿಯಲ್ಲಿ ಕಡ್ಡಾಯವಾಗಿ ಖುದ್ದು ಹಾಜರಾಗಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ಜನರಿಗೆ ಅನುಕೂಲವಾಗುವಂತೆ ಅವಶ್ಯಕತೆಯಿದ್ದಲ್ಲಿ ಹೆಚ್ಚುವರಿ ವಾಹನಗಳನ್ನು ಕಾರ್ಯ ನಿರ್ವಹಿಸುವಂತೆ ಸಮಿತಿ ಅಧ್ಯಕ್ಷ ಕೆ. ರಾಜು ಸೂಚಿಸಿದರು.