- ಮಾಗಡಿಯಲ್ಲಿ ದುರ್ಘಟನೆ
- ವಿದ್ಯಾರ್ಥಿನಿ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ
- ಪೊಲೀಸರಿಂದ ಆರೋಪಿಗಳ ಬಂಧನ
ರಾಮನಗರ: ಪ್ರೀತಿ ಹೆಸರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ ಸಹಪಾಠಿ, ನಂತರ ಆಕೆಯನ್ನು ಬ್ಲಾಕ್ಮೇಲ್ ಮಾಡಿ ತನ್ನಿಬ್ಬರು ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಾಗಡಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಾಗಡಿ ಪಟ್ಟಣದ ಯುವಕರಾದ ವಿಕಾಸ್ (25), ಪ್ರಶಾಂತ್ (19) ಹಾಗೂ ಚೇತನ್ನನ್ನು (28) ಬಂಧಿಸಿದ್ದಾರೆ. ಆರೋಪಿಗಳ ಪೈಕಿ ವಿಕಾಸ್ ಮತ್ತು ಪ್ರಶಾಂತ್ ಸಹ ಪದವಿ ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬ ಆರೋಪಿ ಚೇತನ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿತ್ತಿದ್ಧ ವಿವಾಹಿತ.
ಘಟನೆಯಲ್ಲಿ ನೊಂದಿರುವ ವಿದ್ಯಾರ್ಥಿನಿ ಮಾಗಡಿ ಪಟ್ಟಣದವಳೇ ಆಗಿದ್ದು, ಬೆಂಗಳೂರಿನಲ್ಲಿ ಕಾಲೇಜೊಂದರಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಯನ್ನು ಪರಿಚಯ ಮಾಡಿಕೊಂಡ ವಿಕಾಸ್, ಪ್ರೀತಿಯ ನಾಟಕವಾಡಿದ್ದ. ಈ ಮೂಲಕವೇ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡು, ಆಪ್ತ ಸಮಯವನ್ನು ಆಕೆಗೆ ಗೊತ್ತಾಗದಂತೆ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದರು.
ಬಳಿಕ ವಿಕಾಸ್, ವಿದ್ಯಾರ್ಥಿನಿಗೆ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಕಳಿಸಿ ಬ್ಲಾಕ್ಮೇಲ್ ಮಾಡತೊಡಗಿದ. ತನ್ನಿಬ್ಬರ ಸ್ನೇಹಿತರ ಜೊತೆಗೂ ಸಹಕರಿಸಬೇಕು. ಇಲ್ಲದಿದ್ದರೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸುತ್ತಿದ್ದ. ವಿದ್ಯಾರ್ಥಿನಿ ಎಷ್ಟೇ ಬೇಡಿಕೊಂಡರೂ ಆರೋಪಿ ಸುಮ್ಮನಾಗದೆ ತನ್ನ ಚಾಳಿ ಮುಂದುವರಿಸಿದ್ದ.
ವಿಡಿಯೊ ಬಹಿರಂಗವಾದರೆ ತನ್ನ ಮತ್ತು ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ಭಯಗೊಂಡ ವಿದ್ಯಾರ್ಥಿನಿ, ಕಡೆಗೆ ಆರೋಪಿಗಳಿದ್ದ ಸ್ಥಳಕ್ಕೆ ಹೋಗಿ ವಿಡಿಯೊ ಡೆಲಿಟ್ ಮಾಡುವಂತೆ ಕೋರಿದ್ದರು. ಈ ವೇಳೆ ಆರೋಪಿಗಳು ಆಕೆಯ ಅಸಹಾಯಕತೆ ದುರುಪಯೋಗಪಡಿಸಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿ, ಆಗಲೂ ವಿಡಿಯೊ ಮಾಡಿಕೊಂಡಿದ್ದರು.
ವಿಡಿಯೊ ಹರಿಬಿಟ್ಟ: ಕೃತ್ಯದ ಬಳಿಕವೂ ಆರೋಪಿಗಳು ವಿದ್ಯಾರ್ಥಿನಿಗೆ ಬ್ಲಾಕ್ಮೇಲ್ ಮಾಡುವುದನ್ನು ಮುಂದುವರಿಸಿದ್ದರು. ಕೆಲ ದಿನಗಳ ಹಿಂದೆ ಪ್ರಮುಖ ಆರೋಪಿ ವಿಕಾಸ್, ಇನ್ಸ್ಟಾಗ್ರಾಂನಲ್ಲಿ ಕೃತ್ಯದ ವಿಡಿಯೊ ಹರಿಬಿಟ್ಟಿದ್ದ. ವಿಷಯ ಗೊತ್ತಾಗುತ್ತಿದ್ದಂತೆ ವಿದ್ಯಾರ್ಥಿನಿ, ಆರೋಪಿಗಳು ತನಗೆ ಬ್ಲಾಕ್ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದನ್ನು ಕುಟುಂಬದವರಿಗೆ ತಿಳಿಸಿದ್ದಾರೆ.
ಕುಟುಂಬದವರು ರಾಮನಗರದಲ್ಲಿ ಎಸ್ಪಿಯನ್ನು ಬುಧವಾರ ಭೇಟಿ ಮಾಡಿ ದೂರು ಕೊಟ್ಟಿದ್ದರು. ವರಿಷ್ಠಾಧಿಕಾರಿ ಅವರ ಸೂಚನೆ ಮೇರೆಗೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಯಿತು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.
ವಿದ್ಯಾರ್ಥಿನಿ ನನ್ನನ್ನು ಭೇಟಿ ಮಾಡಿ ದೂರಿ ನೀಡಿದ ತಕ್ಷಣವೇ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಕೆಲವೇ ತಾಸಿನಲ್ಲಿ ಮೂವರೂ ಯುವಕರನ್ನು ಸಿಪಿಐ ಗಿರಿರಾಜ್ ನೇತೃತ್ವದ ತಂಡ ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಆರ್. ಶ್ರೀನಿವಾಸ್ ಗೌಡ, ಎಸ್ ಪಿ ಬೆಂ.ದಕ್ಷಿಣ