ಮಾಗಡಿ: ತಾಲೂಕಿನ ಬೆಸ್ತರಪಾಳ್ಯ ಬಳಿ ಮಂಗಳವಾರ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಿಇಎಲ್ ಸಂಸ್ಥೆಯ ಉದ್ಯೋಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ತುಮಕೂರು ತಾಲೂಕಿನ ಆಲ್ನೂರಿನ ಪವನ್ (24) ಮೃತ. ನಾಲ್ವರು ಸ್ನೇಹಿತರು ಊರ ಹಬ್ಬಕ್ಕೆಂದು ತೆರಳುತ್ತಿದ್ದಾಗ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಬೆಸ್ತರಪಾಳ್ಯದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಪವನ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೆಲ್ಲರೂ ಬೆಂಗಳೂರು ಮೂಲದವರಾಗಿದ್ದಾರೆ ಎನ್ನಲಾಗಿದೆ.
ಮೃತ ಪವನ್ ಒಂದು ವರ್ಷದ ಹಿಂದೆಯಷ್ಟೇ ಬಿಇಎಲ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಅವಿವಾಹಿತರಾಗಿದ್ದ ಪವನ್ ಬಗ್ಗೆ ತಾಯಿ ಸಾಲು ಸಾಲು ಕನಸು ಕಂಡಿದ್ದರು. ಒಂದು ದಿನದ ಹಿಂದೆಯಷ್ಟೇ 3 ಲ ರೂ. ಮೌಲ್ಯದ ಹೊಸ ಬೈಕನ್ನು ಮಗನಿಗಾಗಿ ಖರೀದಿಸಿದ್ದರು. ಆದರೆ, ಬೈಕ್ ಏರಿ ಸಂಭ್ರಮಿಸುವ ಮೊದಲೇ ವಿಧಿಯಾಟ ಬೇರೆಯೇ ಆಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪವನ್ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಟನಾ ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.