ರಾಮನಗರ ತಾಲೂಕು ಮಟಕಯ್ಯನದೊಡ್ಡಿ ಈರಮ್ಮ ಅವರ ಆರೋಗ್ಯವನ್ನು ಡಿಸಿಎಫ್ ಎಂ.ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ವಿಚಾರಿಸಿದರು.
ರಾಮನಗರ: ತಾಲೂಕಿನ ಲಕ್ಷ್ಮೀಪುರ ಬಳಿ ಸೋಮವಾರ ಕರಡಿ ದಾಳಿಯಿಂದ ವೃದ್ಧೆ ಗಂಭೀರ ಗಾಯಗೊಂಡಿದ್ದಾರೆ.
ಮಟಕಯ್ಯನದೊಡ್ಡಿಯ ಈರಮ್ಮ(75) ಕರಡಿ ದಾಳಿಗೆ ಒಳಗಾದವರು.
ಸೋಮವಾರ ಬೆಳಗಿನ ಜಾವ ಮಟಕಯ್ಯನದೊಡ್ಡಿಗೆ ನಡೆದು ಹೋಗುವಾಗ ಲಕ್ಷ್ಮೀಪುರ ಸಮೀಪದಲ್ಲಿ ರಸ್ತೆ ಪಕ್ಕದ ಪೊದೆಯಿಂದ ಬಂದ ಕರಡಿ ಈರಮ್ಮ ಮೇಲೆ ಏಕಾಏಕಿ ಎರಗಿದೆ. ಕಣ್ಣುಕಿತ್ತು, ತಲೆ, ಭುಜಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ನಿತ್ರಾಣಗೊಂಡ ಈರಮ್ಮ ರಸ್ತೆಯಲ್ಲೇ ಬಿದ್ದಿದ್ದರು. ಕೆಲಹೊತ್ತಿನ ಬಳಿಕ ಲಕ್ಷ್ಮೀಪುರ ಮಾರ್ಗವಾಗಿ ಬಂದ ವ್ಯಕ್ತಿ ಈರಮ್ಮ ಅವರನ್ನು ಕಂಡು, ಕುಟುಂಬಕ್ಕೆ ಮಾಹಿತಿ ತಿಳಿಸಿದ್ದಾರೆ. ಈರಮ್ಮ ಅವರಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಕರಡಿ ದಾಳಿಗೆ ಈರಮ್ಮ ಅವರ ಒಂದು ಕಣ್ಣು ಸಂಪೂರ್ಣ ಹಾನಿಯಾಗಿದ್ದು, ಸರಿಯಾಗುವುದು ಕಷ್ಟ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ ಎಂದು ಗಾಯಾಳುವಿನ ಕುಟುಂಬದವರು ತಿಳಿಸಿದ್ದು, ತಲೆ, ಭುಜದ ಭಾಗಕ್ಕೆ ಶಸ ಚಿಕಿತ್ಸೆ ಮಾಡಲಾಗಿದೆ ಎನ್ನಲಾಗಿದೆ.
ಚಿಕಿತ್ಸಾ ವೆಚ್ಚ ಭರಿಸುವ ಭರವಸೆ
ಕರಡಿ ದಾಳಿ ವಿಷಯ ತಿಳಿಯುತ್ತಲೇ ಡಿಸಿಎಫ್ ಎಂ.ರಾಮಕೃಷ್ಣಪ್ಪ, ಎಸಿಎಫ್ ಪುಟ್ಟಮ್ಮ, ವಲಯ ಅರಣ್ಯಾಧಿಕಾರಿ ಮನ್ಸೂರ್ ಅಹ್ಮದ್, ಉಪ ವಲಯ ಅರಣ್ಯಾಧಿಕಾರಿ ಮಿಥುನ್ ಆಸ್ಪತ್ರೆಗೆ ಭೇಟಿ ನೀಡಿ ಈರಮ್ಮ ಅವರ ಆರೋಗ್ಯ ವಿಚಾರಿಸಿದರಲ್ಲದೇ ಗಾಯಾಳುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇಲಾಖೆಯಿಂದ ಭರಿಸುವುದಾಗಿ ಕುಟುಂಬದವರಿಗೆ ಭರವಸೆ ನೀಡಿದರು.
ಲ್ಮಪುರ&ಮಟಕಯ್ಯನದೊಡ್ಡಿ ಮಧ್ಯೆ 2 ಕಿಮೀ ಅಂತರವಿದ್ದು, ಎರಡೂ ಗ್ರಾಮಗಳ ಸಮೀಪದ ಅರಣ್ಯದಲ್ಲಿ ಚಿರತೆ, ಕರಡಿಗಳು ಹೆಚ್ಚಿವೆ. ಜನ ಕತ್ತಲು, ಬೆಳಗಿನ ಜಾವದಲ್ಲಿ ಒಬ್ಬೊಬ್ಬರೇ ಓಡಾಡುವುದು ಬೇಡ. ಆದಷ್ಟು ಬೆಳಕಾದ ನಂತರ ಗುಂಪುಗುಂಪಾಗಿ ಸಂಚರಿಸುವುದು ಸೂಕ್ತ