ಕರಡಿ ದಾಳಿಯಿಂದ ಚಿಕಿತ್ಸೆ ಪಡೆಯುತ್ತಿರುವ ರೈತ
ಚನ್ನಪಟ್ಟಣ: ತಾಲೂಕಿನಲ್ಲಿ ಇದುವರೆಗೂ ಕಾಡಾನೆಯಾಯ್ತು... ಚಿರತೆಯಾಯ್ತು... ಇದೀಗ ಕರಡಿ ತಲೆನೋವು ಎದುರಾಗಿದೆ.
ತಾಲೂಕಿನ ಲಂಬಾಣಿತಾಂಡ್ಯದ ರಮೇಶ್ ಬುಧವಾರ ಜಮೀನಿನಲ್ಲಿ ಮುಸುಕಿನಜೋಳ ಕಟಾವು ಮಾಡುತ್ತಿದ್ದಾಗ ಕರಡಿ ಏಕಾಏಕಿ ದಾಳಿ ಮಾಡಿ, ರೈತನ ತೊಡೆ ಭಾಗವನ್ನು ತೀವ್ರ ಗಾಯಗೊಳಿಸಿದೆ. ಸದ್ಯ ರಮೇಶ್ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ಉಪ ಅರಣ್ಯ ಸಂರಣಾಧಿಕಾರಿ ರಾಮಕೃಷ್ಣಪ್ಪ, ಸಹಾಯಕ ಅರಣ್ಯ ಸಂರಣಾಧಿಕಾರಿ ಪುಟ್ಟಮ್ಮ, ವಲಯ ಅರಣ್ಯ ಅಧಿಕಾರಿ ಮಲ್ಲೆಶ್, ಉಪ ವಲಯ ಅರಣ್ಯ ಅಧಿಕಾರಿ ಅಶೋಕ್ ಭೇಟಿ ನೀಡಿ ಗಾಯಳುವಿಗೆ ಸಾಂತ್ವನ ಹೇಳಿ ಚಿಕಿತ್ಸೆ ವೆಚ್ಚ ಬರಿಸುವ ಭರವಸೆ ನೀಡಿದ್ದಾರೆ. ದಾಳಿಯ ವೇಳೆ ಎರಡು ಕರಡಿಗಳಿದ್ದವು ಎನ್ನಲಾಗಿದೆ.
ಕಳೆದ ಒಂದೂವರೆ ದಶಕಗಳಿಂದ ಕಾಡಾನೆಗಳ ಸಮಸ್ಯೆ ಮಾಮೂಲಿ ಎನಿಸಿದೆ. ಈ ಮಧ್ಯೆ ಚಿರತೆಗಳ ಉಪಟಳವೂ ಜೋರಾಗಿದೆ. ಇದೀಗ, ಕಾಡಾನೆಗಳು ಹಾಗೂ ಚಿರತೆಗಳ ಮಧ್ಯೆ ಕರಡಿಗಳ ಕಾಟವೂ ಜೋರಾಗಿದೆ. ಹಾಡಹಗಲೇ ಕಾಣಿಸಿಕೊಳ್ಳುತ್ತಿರುವ ಕರಡಿಗಳು ಜನರಲ್ಲಿ ಭೀತಿ ಉಂಟು ಮಾಡಿವೆ.
ರೇಬೀಸ್ ಸೋಂಕಿತ ಕರಡಿ ಪುಂಡಾಟ ನಡೆಸಿತ್ತು!
ಇತ್ತೀಚೆಗೆ ತಾಲೂಕಿನ ಸಿಂಗರಾಜಪುರ ಹಾಗೂ ಕೋಡಂಬಳ್ಳಿ ರಸ್ತೆಯಲ್ಲಿ ವೃದ್ಧ ಕರಡಿಯೊಂದು ಪುಂಡಾಟ ಮೆರೆದಿತ್ತು. ರಸ್ತೆಯಲ್ಲಿ ಹೋಗುವ ವಾಹನಗಳನ್ನು ಅಡ್ಡಗಟ್ಟಿ ದಾಳಿಗೆ ಉತ್ನಿಸಿತ್ತು. ಅಂತಿಮವಾಗಿ ಕರಡಿಯನ್ನು ಸೆರೆ ಹಿಡಿಯಲಾಗಿತ್ತಾದರೂ ಸೆರೆ ಹಿಡಿದ ಮರುದಿನವೇ ಈ ಕರಡಿಗೆ ಮಾರಕ ರೇಬೀಸ್ ರೋಗವಿರುವುದು ದೃಢಪಟ್ಟಿತ್ತು. ಸದ್ಯ ಕರಡಿ ಮೃತಪಟ್ಟಿದೆಯಾದರೂ ಕರಡಿ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಆತಂಕ ಮೂಡಿಸಿದೆ.