ಚನ್ನಪಟ್ಟಣ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ವಾಸಿಲ್​ ಆಲಿ ಖಾನ್​, ಪೌರಾಯುಕ್ತ ಮಹೇಂದ್ರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್​.ಆರ್​.ಪ್ರಮೋದ್​, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಂಗನಾಥ್​, ಜಿಲ್ಲಾ ಉಪಾಧ್ಯಕ್ಷ ಎಸ್​.ಸಿ.ಶೇಖರ್​, ತಾಪಂ ಇಒ ಸಂದೀಪ್​, ಕ್ಷೇತ್ರ ಸಮನ್ವಯಾಧಿಕಾರಿ ಸಿ.ರಾಜಶೇಖರ್​ ಇದ್ದರು. 
ಬೆಂಗಳೂರು ದಕ್ಷಿಣ

ನವೆಂಬರ್​ ತಿಂಗಳಿಗೆ ಸೀಮಿತರಾಗದೆ ಅನುದಿನ ಕನ್ನಡಿಗರಾಗಿ Be a kannadigas every day

ಚನ್ನಪಟ್ಟಣ: ಕನ್ನಡದ ವಿಶಿಷ್ಟತೆಗಳಿಗೆ ಆರಂಭ, ಕೊನೆ ಇಲ್ಲ. ಅ ಕಾರದಿಂದಲೇ ಕನ್ನಡ ಭಾಷೆಯ ಬಗೆಗಿನ ಅಭಿಮಾನ ನಿರಂತರತೆ ಕಾಯ್ದುಕೊಂಡಿದೆ ಎಂದು ತಹಸೀಲ್ದಾರ್​ ಬಿ.ಎನ್​.ಗಿರೀಶ್​ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶನಿವಾರ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 
ಕನ್ನಡ ನಾಡಿನ ಏಕೀಕರಣಕ್ಕಾಗಿ ದುಡಿದ ಮಹನಿಯರ ಶ್ರಮವನ್ನು ಸಾರ್ಥಕಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಕನ್ನಡದ ಕಾರ್ಯಕ್ರಮಗಳು ವಿಶ್ವದ ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲ್ಪಡುತ್ತವೆ. ಕನ್ನಡಿಗರ ಸಂಘಟನಾ ಶಕ್ತಿ, ಮಾತೃಭಾಷೆ ಬಗೆಗಿನ ವ್ಯಾಮೋಹವು ಕನ್ನಡದ ಧೀಮಂತಿಕೆಗೆ ಸಾಕ್ಷಿ ಎಂದರು.
ಹಿರಿಯ ಚೇತನಗಳ ತ್ಯಾಗ ಪರಿಶ್ರಮದಿಂದ ಅಖಂಡ ಕರ್ನಾಟಕ ರೂಪುಗೊಂಡು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿದೆ. ಇಡೀ ದೇಶಕ್ಕೆ ಕರ್ನಾಟಕ ರಾಜ್ಯ ಮಾದರಿಯಾಗಿದೆ. ನಾವು ನವೆಂಬರ್​ ಕನ್ನಡಿಗರಾದೇ ಅನುದಿನವೂ ಕನ್ನಡಿಗರಾಗಬೇಕು. ಕನ್ನಡ ನಾಡು, ಭಾಷೆ, ನೆಲ&ಜಲದ ಬಗ್ಗೆ ಪ್ರೀತಿ ಅಭಿಮಾನ ಬೆಳೆಸಿಕೊಂಡು, ನಡೆ&ನುಡಿ, ಕಾರ್ಯದಲ್ಲಿ ಕನ್ನಡತನವನ್ನು ತೋರಿ, ಅನ್ಯ ಭಾಷಿಗರೊಂದಿಗೆ ಕನ್ನಡದಲ್ಲೇ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸೋಣ ಎಂದರು.

ಪ್ರಾಥಮಿಕ ಶಿಕ್ಷಣದಿಂದಲೇ ಮಾತೃಭಾಷೆ ಕಡ್ಡಾಯವಾಗಲಿ

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಇಂದ್ರಮ್ಮ ಮಾತನಾಡಿ, ಕನ್ನಡ ಭಾಷೆ ಶ್ರೀಮಂತವಾಗಿದೆ. ನಾಡಿನ ಪ್ರತಿಯೊಬ್ಬರೂ ಕನ್ನಡವನ್ನು ಅಂತರಂಗದ ಭಾಷೆಯಾಗಿ ಸ್ವೀಕರಿಸಬೇಕು. ಶಿಕ್ಷಣ, ಆಡಳಿತದಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸಿದಾಗ ಮಾತ್ರ ನಾಡ ಭಾಷೆ ಉಳಿಯಲು- ಸಾಧ್ಯ ಎಂದರು. ಕನ್ನಡ ಭಾಷೆಗೆ 8 ಜ್ಞಾನ ಪೀಠ ಪ್ರಶಸ್ತಿಗಳು ಸಂದಿವೆ. ದೇಶದಲ್ಲಿ 3ನೇ ಶಾಸ್ತ್ರೀಯ ಸ್ಥಾನಮಾನ ದೊರಕಿದೆ. ಕನ್ನಡ ಸಂಪೂರ್ಣ ಅನುಷ್ಠಾನಕ್ಕೆ ಬರಬೇಕು ಎಂದು ನೂರಾರು ಸರ್ಕಾರಿ ಆದೇಶಗಳು ಬಂದರೂ ಸಹ ಇಂದಿಗೂ ಕನ್ನಡ ಆಡಳಿತ ಭಾಷೆಯಾಗಲು ಪರಿತಪಿಸುವಂತಾಗಿದೆ. ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು. ದಿನನಿತ್ಯ ಕನ್ನಡ ಮಾತನಾಡಬೇಕು ಎಂದು ಕರೆನೀಡಿದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರ್​.ಸೋನಿಯಾ (ಆರೋಗ್ಯ ಇಲಾಖೆ), ಭೂಹಳ್ಳಿ ಶಿವಲಿಂಗಮ್ಮ (ಅಂಗನವಾಡಿ ಕಾರ್ಯಕರ್ತೆ), ಅರುಣಾ(ಪ್ರಾಂಶುಪಾಲರು), ಎಂ.ಆರ್​.ಕೀರ್ತನಾ ರಾಜು(ಶಿಕ್ಷಣ), ಎ.ಟಿ. ವೆಂಕಟೇಶ್​ಪ್ರಭು (ಮಾಧ್ಯಮ), ಜಗದೀಶ್​ (ಸುಳ್ಳೇರಿ ಪಿಡಿಒ), ಮಧುರಾ (ಹಿಂ.ವರ್ಗ ಇಲಾಖೆ), ಕೆ.ಎಸ್​.ಮಂಜುನಾಥ್​ (ಪೊಲೀಸ್​ ಇಲಾಖೆ), ಎನ್​.ಯೋಗೇಶ್​ಕುಮಾರ್​ (ಸಾಹಿತ್ಯ), ನಾಗೇಶ್​ (ಬೆಸ್ಕಾಂ),  ಕೋಡಂಬಹಳ್ಳಿ ಸಾಕಮ್ಮ (ಬಿಸಿಯೂಟ), ನಂಜೇಗೌಡ (ಕೃಷಿ), ರಮ್ಯಾ(ಕಂದಾಯ), ಎ.ಎಸ್​.ಪ್ರೇಮಾ, ಎನ್​. ಮೋಕ್ಷಜ್ಞ, ಸೇರಿ ಮತ್ತಿತಿರ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.