ಹಾರೋಹಳ್ಳಿ ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಕೆಂಪೇಗೌಡ ಜಯಂತಿ ಆಚರಣೆಯಲ್ಲಿ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಹಾರೋಹಳ್ಳಿ: ಕೆಂಪೇಗೌಡರ ಮುಂದಾಲೋಚನೆಯಿಂದಾಗಿ ಬೆಂಗಳೂರು ವಿಶ್ವದಲ್ಲಿಯೇ ಮನ್ನಣೆ ಪಡೆದ ನಗರವಾಗಿದೆ ಎಂದು ತಹಸೀಲ್ದಾರ್ ಹರ್ಷವರ್ಧನ್ ತಿಳಿಸಿದರು.
ತಾಲೂಕು ಆಡಳಿತ ಹಾಗೂ ವಿವಿಧ ಸಂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯತೆ ವಹಿಸಿ ಮಾತನಾಡಿದ ಅವರು, ಕೆಂಪೇಗೌಡ ರಂತಹ ಮಹಾನ್ ನಾಯಕರ ಶಿಸ್ತನ್ನು ನಾವು ರೂಢಿಸಿಕೊಳ್ಳಬೇಕಿದೆ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾಬಾಯಿ ಮಾತನಾಡಿ, 500 ವರ್ಷಗಳ ಹಿಂದೆಯೇ ಅವರ ದೂರ ದೃಷ್ಟಿಯಿಂದಾಗಿ ಬೆಂಗಳೂರು ಪಟ್ಟಣವನ್ನು ನಾಲ್ಕು ವಿಭಾಗವಾಗಿ ವಿಂಗಡಿಸಿ ಅಭಿವೃದ್ಧಿಗೆ ತಳಪಾಯ ಹಾಕಿದವರು. ಒಂದು ಪಟ್ಟಣ ಅಭಿವೃದ್ಧಿಯಾಗಬೇಕಾದರೆ ಯಾವ ಸವಲತ್ತು ಬೇಕು ಎನ್ನುವುದನ್ನು ಅರಿತು ಪೇಟೆಗಳನ್ನು ನಿರ್ಮಾಣ ಮಾಡಿದವರು. ಜತೆಗೆ ಸುತ್ತಲೂ ಕೆರೆಗಳನ್ನು ನಿರ್ಮಾಣ ಮಾಡಿ ಅಭಿವೃದ್ಧಿಗೆ ನಾಂದಿ ಹಾಡಿದವರು ಎಂದು ಹೇಳಿದರು.
ಹಾರೋಹಳ್ಳಿ ಠಾಣೆ ಇನ್ಸ್ಪೆಕ್ಟರ್ ಮಲ್ಲೆಶ್ ಮಾತನಾಡಿ, ದೂರ ದೃಷ್ಟಿಯುಳ್ಳ ಮಹಾನ್ ವ್ಯಕ್ತಿ ಕೆಂಪೇಗೌಡರು. ಅವರು ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವು ಸಾಗಬೇಕಿದೆ ಎಂದರು. ಪಟ್ಟಣದ ಕೋಟೆ ವೀರಾಂಜನೇಯ ಸ್ವಾಮಿ ದೇವಸ್ಥಾನದಿಂದ ಕೆಂಪೇಗೌಡರ ಭಾವಚಿತ್ರವನ್ನು ತಮಟೆ, ನಗಾರಿ, ವೀರಗಾಸೆ, ಡೊಳ್ಳು ಕುಣಿತ, ಪಟ್ಟದ ಕುಣಿತ, ಕೇರಳದ ಚಂಡೆ, ಬೊಂಬೆ ಕುಣಿತ ಸೇರಿ ವಿವಿಧ ಸಾಂಸತಿಕ ಕಲಾತಂಡಗಳೊಂದಿಗೆ ಪಟ್ಟಣದ ಬಸ್ ನಿಲ್ದಾಣದವರೆಗೆ ಸಾವಿರಾರು ಮುಖಂಡರೊಂದಿಗೆ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ಕೆಂಪೇಗೌಡರ ಪ್ರತಿಮೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮುಖಂಡರು ಪುಷ್ಪ ನಮನ ಅರ್ಪಿಸಿದರು.
ನಾಡಪ್ರಭು ಕೆಂಪೇಗೌಡರ ವೇಷಧಾರಿಯನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಲಾಯಿತು.