ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕುಟುಂಬದೊಂದಿಗೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಶನಿವಾರ ಪಾಲ್ಗೊಂಡರು. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ರೇವತಿ ನಿಖಿಲ್ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗಿಯಾಗಿದ್ದರು.
ಬಿಡದಿ: ಎಸ್ಐಆರ್ ವಿಚಾರದಲ್ಲಿ ಈಗಾಗಲೇ ರಾಜ್ಯ ಸರ್ಕಾರದ ನಡವಳಿಕೆ ಗೊತ್ತಾಗಿದೆ. ಪ್ರಾಮಾಣಿಕವಾಗಿ ಆಗಬೇಕಿದ್ದ ನಿಯಮಾವಳಿ ಗಾಳಿಗೆ ತೂರಲಾಗಿದೆ. ಛತ್ರದಲ್ಲಿ, ಸಂತೆ ಮೈದಾನದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ರಾಜ್ಯ ಸರ್ಕಾರಿ ನೌಕರರಿಗೆ ಎಸ್ಐಆರ್ ಜವಾಬ್ದಾರಿ ನೀಡಲಾಗಿದೆ. ಆದರೆ, ಎಸ್ಐಆರ್ ವಿಚಾರದಲ್ಲಿ ದೇಶಗಳಲ್ಲಿ ವಿರೋಧ ಪದ ಪರವಾದ ಮತಗಳನ್ನು ಡಿಲೀಟ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡುತಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ? ಚುನಾವಣಾ ಆಯೋಗದ ಸೂಚನೆಯಂತೆ ಕೆಲಸ ಮಾಡಬೇಕಾದ ಅಧಿಕಾರಿಗಳು ಮನೆಮನೆಗೆ ಹೋಗದೇ ಎಲ್ಲೋ ಒಂದುಕಡೆ ಕೂತು ಎಸ್ಐಆರ್ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ನಕಲಿ ಮತದಾರರನ್ನು ಸೃಷ್ಟಿಸಲು ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಎಸ್ಐಆರ್ ಬಗ್ಗೆ ಕಾಂಗ್ರೆಸ್ ನಾಯಕರು ಕೆದಕಿ ಮಾತನಾಡುತ್ತಿದ್ದರು. ಈಗ ರಾಜ್ಯದ ವಿಚಾರದಲ್ಲಿ ಗೃಹ ಸಚಿವರು ಏಕೆ ಮೌನಕ್ಕೆ ಶರಣಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಅಕ್ರಮ ನಡೆಯುತ್ತಿದ್ದರೂ ಜಾಣ ಕುರುಡು ತೋರುತ್ತಿದ್ದಾರೆ ಎಂದು ಗೃಹ ಸಚಿವರಿಗೆ ಟಾಂಗ್ ನೀಡಿದರು.
ಎಸ್ಐಆರ್ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಂದಲೇ ವೈಫಲ್ಯ ಆಗುತ್ತಿದೆ. ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇನ್ನು 3&4 ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಈ ಬಗ್ಗೆ ದೂರು ನೀಡುವುದಾಗಿ ತಿಳಿಸಿದರು.
ಕನಕಪುರದ ಜೀನ್ಸ್ ವಿದೇಶಕ್ಕೂ ಹೋಗುತ್ತೆ:
ನಾನು ಡಾಕ್ಟರ್ ಅಲ್ಲ, ಆ ಕುಟುಂಬದ ಜೀನ್ಸ್ ಕನಕಪುರದಿಂದ ವಿದೇಶಕ್ಕೂ ಹೋಗುತ್ತೆ. ಆರ್.ಟಿ.ಲಕ್ಷ$ಣ್ ಎಂಬುವವರ ಮಗಳನ್ನು ಬೀದಿಗೆ ತಂದರಲ್ಲ. ಆ ರೀತಿ ಲೂಟಿ ಮಾಡುವ ಜೀನ್ಸ್ ನನ್ನದಲ್ಲ. ನನ್ನ ಜೀನ್ಸ್ ಮಂಗಳೂರು, ಬೆಂಗಳೂರಿಗಲ್ಲ, ಇಡೀ ರಾಜ್ಯಕ್ಕೆ ನನ್ನ ಜೀನ್ಸ್ ಗೊತ್ತು. ಮೊದಲು ಗೌರವಯುತವಾಗಿ ಕೆಲಸ ಮಾಡಿ ಆ ಮೇಲೆ ಜೀನ್ಸ್ ಬಗ್ಗೆ ಚರ್ಚೆ ಮಾಡಿ ಎಂದು ಕುಣಿಗಲ್ ಶಾಸಕ ರಂಗನಾಥ್ಗೆ ತಿರುಗೇಟು ನೀಡಿದರು.
ಬಿಡದಿ ಸಮಗ್ರ ಉಪನಗರ ಯೋಜನೆಯ ವಿಚಾರದಲ್ಲಿ ರೈತರು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದಾರೆ.
ಈಗಾಗಲೇ ವಕೀಲರ ನೇಮಕ ಆಗಿದೆ. ಬಹಿರಂಗ ಚರ್ಚೆ ವಿಚಾರದಲ್ಲಿ ಇಲ್ಲಿಯವರೆಗೂ ನನಗೆ ಯಾರೂ ಆಹ್ವಾನವನ್ನೇ ಕೊಟ್ಟಿಲ್ಲ. ನಾನು ನಿಜವಾಗಿ ಭೂಮಿ ಕಳೆದುಕೊಳ್ಳುವ ರೈತರ ಪರವಾಗಿ ಬೈರಮಂಗಲಕ್ಕೆ ಹೋಗಿದ್ದೆ.
ಆದರೆ, ಅಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ಕುಳಿತಿದ್ದವರ ಜಮೀನು ಇದೆಯಾ ? ಜನರ ದಾರಿತಪ್ಪಿಸಿ ಜಮೀನು ಲೂಟಿ ಮಾಡಿರುವವರಿಗೆ ಈ ಟೌನ್ಶಿಪ್ ಬೇಕು. ನಿಜವಾದ ರೈತರಿಗೆ ಬೇಕಿಲ್ಲ. ರಾಜಕೀಯಕ್ಕಾಗಿ ಬಟ್ಟೆಬಿಚ್ಚಿಕೊಂಡು ಕೂತಿರುವವರ ಬಳಿ ನಾನು ಚರ್ಚೆಗೆ ಹೋಗಲಾ.? ಎಂದರು.
2006ರಲ್ಲಿ ಐದು ಟೌನ್ಶಿಪ್ ತರಬೇಕು ಎಂಬ ಚರ್ಚೆ ಆಗಿದ್ದು ನಿಜ. ಆಗ ಯಾವುದೇ ಭೂಸ್ವಾಧಿನಕ್ಕೆ ನಾನು ಚಾಲನೆ ಕೊಟ್ಟಿರಲಿಲ್ಲ. ಕೇವಲ ಚಿಂತನೆ ಮಾಡಿದ್ದೆ ಅಷ್ಟೇ. ವಿಧಾನಸೌದದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಸದನಕ್ಕೆ ಉತ್ತರ ಕೊಟ್ಟಿದ್ದೇನೆ. ಆಗ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲ್ಲ ಅಂತ ಹೇಳಿದ್ದೆ. ನನ್ನಿಂದ ರೈತರಿಗೆ ಯಾವುದೇ ತೊಂದರೆ ಆಗಿಲ್ಲ. ತೊಂದರೆ ಆರಂಭ ಆಗಿರೋದೆ ಕಾಂಗ್ರೆಸ್ ನಾಯಕರಿಂದ ಎಂದು ಆರೋಪಿಸಿದರು.