ಕನಕಪುರ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚೀರಣಕುಪ್ಪೆ ಮಲ್ಲಪ್ಪನದೊಡ್ಡಿಯಲ್ಲಿ ಮನೆ ಗೋಡೆ ತೆರವುಗೊಳಿಸಲು ವಿರೋಧ ವ್ಯಕ್ತಪಡಿಸಿದಕ್ಕಾಗಿ ಮಹಿಳೆಗೆ ಬಾಯಿಯಿಂದ ಕಚ್ಚಿ ಗಾಯಗೊಳಿಸಲಾಗಿದೆ.
ಗ್ರಾಮದ ಶಿವರುದ್ರಮ್ಮ ಅವರ ಸೋದರ ಸಂಬಂಧಿಗಳಾದ ಭದ್ರಗಿರಿ, ಮರಿಬಸಯ್ಯ, ಮಂಜುನಾಥ್ ಮತ್ತವರ ಮಕ್ಕಳಾದ ಹೇಮಂತ್ಕುಮಾರ್, ವಿಜಯಕುಮಾರ್ ಸೇರಿ ಹಲವರು ಶುಕ್ರವಾರ ಗುಂಪುಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಲ್ಲದೇ, ಶಿವರುದ್ರಮ್ಮ ಅವರನ್ನು ಬಾಯಿಯಿಂದ ಕಚ್ಚಿ ಗಂಭೀರ ಗಾಯಗೊಳಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಶಿವರುದ್ರಮ್ಮ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹತ್ತು ವರ್ಷಗಳಿಂದ ಪಿತ್ರಾರ್ಜಿತ ಜಾಗದಲ್ಲಿ ವಾಸವಿದ್ದೇನೆ. ಆಸ್ತಿ ವಿಚಾರದಲ್ಲಿ ಮನೆಯ ಗೋಡೆ ಕೆಡವಿದ್ದಾರೆ.
ಇದೇ ರೀತಿ ಹಲವು ವರ್ಷಗಳಿಂದ ನನಗೆ ಕಿರುಕುಳ ನೀಡುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಗ್ರಾಪಂ, ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ ಮಾಡಿಸಿ ನಿಮ್ಮ ಹದಬಸ್ತು ಗುರುತಿಸಿಕೊಳ್ಳಿ ಎಂದು ತಿಳಿಸಿದ್ದರೂ ಅವರು ಕೇಳದೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.