ಬಮೂಲ್ ಕಚೇರಿ 
ಬೆಂಗಳೂರು ದಕ್ಷಿಣ

ಬಮುಲ್​ಗೆ ಕೃತಕ ಬುದ್ಧಿಮತ್ತೆ ಬಲ

ಗಂಗಾಧರ ಬಿ ವಿ

ಪ್ರಮುಖ ಮುಖ್ಯಾಂಶಗಳು

  • ಎಐ ಅಳವಡಿಸಿಕೊಂಡ ರಾಜ್ಯದ ಮೊದಲ ಹಾಲು ಒಕ್ಕೂಟ
  • ಕಲಬೆರಕೆ, ಭ್ರಷ್ಟಾಚಾರ, ಅಳತೆಯಲ್ಲಿನ ಮೋಸಗಳಿಗೆ ಬ್ರೇಕ್​
ರಾಮನಗರ
ಕ್ಷೀರ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿ ಸ್ಥಾಪಿಸಲು ಹೊರಟಿರುವ ಬೆಂಗಳೂರು ಹಾಲು ಒಕ್ಕೂಟ (ಬಮುಲ್​) ಹಾಲು ಶೇಖರಣೆ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎ.ಐ.) ತಂತ್ರಜ್ಞಾನ ಅಳವಡಿಸಿಕೊಂಡಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ನೂರಕ್ಕೆ ನೂರರಷ್ಟು ಎಂಪಿಸಿಎಸ್​ಗಳಿಗೆ ಏಕೀಕೃತ ತಂತ್ರಾಂಶ ಅಳವಡಿಸಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಮೊದಲ ಒಕ್ಕೂಟ ಎನ್ನುವ ಹೆಗ್ಗಳಿಕೆಗೂ ಬಮುಲ್​ ಪಾತ್ರವಾಗಿದೆ.
ಎನ್​ಡಿಡಿಬಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಆಟೋಮ್ಯಾಟಿಕ್​ ಮಿಲ್ಕ್​ ಕಲೆಕ್ಷನ್​ ಸಿಸ್ಟಮ್​ (ಎಎಂಸಿಎಸ್​) ಅನ್ನು ಒಕ್ಕೂಟ 2,298 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅಳವಡಿಸಿದೆ. ಎಂಪಿಸಿಎಸ್​ಗಳಿಗೆ ರೈತರು ಹಾಲು ಸರಬರಾಜು ಮಾಡುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಎಎಂಸಿಎಸ್​ ತಂತ್ರಾಂಶದ ಮೂಲಕ ಹಾಲಿನ ಅಳತೆ ಮತ್ತು ಗುಣಮಟ್ಟ ಪರಿಶೀಲಿಸುತ್ತಾರೆ. ಪರೀಕ್ಷೆ ಪೂರ್ಣಗೊಳಿಸುತ್ತಿದ್ದಂತೆ ಒಂದೇ ನಿಮಿಷದಲ್ಲಿ ಹಾಲು ಸಬರಾಜು ಮಾಡಿದ ರೈತರ ಆ್ಯಂಡ್ರಾಯ್ಡ್​ ಮೊಬೈಲ್​ ಆ್ಯಪ್​ಗೆ ವಿವರಗಳು ಅಪ್​ಡೇಟ್​ ಆಗುತ್ತವೆ. ಆ್ಯಪ್​ನಲ್ಲಿ ಯಾವ ದಿನಾಂಕ, ಯಾವ ಸಮಯಕ್ಕೆ ಎಷ್ಟು ಲೀಟರ್​ ಹಾಲು ಸರಬರಾಜು ಮಾಡಿದ್ದಾರೆ. ಹಾಲಿನ ಗುಣಮಟ್ಟ, ಕೊಬ್ಬಿನಾಂಶದ ವಿವರ, ಪ್ರತಿ ಲೀಟರ್​ಗೆ ರೈತರಿಗೆ ನೀಡುವ ಬೆಲೆ, ಒಟ್ಟು ಮೊತ್ತ ಹಾಗೂ ಇದುವರೆಗೆ ಹಾಲು ಪೂರೈಕೆ ಮಾಡಿದ್ದಕ್ಕೆ ಎಷ್ಟು ಹಣ ಪಾವತಿಸಲಾಗಿದೆ ಎಂಬ ವಿವರ ಲಭ್ಯವಾಗುತ್ತದೆ.
ಇನ್ನು ಈ ಮೊಬೈಲ್​ ಆ್ಯಪ್​ ಮೂರು ಹಂತದಲ್ಲಿ ಅಭಿವೃದ್ಧಿ ಹೊಂದಿದ್ದು, ಒಂದು ಹಾಲು ಪೂರೈಕೆ ಮಾಡುವ ರೈತರಿಗೆ ಅವರ ಹಾಲಿನ ವಿವರದ ಜತೆಗೆ ಅವರು ಒಕ್ಕೂಟದಿಂದ ಖರೀದಿ ಮಾಡುವ ಪಶುಆಹಾರ, ಖನಿಜ ಮಿಶ್ರಣಗಳ ವಿವರವೂ ನಮೂದಾಗಲಿದೆ. ಹಾಗೆಯೇ ಎಂಪಿಸಿಎಸ್​ನ ಮುಖ್ಯ ಕಾರ್ಯನಿರ್ವಾಹಕರ ಆ್ಯಪ್​ನಲ್ಲಿ ಸಂಘಕ್ಕೆ ಪೂರೈಸಿದ ಎಲ್ಲ ಹಾಲು ಉತ್ಪಾದಕರ ವಿವರಗಳು ನಮೂದಾಗಲಿದ್ದು, ಮಾರ್ಗದ ವಿಸ್ತರಣಾಧಿಕಾರಿಗೆ ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿಯೊಬ್ಬ ಹಾಲು ಉತ್ಪಾದಕನ ವಿವರ ಲಭ್ಯವಾಗಲಿದೆ. ಇನ್ನು ಸಮಗ್ರ ಮಾಹಿತಿ ಬಮುಲ್​ ಸರ್ವರ್​ ಕೇಂದ್ರದಲ್ಲಿ ಲಭ್ಯವಿರುತ್ತದೆ.
ಇದರಿಂದ ರೈತರಿಗೆ ಪೂರೈಕೆ ಮಾಡಿದ ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ಹಣ ಸಂದಾಯವಾಗುವ ಜತೆಗೆ, ಸಂಗ್ರಹದ ನಂತರ ನಡೆಯುತ್ತಿದೆ ಎನ್ನಲಾದ ಕಲಬೆರಕೆ, ಭ್ರಷ್ಟಾಚಾರ, ಅಳತೆಯಲ್ಲಿನ ಮೋಸ ಸೇರಿ ಎಲ್ಲದಕ್ಕೂ ಬ್ರೇಕ್​ ಬೀಳಲಿದೆ.

80 ಸಾವಿರ ರೈತರ ಬಳಿ ಆ್ಯಪ್​

ಬಮುಲ್​ ಅಳವಡಿಸಿಕೊಂಡಿರುವ ಎಐ ತಂತ್ರಾಂಶವನ್ನು ಈಗಾಗಲೇ ರೈತರು ಬಳಸಲು ಮುಂದಾಗಿದ್ದು, ಸುಮಾರು 80 ಸಾವಿರ ರೈತರು ಮೊಬೈಲ್​ನಲ್ಲಿ ಇನ್​ಸ್ಟಾಲ್​ ಮಾಡಿಕೊಂಡಿದ್ದಾರೆ. ಒಕ್ಕೂಟದ ವ್ಯಾಪ್ತಿಯ 2,298 ಎಂಪಿಸಿಎಸ್​ಗಳಿಂದ ಪ್ರತಿನಿತ್ಯ ಸರಾಸರಿ 17 ಲಕ್ಷ ಲೀಟರ್​ ಹಾಲು ಸಂಗ್ರಹಣೆಯಾಗುತ್ತಿದೆ. ಸರಾಸರಿ 1.11 ಲಕ್ಷ ರೈತರು ಸಕ್ರಿಯವಾಗಿ ಪ್ರತಿದಿನ ಹಾಲು ಪೂರೈಕೆ ಮಾಡುತ್ತಿದ್ದಾರೆ. ಈ ಪೈಕಿ 80 ಸಾವಿರಕ್ಕೂ ಹೆಚ್ಚು ರೈತರು ಆ್ಯಪ್​ ಅಳವಡಿಸಿಕೊಂಡಿದ್ದು, ಬಾಕಿ ಉಳಿದಿರುವ ರೈತರಿಗೂ ಆ್ಯಪ್​ ಅಳವಡಿಕೆಗೆ ಕ್ರಮ ಕೈಗೊಂಡಿರುವುದಾಗಿ ಬಮುಲ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಳೇ ವ್ಯವಸ್ಥೆಗೆ ಬ್ರೇಕ್​

ಎನ್​ಡಿಡಿಬಿ ಅಭಿವೃದ್ಧಿ ಪಡಿಸಿದ ಎಎಂಸಿಎಸ್​ ತಂತ್ರಾಂಶ ಏಕರೂಪವಾಗಿದ್ದು, ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳು ಅಳವಡಿಸಿಕೊಂಡಿವೆ. ಈ ಮೊದಲು 20ಕ್ಕೂ ಹೆಚ್ಚು ಖಾಸಗಿ ತಂತ್ರಾಂಶಗಳನ್ನು ಎಂಪಿಸಿಎಸ್​ಗಳು ತಮಗೆ ಬೇಕಾದ ರೀತಿಯಲ್ಲಿ ಅಳವಡಿಸಿಕೊಂಡಿದ್ದವು. ಇನ್ನು ಹಾಲು ಸಂಗ್ರಹಣೆಯ ಸಮಯದಲ್ಲಿ ಗುಣಮಟ್ಟದ ಪರೀಕ್ಷೆ ಮತ್ತು ಅಳತೆಯನ್ನು ಸಂಘದ ಕಾರ್ಯದರ್ಶಿಗಳು ತಾವೇ ತಂತ್ರಾಂಶಕ್ಕೆ ನಮೂದಿಸಬೇಕಿತ್ತು. ಕೆಲ ಸಂಘಗಳು ಆನ್​ಲೈನ್​ಗಿಂತ ಹೆಚ್ಚಾಗಿ ಆಫ್​ಲೈನ್​ನಲ್ಲಿ ನಮೂದಿಸುತ್ತಿದ್ದುದರಿಂದ ಸಾಕಷ್ಟು ಲೋಪದೋಷಗಳು ಕಂಡುಬರುತ್ತಿದ್ದವು.

ಬಮುಲ್​ ಒಕ್ಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಇದರಿಂದ ರೈತರಿಗೆ ಹೆಚ್ಚು ಪಾರದರ್ಶಕ ಮತ್ತು ವೇಗವಾದ ಸೇವೆ ದೊರೆಯಲಿದೆ. ಇನ್ಮುಂದೆ ಎಂಪಿಸಿಎಸ್​ಗಳಿಗೆ ಹಾಲನ್ನು ರೈತರು ಪೂರೈಸುತ್ತಿದ್ದಂತೆ ತಕ್ಷಣವೇ ಹಾಲಿನ ತೂಕ, ಫ್ಯಾಟ್​ ಪ್ರಮಾಣ ಹಾಗೂ ಇದಕ್ಕೆ ದೊರೆಯುವ ಹಣದ ಸಂಪೂರ್ಣ ಮಾಹಿತಿ ರೈತರ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಎಸ್​ಎಂಎಸ್​ ಮೂಲಕ ತಲುಪಲಿದೆ.
ಡಿ.ಕೆ.ಸುರೇಶ್​, ಬಮುಲ್​ ಅಧ್ಯಕ್ಷ