ಕುದೂರು ಹೋಬಳಿಯ ಬಿಸ್ಕೂರು ಗ್ರಾಮದಲ್ಲಿ ಅಡಕೆ ಕದಿಯಲು ಬಂದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳರು. 
ಬೆಂಗಳೂರು ದಕ್ಷಿಣ

ಅಡಕೆ, ಬಾಳೆಗೊನೆ ಕದ್ದು ಬಂಧಿಯಾದ್ರು

ಕುದೂರು: ಹಲವು ದಿನಗಳಿಂದ ಈ ಭಾಗದಲ್ಲಿ ರೈತರ ನಿದ್ದೆಗೆಡಿಸಿದ್ದ ಮೂವರು ಅಡಕೆ ಕಳ್ಳರನ್ನು ಬಿಸ್ಕೂರು & ಕೋಡಿಹಳ್ಳಿ ಗ್ರಾಮಸ್ಥರು ಸೋಮವಾರ ರಾತ್ರಿ ಹೆಡೆಮುರಿ ಕಟ್ಟಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ತಿಪ್ಪಸಂದ್ರದ ಪ್ರವಿಣ್​(19), ಬೆಂಗಳೂರಿನ ಮತ್ತೀಕೆರೆಯ ನಿವಾಸಿಗಳಾದ ಕಿರಣ್​(19), ನಾಗೇಂದ್ರ(45)ಬಂಧಿತರು. ನಾಲ್ಕನೇ ಆರೋಪಿ ಬೆಂಗಳೂರಿನ ಯಶವಂತಪುರ ನಿವಾಸಿ ಪುನೀತ್​(20) ಪರಾರಿಯಾಗಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ವಾರದಿಂದ ಬಿಸ್ಕೂರು, ಕೋಡಿಹಳ್ಳಿ ಗ್ರಾಮಗಳ ಸುತ್ತಮುತ್ತ ರಾತ್ರಿ ವೇಳೆ ತೋಟಗಳಿಗೆ ಖದೀಮರು ನುಗ್ಗಿ ಅಡಕೆ, ಬಾಳೆಗೊನೆ ಕದ್ದೊಯ್ಯುತ್ತಿದ್ದರು. ಅದರಂತೆ ಇತ್ತೀಚೆಗೆ ಬಿಸ್ಕೂರು ಪದ್ಮನಾಭ ಅವರ ತೋಟದಲ್ಲಿ 20&35 ಚೀಲ ಅಡಕೆ ಹಾಗೂ ಕೋಡಿಹಳ್ಳಿಯ ರಾಜಣ್ಣ ಅವರ ತೋಟದಲ್ಲಿ 6 ಚೀಲ ಅಡಕೆ ಕಾಯಿ ಕಳವಾಗಿತ್ತು. ಇದನ್ನು ಗಮನಿಸಿದ ತೋಟದ ಮಾಲೀಕರು ಒಂದೆರಡು ದಿನ ಕಾದು ನೋಡಿ ನಂತರ ಠಾಣೆಗೆ ದೂರು ನೀಡಿದರಾಯಿತು ಎಂದು ತೋಟವನ್ನು ಕಾಯುತ್ತಿದ್ದರು.
ಭಾನುವಾರ ತಡರಾತ್ರಿ ಬಿಸ್ಕೂರು ಕೆರೆ ಏರಿ ಹಿಂಭಾಗದ ಕೋಡಿಹಳ್ಳಿ&ಬಿಸ್ಕೂರು ರಸ್ತೆ ಪಕ್ಕದಲ್ಲಿದ್ದ ಪದ್ಮನಾಭ ಅವರ ತೋಟಕ್ಕೆ ನಾಲ್ವರು ಕಳ್ಳರು ನುಗ್ಗಿದ್ದು, ಅಡಕೆ ಕದಿಯುವಾಗ ಬಿಸ್ಕೂರು&ಕೋಡಿಹಳ್ಳಿ ಗ್ರಾಮಸ್ಥರ ಕೈಗೆ ಮೂವರು ಸಿಕ್ಕಿಬಿದ್ದಿದ್ದಾರೆ. ಕಳ್ಳರ ಕಾರನ್ನು ಗ್ರಾಮಸ್ಥರು ವಶಕ್ಕೆ ಪಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.