ಮಾಗಡಿ ಠಾಣೆ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ವಸ್ತುಗಳು. ಅಪರ ಪೊಲೀಸ್ ಅಧೀಕ್ಷಕ ರಾಮಚಂದ್ರಯ್ಯ ಎನ್.ಎಚ್., ರಾಜೇಂದ್ರ ಪ್ರಸಾದ್ ಹಾಗೂ ಮಾಗಡಿ ಉಪವಿಭಾಗದ ಉಪಾಧೀಕ್ಷಕ ಪ್ರವಿಣ್ ಎಂ., ಇನ್ಸ್ಪೆಕ್ಟರ್ ಜಿ.ವೈ.ಗಿರಿರಾಜ್ ಇತರರಿದ್ದರು.
ಮಾಗಡಿ: ಪಟ್ಟಣದಲ್ಲಿ ನಿಂತಿದ್ದ ವಾಹನಗಳ ಬ್ಯಾಟರಿ, ಟೂಲ್ ಬಾಕ್ಸ್ ಸೇರಿ ಇತರ ವಸ್ತುಗಳನ್ನು ಇತ್ತೀಚೆಗೆ ಕಳವು ಮಾಡಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಮೊಮ್ಮಿನಪುರ ನಿವಾಸಿಗಳಾದ ಸಲ್ಮಾನ್, ಹಳೇ ಗುಡ್ಡದಹಳ್ಳಿಯ ಯಾಸಿನ್ ಬಂಧಿತರು.
ಪಟ್ಟಣದ ಜ್ಯೋತಿನಗರದಲ್ಲಿ ನ.9ರಂದು ಭಾಗ್ಯಲಕ್ಷ್ಮೀ ಭಾರತ್ ಗ್ಯಾಸ್ ಏಜೆನ್ಸಿ ಕಚೇರಿ ಪಕ್ಕದಲ್ಲಿ ನಿಂತಿದ್ದ ಟಾಟಾ ಏಸ್ ಮತ್ತು ಆಟೋಗಳಲ್ಲಿನ 4 ಬ್ಯಾಟರಿ, ಟೂಲ್ ಬಾಕ್ಸ್, ಸೈಲ್ಗಳು ಹಾಗೂ 3 ಜಾಕ್ ರಾಡುಗಳ ಕಳ್ಳತನವಾಗಿದ್ದವು. ಈ ಸಂಬಂಧ ವಾಹನಗಳ ಮಾಲೀಕರು ಮಾಗಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
ಆರೋಪಿಗಳು ಶೋಕಿ ಜೀವನಕ್ಕಾಗಿ ಸ್ಕ್ರ್ಯಾಪ್ ವ್ಯಾಪಾರದ ನೆಪದಲ್ಲಿ ಬಂದು ಅಲ್ಲಲ್ಲಿ ನಿಂತಿರುವ ಆಟೋಗಳಲ್ಲಿನ ಬ್ಯಾಟರಿ, ಟೂಲ್ ಬಾಕ್ಸ್, ಜಾಕ್ ರಾಡ್ ಸೇರಿ ಹಲವು ವಸ್ತುಗಳನ್ನು ಕದಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ಸ್ಪೆಕ್ಟರ್ ಜಿ.ವೈ.ಗಿರಿರಾಜ್, ಎಎಸೈ ಕೃಷ್ಣಪ್ಪ.ಬಿ.ವಿ, ಸಿಬ್ಬಂದಿ ಬೀರಪ್ಪ, ವೀರಭದ್ರಪ್ಪ, ಮಂಜುನಾಥ, ಪ್ರಮೋದ, ಮುನೀಂದ್ರ ಕಾರ್ಯಾಚರಣೆಯಲ್ಲಿದ್ದರು.