ಪ್ರಮುಖ ಮುಖ್ಯಾಂಶಗಳು
ಮಾಗಡಿ
ಮೋಟಗೊಂಡನಹಳ್ಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಸಂಪೂರ್ಣ ಹಳ್ಳ ಹಿಡಿದಿದೆ. ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಕಲ್ಪನೆಯೊಂದಿಗೆ ಆರಂಭವಾದ ಈ ಯೋಜನೆ, ಇಂದಿಗೂ ಪೂರ್ಣಗೊಳ್ಳದೆ ಗ್ರಾಮಸ್ಥರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ನೀರಿನ ಪೈಪ್‌ಲೈನ್ ಅಳವಡಿಸಲು ಗ್ರಾಮದ ಪ್ರಮುಖ ರಸ್ತೆಗಳ ಮಧ್ಯ ಅಗೆದಿದ್ದ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೆ ಹಾಗೆಯೇ ಬಿಡಲಾಗಿದೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿ ರಸ್ತೆಯೋ ಅಥವಾ ಕೆರೆಯೋ ಎಂದು ಗುರುತಿಸಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ವೃದ್ಧರು, ಮಕ್ಕಳು ಹಾಗೂ ವಾಹನ ಸವಾರರು ಓಡಾಡಲು ಭಯಪಡುವಂತಾಗಿದೆ. ನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲಸ ಮುಗಿಯುವ ಮುನ್ನವೇ ಬಿಲ್ ಸ್ವಾಹಾ!:
ಅಚ್ಚರಿಯ ಸಂಗತಿಯೆಂದರೆ, ಕಾಮಗಾರಿ ಸಂಪೂರ್ಣವಾಗಿ ಮುಗಿಯದೇ ಇದ್ದರೂ ಕಾಮಗಾರಿ ಪೂರ್ಣಗೊಂಡಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಬಿಲ್ ಮಾಡಲಾಗಿದೆ. ಇದಕ್ಕೆ ಸಾಥ್ ನೀಡಿದ ಗ್ರಾಪಂ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಚಿವ ಎಚ್.ಸಿ.ಬಾಲಕೃಷ್ಣ ಅವರು ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಭೆಗಳಲ್ಲಿ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರೂ, ಇಲ್ಲಿನ ಅಧಿಕಾರಿಗಳಿಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.
ಸಮಗ್ರ ತನಿಖೆ:
ಅಪೂರ್ಣ ಕಾಮಗಾರಿಗೆ ಬಿಲ್ ಮಂಜೂರು ಮಾಡಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಹಣ ಲೂಟಿ ಮಾಡಿದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ, ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಮಗಾರಿ ಆರಂಭಿಸಿ ಹಲವು ವರ್ಷಗಳೇ ಕಳೆದರು ಇನ್ನೂ ಸಂಪರ್ಕ ಕಲ್ಪಿಸಿಲ್ಲ. ಈ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಕೂಡಲೇ ಯೋಜನೆ ಪೂರ್ಣಗೊಳಿಸಿ ರಸ್ತೆಯಲ್ಲಿಯ ಗುಂಡಿ ಮುಚ್ಚಬೇಕು.
ಮಹೇಶ್, ಗ್ರಾಪಂ ಮಾಜಿ ಸದಸ್ಯ
ಕಾಮಗಾರಿಗೆ ತೆಗೆಯಲಾಗಿರುವ ಗುಂಡಿಗಳನ್ನು ಮುಚ್ಚಲಾಗಿದೆ. ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು. ನಡೆದಿರುವ ಕಾಮಗಾರಿಗಷ್ಟೇ ಬಿಲ್ ಪಾವತಿಸಲಾಗಿದೆ.
ಶ್ರೀನಿವಾಸ್, ಎಇಇ ಜಿಪಂ