ಗ್ರೆಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಕ್ಷೆ
- ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯ ಸಾಧ್ಯತೆ
- 9 ಕಂದಾಯ ಗ್ರಾಮಗಳ 7,881 ಎಕರೆ ಪ್ರದೇಶ ಸ್ವಾಧೀನಕ್ಕೆ ಸಜ್ಜು
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣಗೊಳ್ಳುತ್ತಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಭೂಸ್ವಾಧೀನಕ್ಕೆ ಸಂಬಂಧಿಸಿದ ಅಂತಿಮ ಅಧಿಸೂಚನೆಗೆ ಶುಕ್ರವಾರ ನಿಗದಿಯಾಗಿರುವ ಸಂಪುಟ ಸಭೆಯಲ್ಲಿ ಬಹುತೇಕ ಅನುಮೋದನೆ ದೊರೆಯಲಿದೆ.
ಯೋಜನೆ ಅನುಷ್ಠಾನವನ್ನು ಅನುಮೋದಿಸಿದ್ದ ಏ.16ರ ರಾಜ್ಯ ಸಚಿವ ಸಂಪುಟ ಸಭೆ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಕುರಿತು ತಜ್ಞರಿಂದ ಅಧ್ಯಯನ ನಡೆಸಿ, ಸಮಗ್ರ ಒಪ್ಪಿಗೆ ನೀಡುವ ಸಂಬಂಧ ಅನುಮೋದನೆಗೆ ತಡೆ ನೀಡಿತ್ತು. ಏ. 24ರ ಶುಕ್ರವಾರ ನಡೆಯುವ ಸಂಪುಟ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಗೆ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.
ಅವಧಿ ವಿಸ್ತರಿಸಿತ್ತು:
ಗ್ರೇಟರ್ ಬೆಂಗಳೂರು ಅಭಿವದ್ಧಿ ಪ್ರಾಧಿಕಾರ (ಜಿಬಿಡಿಎ) ಅನುಷ್ಠಾನಕ್ಕೆ ತರುತ್ತಿರುವ ಸಾವಿರಾರು ಕೋಟಿ ವೆಚ್ಚದ ಸಮಗ್ರ ಉಪನಗರ ನಿರ್ಮಾಣಕ್ಕಾಗಿ ಒಟ್ಟು 7881 ಎಕರೆ ಭೂ ಸ್ವಾಧೀನಕ್ಕಾಗಿ 2025ರ ಮಾ.12ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಭೂ ಸ್ವಾಧೀನ ಕಾಯ್ದೆಗಳ ಪ್ರಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಒಂದು ವರ್ಷದ ಒಳಗಾಗಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಒಂದು ವೇಳೆ ಆಡಳಿತಾತ್ಮಕ ಕಾರಣಗಳಿಂದಾಗಿ ಇದು ಸಾಧ್ಯವಾಗದಿದ್ದಲ್ಲಿ, ಅವಧಿಯನ್ನು ವಿಸ್ತರಿಸುವ ಅವಕಾಶ ಸರ್ಕಾರಕ್ಕೆ ಇದೆ. ಅದರಂತೆಯೇ ನಗರಾಭಿವದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಂತಿಮ ಅಧಿಸೂಚನೆ ಪ್ರಕಟಿಸುವ ಅವಧಿಯನ್ನು 2027ರ ಮಾ. 11ರವರೆಗೆ ವಿಸ್ತರಿಸಿ ಆದೇಶಿಸಿದ್ದರು.
ವಿಳಂಬ ಏಕೆ?:
ಸಮಗ್ರ ಉಪನಗರ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮತ್ತು ಬೃಹತ್ ಯೋಜನೆಯಾಗಿದೆ. ಬೆಂಗಳೂರು ನಗರದ ಜನದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ನಗರವನ್ನು ವಿಸ್ತರಿಸುವ ಯೋಜನೆ ಸಹ ಇದಾಗಿದೆ. 9 ಕಂದಾಯ ಗ್ರಾಮಗಳ 7881 ಎಕರೆ ಪ್ರದೇಶ ಸ್ವಾಧೀನಕ್ಕೆ ಒಳಪಡಲಿದ್ದು, ಸಾವಿರಾರು ರೈತರು ಹಾಗೂ 10 ಸಾವಿರಕ್ಕೂ ಹೆಚ್ಚು ಹಿಸ್ಸಾ ನಂಬರ್‌ಗಳಿವೆ. ಅಲ್ಲದೆ, ಭೂ ಸ್ವಾಧೀನಕ್ಕೆ ಕೆಲ ರೈತರು ವಿರೋಧ ಸಹ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತ ರೈತರ ಮನವೊಲಿಕೆ ಹಾಗೂ ಮತ್ತಿತರ ಕಾನೂನು ಪ್ರಕ್ರಿಯೆಗಳಿಂದ ಜೆಎಂಸಿ ಕಾರ್ಯ ವಿಳಂಬವಾಗಿತ್ತು. ಇದರ ನಡುವೆ ಬಹುತೇಕ ರೈತರು ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂಬುದಾಗಿ ಜಿಬಿಡಿಎ ಹೇಳಿದೆ. ಒಂದಷ್ಟು ಮಂದಿ ಹೆಚ್ಚಿನ ಪರಿಹಾರ ಪಡೆಯಲು, ವಾಣಿಜ್ಯ ಹಾಗೂ ವಸತಿ ಯೋಗ್ಯ ನಿವೇಶನಗಳ ಪಾಲುದಾರಿಕೆ ಪಡೆಯಲು ಕಾದು ನೋಡುತ್ತಿದ್ದಾರೆ.
ಎಲ್ಲೆಲ್ಲಿ ಸ್ವಾಧೀನ?:
ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಬೈರಮಂಗಲ, ಬನ್ನಿಗಿರಿ, ಹೊಸೂರು, ವಡೇರಹಳ್ಳಿ, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಕೆ.ಜಿ.ಗೊಲ್ಲರಪಾಳ್ಯ, ಮಂಡಲಹಳ್ಳಿ, ಅರಳಾಳುಸಂದ್ರ ಒಟ್ಟು 9 ಕಂದಾಯ ಗ್ರಾಮಗಳ ಸುಮಾರು 7881 ಎಕರೆ ಸ್ವಾಧೀನಕ್ಕೆ ಒಳಪಡಲಿದ್ದು, ಇದರಲ್ಲಿ ಖಾಸಗಿ ಮಾಲೀಕತ್ವದ 6731 ಎಕರೆ ಜಮೀನು ಇದೆ. ಒಟ್ಟು 6300 ರೈತರು ಸ್ವಾಧೀನಕ್ಕೆ ಒಳಗೊಂಡಿದ್ದಾರೆ. ಎಕರೆ ಜಮೀನಿಗೆ ಜಿಲ್ಲಾಡಳಿತ 2.7 ಕೋಟಿ ರೂ ನಿಂದ, 2.55 ಕೋಟಿ ವರೆಗೆ ಪರಿಹಾರ ಘೋಷಣೆ ಸಹ ಮಾಡಿದ್ದಾರೆ.
ಕಳೆದ ಸಭೆಯಲ್ಲಿ ಏನಾಗಿತ್ತು?
ಕಳೆದ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಯೋಜನೆಗೆ ಸಂಬಂಧಿಸಿದ ಕೈಪಿಡಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾವೇ ಸಂಪುಟ ಸಹೋದ್ಯೋಗಿಗಳಿಗೆ ವಿತರಿಸಿದ್ದರು. ಸಭೆಯಲ್ಲಿ ಯೋಜನೆ ಜಾರಿ ಸಂಬಂಧ ಚರ್ಚೆ ನಡೆದರೂ, ಯಾರೂ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ, ಪುನರ್ವಸತಿ ಮತ್ತು ಪುನರ್‌ನಿರ್ಮಾಣಕ್ಕೆ ತಗಲುವ ವೆಚ್ಚ ಮತ್ತು ಸಾಧಕ ಬಾಧಕಗಳು, ಆರ್ಥಿಕ ಹೊರೆ ಇವೆಲ್ಲವುಗಳನ್ನು ಅಧ್ಯಯನ ಮಾಡುವ ಸಂಬಂಧ ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಿ, ಭೂಸ್ವಾಧೀನಕ್ಕೆ ಅನುಮೋದನೆ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ಸಂಪುಟ ಸಭೆಯಲ್ಲಿ ಅಂತಿಮ ಅಧಿಸೂಚನೆಗೆ ಅನುಮತಿ ದೊರೆಯಬೇಕಿತ್ತು. ಆ ಸಭೆಯಲ್ಲಿ ಯೋಜನೆಗೆ ಜಾರಿಗೆ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಬದಲಿಗೆ ಪುರ್ನವಸತಿ ಮತ್ತು ಪುನರ್‌ನಿರ್ಮಾಣ ಸಂಬಂಧ ತಜ್ಞರ ತಂಡದಿಂದ ಅಧ್ಯಯನ ಮಾಡಿಸಿ ವರದಿ ಪಡೆಯಲು ತೀರ್ಮಾನಿಸಲಾಗಿತ್ತು. ಶುಕ್ರವಾರ ಮತ್ತೆ ಸಂಪುಟ ಸಭೆ ನಡೆಯಲಿದ್ದು, ಅಂದು ಯೋಜನೆಯ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಅಂತಿಮ ಅಧಿಸೂಚನೆಗೆ ಅನುಮತಿ ದೊರೆಯಲಿದೆ ಎನ್ನುವ ವಿಶ್ವಾಸ ಇದೆ.
ಗಾಣಕಲ್ ನಟರಾಜು, ಅಧ್ಯಕ್ಷರು, ಜಿಬಿಡಿಎ