ರಾಮನಗರ: ಖನಿಜ ಸಂಪತ್ತಿನ ಪತ್ತೆಗಾಗಿ ಮಲ್ಟಿ ಸೆನ್ಸರ್ ವೈಮಾನಿಕ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ನವೆಂಬರ್ 2ರಿಂದ ಡಿಸೆಂಬರ್ 20ರವರೆಗೆ ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ಸೇರಿದಂತೆ ರಾಜ್ಯದ ಜಿನಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟ ನಡೆಸಲಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 260 ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸಲಿರುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ನಿಯೋಜಿಸಿರುವ ಹೈದರಾಬಾದ್ನ ಐಐಸಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಈ ಸಮೀಕ್ಷೆ ನಡೆಸಲಿದೆ. ಈ ಸಂಬಂಧ ಸಂಸ್ಥೆಯ ಉಪಾಧ್ಯಕ್ಷರು (ಏವಿಯೇಷನ್) ಹಾಗೂ ವ್ಯವಸ್ಥಾಪಕರು ಅ.31ರಂದು ಜಿಲ್ಲಾಢಳಿತಕ್ಕೆ ಪತ್ರವನ್ನು ಬರೆದಿದ್ದಾರೆ.
ಕರ್ನಾಟಕದ ಮೈಸೂರು, ಕೊಡಗು, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳು ಮತ್ತು ಕೇರಳದ ವಯನಾಡು ಜಿಲ್ಲೆಯಲ್ಲಿ ಖನಿಜ ಸಂಪನ್ಮೂಲಗಳ ಪತ್ತೆಗಾಗಿ ಸಮೀಕ್ಷೆಗೊಳಪಡುತ್ತಿದೆ. ಇದಕ್ಕಾಗಿ ಸಿಂಗಲ್ ಇಂಜಿನ್ ಟರ್ಬೊಪ್ರಾಪ್ ಮಾದರಿಯ ಸೆಸ್ನಾ ಕ್ಯಾರವಾನ್ 208 ಬಿ ವಿಮಾನ ಬಳಸಲಾಗುತ್ತದೆ. ವಿಮಾನವು ಭೂಮಿಯ ಮೇಲ್ಮೈಯಿಂದ ಸುಮಾರು 260 ಅಡಿ ಎತ್ತರದಲ್ಲಿ ಹಾರಾಟ ನಡೆಸಿ ಮಲ್ಟಿ ಸೆನ್ಸರ್ ಏರಿಯಲ್ ಸರ್ವೇ ತಂತ್ರಜ್ಞಾನದ ಮೂಲಕ ದತ್ತಾಂಶ ಸಂಗ್ರಹಿಸಲಿದೆ.
ಮೈಸೂರು ಮತ್ತು ಹೊಸೂರು ವಿಮಾನ ನಿಲ್ದಾಣಗಳನ್ನು ಕಾರ್ಯಾಚರಣೆಯ ಕೇಂದ್ರಗಳನ್ನಾಗಿ ಮಾಡಿಕೊಂಡು ಸಮೀಕ್ಷೆ ನಡೆಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಹಗಲು ಮತ್ತು ರಾತ್ರಿ ವೇಳೆಯಲ್ಲಿಯೂ ವಿಮಾನ ಹಾರಾಟ ನಡೆಯುವ ಸಾಧ್ಯತೆಯಿದೆ.
ಸಾಮಾನ್ಯ ವಿಮಾನಗಳಿಗಿಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವುದರಿಂದ ಸಾರ್ವಜನಿಕರಲ್ಲಿ ಅನುಮಾನ ಅಥವಾ ಆತಂಕ ಉಂಟಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.