ಕನಕಪುರ ರೂರಲ್​ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕೃಷಿಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಎಚ್​.ಕೆ.ಶ್ರೀಕಂಠು, ಎಂ.ಎಸ್​.ರಾಮೇಗೌಡ, ಡಾ.ಟಿ.ಕೆ.ಸಿದ್ದರಾಮೇಗೌಡ, ಡಾ.ಟಿ.ಬಿ.ಪುಟ್ಟರಾಜು ಚಾಲನೆ ನೀಡಿದರು. 
ಬೆಂಗಳೂರು ದಕ್ಷಿಣ

ತಂತ್ರಜ್ಞಾನ ಬಳಸಿದರೆ ಕೃಷಿ ಲಾಭದಾಯಕ

ಕನಕಪುರ: ಖಾಸಗಿಯಾಗಿ ಕೃಷಿ ಕಾಲೇಜು ತೆರೆಯಲು ಆಸಕ್ತಿ ಇರುವ ಕೃಷಿ ಪದವೀಧರರರಿಗೆ ಅವಕಾಶ ನೀಡಿ, ಪ್ರೋತ್ಸಾಹಿಸಬೇಕು ಎಂದು ಕೃಷಿ ವಿಶ್ವವಿದ್ಯಾನಿಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.
ನಗರದಲ್ಲಿ ಎಸ್​.ಕರಿಯಪ್ಪ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಜಿಲ್ಲಾ ಪಂಚಾಯಿತಿ, ಕೃಷಿ ಮತ್ತು ರೇಷ್ಮೆ, ಪಶುಸಂಗೋಪನೆ ಸೇರಿ ವಿವಿಧ ಇಲಾಖೆಗೆಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಆದಿ ಚುಂಚನಗಿರಿ ಮಠ ಹಾಗೂ ಎಸ್​.ಕರಿಯಪ್ಪನವರ ರೂರಲ್​ ಶಿಕ್ಷಣ ಸಂಸ್ಥೆಗೆ ಸರ್ಕಾರ ಕೃಷಿ ಕಾಲೇಜು ಮಂಜೂರು ಮಾಡಿದ್ದು, ರೈತರ ಮಕ್ಕಳಿಗೆ ಪೂರಕವಾದ ಶಿಕ್ಷಣ ದೊರೆಯುತ್ತಿದೆ. ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ಕೃಷಿ ಪದವೀಧರರ ಪಾತ್ರ ಬಹಳ ಮುಖ್ಯವಾಗಿರುವುದರಿಂದ ಬೆಂಗಳೂರು ಕೃಷಿ ವಿವಿಯು ಖಾಸಗಿ ಕಾಲೇಜುಗಳನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಬೇಕು ಎಂದರು.
ರೂರಲ್​ ಎಜುಕೇಷನ್​ ಸೊಸೈಟಿ ಅಧ್ಯಕ್ಷ ಎಚ್​.ಕೆ.ಶ್ರೀಕಂಠು ಮಾತನಾಡಿ, ರಾಜ್ಯಮಟ್ಟದ ಸಮ್ಮೇಳನಕ್ಕಿಂತ ಚೊಕ್ಕವಾಗಿ ನಿರ್ವಹಿಸಿರುವ ಈ ಕಾರ್ಯಕ್ರಮ ಅದ್ದೂರಿ ಹಗೂ ಚಿಂತನಾಪೂರ್ವ ಸಭೆಗಳಿಂದ ಮಹತ್ವದ್ದಾಗಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್​.ವಿ.ಸುರೇಶ್​ ಮಾತನಾಡಿ, ಕರಿಯಪ್ಪ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಗೊಂಡ ಮೊದಲ ವರ್ಷದಲ್ಲೇ ರೈತರಿಗೆ ಸಂಪೂರ್ಣ ಮಾಹಿತಿ ಹಾಗೂ ತಂತ್ರಜ್ಞಾನ ಒದಗಿಸುವ 150 ರೈತ ಉಪಯೋಗಿ ಅಂಗಡಿ ಮಳಿಗೆಗಳು, ಆಧುನಿಕ ತಂತ್ರಜ್ಞಾನ ಒಳಗೊಂಡ ಕೃಷಿ ಮೇಳ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿದ್ದಲ್ಲಿ ಕೃಷಿ ೇತ್ರ ಹೆಮ್ಮರವಾಗಿ ಬೆಳೆದು ಇಡೀ ವಿಶ್ವಕ್ಕೆ ಮಾದರಿಯಾಗುವುದಾಗಿ ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸತ ಡಾ.ಎಂ.ಎಸ್​.ರಾಮೇಗೌಡ, ಡಾ.ಹಿತ್ತಲಮನಿ, ಡಾ.ಎಂ.ಸಿ.ರಂಗಸ್ವಾಮಿ, ಪರಮಶಿವಯ್ಯ, ಡಾ.ಸಿ.ಶಿವರಾಜ್​ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕೃಷಿ ವಿಜ್ಞಾನಿ ಡಾ.ಹರಿಣಿಕುಮಾರ್​, ಉಪಪ್ರಾಂಶುಪಾಲ ದೇವರಾಜು, ಕೃಷಿ ಕಾಲೇಜಿನ ಡಾ.ಟಿ.ಕೆ.ಸಿದ್ದರಾಮೇಗೌಡ, ಆಡಳಿತ ಅಧಿಕಾರಿ ಡಾ. ಪುಟ್ಟರಾಜು, ಸಂಸ್ಥೆಯ ಸೂರ್ಯನಾರಾಯಣಗೌಡ, ಎಂ.ಎನ್​.ಶಿವಕುಮಾರ್​, ಕೆ.ಬಿ.ನಾಗರಾಜ್​,ಬಿ.ನಾಗರಾಜು, ಚಿನ್ನಸ್ವಾಮಿ, ಜಯರಾಮೇಗೌಡ, ಎಂ.ಉಪಮಾಶಂಕರ್​, ನಲ್ಲಹಳ್ಳಿ ಶಿವಕುಮಾರ್​ ಉಪಸ್ಥಿತರಿದ್ದರು.
ಪ್ರಗತಿಯತ್ತ ಕೃಷಿ ಕ್ಷೇತ್ರ
ಈ ಹಿಂದೆ ರಾಜ್ಯದಲ್ಲಿ ಶೇ.80 ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ ಉತ್ಪಾದನೆ, ಇಳುವರಿ ಪ್ರಮಾಣ ಕಡಿಮೆಯಿತ್ತು. ನಂತರದ ದಿನಗಳಲ್ಲಿ ಬಹುತೇಕ ರೈತರು ವಿವಿಧ ಕಾರಣಗಳಿಂದ ಕೃಷಿಯಿಂದ ವಿಮುಕ್ತರಾದರು. ಆದರೆ, ಇತ್ತೀಚೆಗೆ ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಡ್ರೋನ್​ ಯಂತ್ರದ ಮೂಲಕ ಔಷಧ ಸಿಂಪಡಣೆ, ಹೈಟೆಕ್​ ಟ್ರ್ಯಾಕ್ಟರ್​, ಕೃಷಿ ಸಲಕರಣೆ ಮಾರುಕಟ್ಟೆಗೆ ಬಂದಿವೆ. ಪರಿಣಾಮ ಕೃಷಿ ಚಟುವಟಿಕೆ ಉನ್ನತಿಕರಣವಾಗುತ್ತಿದ್ದು, ಕ್ಷೇತ್ರ ಪ್ರಗತಿಯ ಹಾದಿಯಲ್ಲಿದೆ. ತಂತ್ರಜ್ಞಾನದ ಬಳಕೆ ರೈತರಿಗೆ ಹೆಚ್ಚು ಉಪಯೊಗವಾಗುತ್ತಿದೆ ಎಂದು ಸಚಿವರು ಹೇಳಿದರು.
ರೈತರು, ಸೈನಿಕರು ದೇಶದ ವೀರರು
ತ್ಯಾಗ ಮತ್ತು ಸಮರ್ಪಣೆಯಲ್ಲಿ ರೈತರು ಮತ್ತು ಸೈನಿಕರು ದೇಶದ ನಿಜವಾದ ವೀರರು ಎಂದು ಲೋಕಸಭಾ ಸದಸ್ಯ ಡಾ.ಸಿ.ಎನ್​.ಮಂಜುನಾಥ್​ ಹೇಳಿದರು. ಕೃಷಿ ಮೇಳದ ನಾಲ್ಕನೇ ಅಧಿವೇಶನದಲ್ಲಿ ಮಾತನಾಡಿದ ಅವರು, ಸೈನಿಕರು ದೇಶದ ಗಡಿ ರಸುವ ಮೂಲಕ ನಮ್ಮ ಭದ್ರತೆಯನ್ನು ಖಚಿತಪಡಿಸಿದರೆ ರೈತರು ಹಗಲು&ರಾತ್ರಿ ಶ್ರಮಿಸಿ ದೇಶಕ್ಕೆ ಆಹಾರ ಒದಗಿಸುತ್ತಾರೆ. ಇವರಿಬ್ಬರೂ ತ್ಯಾಗಮಯಿಗಳು ಎಂದು ಶ್ಲಾಘಿಸಿದರು.
ಅರಿವು ಮೂಡಿಸಿ
ದೇಶದ ಅಭಿವೃದ್ಧಿಗೆ ಕೃಷಿಯೇ ಪ್ರಮುಖ ಅಡಿಪಾಯವಾಗಿದ್ದು, ರೈತರು ಭಾರತದ ಬೆನ್ನೆಲುಬು.
ರೈತರಿಗೆ ಕೃಷಿ ಮೇಳಗಳು ಉಪಯುಕ್ತವಾಗಿದ್ದು, ತಂತ್ರಜ್ಞಾನ ಬಳಸುವ ಮೂಲಕ ಆದಾಯ ಹೆಚ್ಚಿಸುವ ಮಾರ್ಗಗಳನ್ನು ತಿಳಿಸುವುದೇ ಮೇಳದ ಉದ್ದೇಶ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ಮಹತ್ತರ ಯೋಜನೆ ರೂಪಿಸಿದೆ. ಕನಕಪುರ ಕೃಷಿ ಕಾಲೇಜಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಸದರ ನಿಧಿಯಿಂದ 50 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಹಣವು ಸಂಸ್ಥೆಯ ಖಾತೆಗೆ ಈಗಾಗಲೇ ಜಮೆ ಆಗಿದೆ. ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಅರಿವು ಎಷ್ಟು ಮುಖ್ಯವೋ ಕೃಷಿ ಬಗ್ಗೆಯೂ ಅರಿವು ಅಷ್ಟೇ ಮುಖ್ಯವಾಗಿದೆ ಎಂದು ಡಾ.ಮಂಜುನಾಥ್​ ಹೇಳಿದರು.
ಹರಿದುಬಂದ ಜನ
ಮೊದಲ ದಿನವೇ ರೈತರು, ಸಾರ್ವಜನಿಕರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಒಳಗೊಂಡಂತೆ ಸಹಸ್ರಾರು ಮಂದಿ ಸಮ್ಮೇಳನವ ವೀಸಿದರು. ಆಧುನಿಕ ಬೇಸಾಯ ಹಾಗೂ ಸಮಗ್ರ ಕೃಷಿಗೆ ಬೇಕಾಗುವ ಉಪಕರಣಗಳು ಹಾಗೂ ತರೇವಾರಿ ಯಂತ್ರೋಪಕರಣಗಳನ್ನು ಕಂಡು ಬೇಕಾದ ವಸ್ತುಗಳನ್ನು ಜನ ಖರೀದಿಸಿದರು.
2 ರೂ.ಗೆ ಕೆ.ಜಿ ಗೊಬ್ಬರ!
ದೇಸಿ ತಳಿ ರಾಸುಗಳು ಸಸ್ಯ, ಹೂರಾಶಿ ಹಾಗೂ ಸಾವಯವ ಕೃಷಿ ಬಗ್ಗೆ ಮಾಹಿತಿ ಮತ್ತು ಯಂತ್ರೋಪಕರಣಗಳ ಪ್ರದರ್ಶನ, ತಿಂಡಿ ತಿನಿಸುಗಳು, ಆಹಾರ ಮಳಿಗೆಗಳು, ಬೃಹದ್ಧಾಕಾರದ ಹಂದಿಗಳು ವಿಶೇಷವಾಗಿ ತಿರುಪತಿ ತಿಮ್ಮಪ್ಪನ ಪೂಜೆಗ ರಾಭಿಷೇಕ ನೀಡುವ ಪೊಂಗನೂರು ಹಸುಗಳು, ಬಾಹುಬಲಿ ಅಪರೂಪದ ತಳಿ ಜೆಬ್ರಾಬಾದಿ ಎಮ್ಮೆಗಳು, ಬೆಂಗಳೂರು ಬೇಗೂರು ಶ್ರೀಕೃಷ್ಣ ಗೋಶಾಲೆಯ ಕಾಶಿ ಗಂಗಾತೀರ ತಳಿ, ರಾಜಸ್ಥಾನದ ನಾಟಿ ತಳಿ ಹಸು, ಎಮ್ಮೆ ಪ್ರದರ್ಶನ, ಎಲ್ಲ ಬಗೆಯ ಸಿರಿ ಧಾನ್ಯಗಳ ಪ್ರದರ್ಶನ ಒಂದೆಡೆಯಾದರೆ ನಗರಸಭೆ ಸಂಗ್ರಹಿಸಿದ್ದ ಕಸದಿಂದ ತಯಾರಿಸಿದ ಗೊಬ್ಬರವನ್ನು 2 ರೂ. ಕೆಜಿತಯಂತೆ ರೈತರು ಖರೀದಿಸಿದ್ದು ವಿಶೇಷವಾಗಿತ್ತು.