ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಮನವಿ ಸಲ್ಲಿಸಿದ ಸ್ಯಾಂಡಲ್ ವುಡ್ ಗಣ್ಯರು
- ಕಲಾವಿದರ ಸಂಘದ ಭವನದಲ್ಲಿ ಚಂದನವನ: ಅಂದು-ಇಂದು-ಮುಂದು ವಿಚಾರ ಸಂಕಿರಣ
- ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸವಾಲು-ಸಮಸ್ಯೆಗಳ ಕುರಿತು ಚರ್ಚೆ
- ಪಿ.ಶೇಷಾದ್ರಿ, ಕೆ.ವಿ.ಚಂದ್ರಶೇಖರ್, ಭಾರ್ಗವ ಅವರಿಂದ ವಿಚಾರ ಮಂಡನೆ
ಬೆಂಗಳೂರು: ಏಕೀಕರಣಕ್ಕೂ ಮುನ್ನ ಕನ್ನಡಿಗರನ್ನು ಒಗ್ಗೂಡಿಸಿದ್ದು ಕನ್ನಡ ಚಿತ್ರರಂಗ. ಹಾಗಾಗಿ, ಭಾಷೆ ಅಸ್ಮಿತೆ ಸಾರುವ, ನೆಲದ ಸೊಗಡಿನ ಚಿತ್ರಗಳು ಹೆಚ್ಚು ಬರುವಂತಾಗಲಿ ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಅಭಿಪ್ರಾಯಪಟ್ಟರು.
ಚಾಮರಾಜಪೇಟೆಯ ಕಲಾವಿದರ ಸಂಘದ ಭವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಚಂದನವನ: ಅಂದು, ಇಂದು, ಮುಂದು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ‘ಕನ್ನಡ ಚಿತ್ರರಂಗಕ್ಕೆ 93 ವರ್ಷ ಅಲ್ಲ, ನೂರು ವರ್ಷಗಳ ಇತಿಹಾಸವಿದೆ. ‘ಸತಿ ಸುಲೋಚನಾ’ ತೆರೆ ಕಾಣುವ ಮುಂಚೆ 150ಕ್ಕೂ ಅಧಿಕ ಮೂಕೀ ಚಿತ್ರಗಳು ಬಿಡುಗಡೆಯಾಗಿದ್ದವು. ಚಿತ್ರರಂಗಕ್ಕೆ ಈ ವಿಚಾರ ಸಂಕಿರಣ ಅಗತ್ಯವಿತ್ತು. ಅಂದಿನ ಸಿನಿಮಾಗಳ ಯಶಸ್ಸು ಇಂದಿನ ಚಿತ್ರಗಳಿಗೆ ಪ್ಲೇ ಬಟನ್ ಇದ್ದಂತೆ. ಏನೇ ಬದಲಾವಣೆಯಾದರೂ, ಇಂದೇ ಆಗಬೇಕು ಹಾಗೂ ಮುಂದಿನ ದಿನಗಳ ಬಗ್ಗೆ ನಿರೀಕ್ಷೆ ಇರಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಪ್ರೇಕ್ಷಕರನ್ನು ಗೌರವಿಸಿ
ಚಿತ್ರರಂಗಗಳು ಮೊದಲು ಪ್ರೇಕ್ಷಕರಿಗೆ ಆದ್ಯತೆ ನೀಡಿ, ಅವರನ್ನು ಗೌರವಿಸಬೇಕು. ಹಾಗಾಗಿ, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಬೇಕು. ಸದ್ಯ ಕನ್ನಡ ಚಿತ್ರರಂಗವು ಸಾಧ್ಯತೆಯನ್ನು ವಿಸ್ತರಿಸಿದೆ. ‘ಕೆಜಿಎ್’, ‘ಕಾಂತಾರ’ ಸರಣಿಗಳಿಂದ ಕನ್ನಡ ಸಿನಿಮಾಗಳು ವಿಶ್ವಮಟ್ಟಕ್ಕೆ ತಲುಪಿವೆ ಎಂದು ರಮೇಶ್ ಅರವಿಂದ್ ಹೇಳಿದರು. ಹಾಗೇ ಎಐನಿಂದ (ಕೃತಕಬುದ್ದಿಮತ್ತೆ) ಚಿತ್ರರಂಗದಲ್ಲಿ ಎಲ್ಲವೂ ಬದಲಾಗುತ್ತಿದೆ. ಎಐ ನೆರವಿನಿಂದ ಒಬ್ಬ ವ್ಯಕ್ತಿ ಇಡೀ ಸಿನಿಮಾ ಮಾಡುತ್ತಾನೆ ಎಂದರೆ ಅದರ ಶಕ್ತಿಯನ್ನು ನಾವು ಅರಿಯಬೇಕಿದೆ. ಜಾಣ್ಮೆಯಿಂದ ತಂತ್ರಜ್ಞಾನವನ್ನು ಬಳಸಬೇಕು’ ಎಂದು ಹೇಳಿದರು.
ಮನೋವಿಕಾಸಕ್ಕೆ ಸಿನಿಮಾ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಮಾತನಾಡಿ, ‘ಕನ್ನಡ ಚಿತ್ರರಂಗದ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಲು ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಇದು ಜವಾಬ್ದಾರಿ, ಜತೆಗೆ ನಮ್ಮೆಲ್ಲರ ಕನಸು. ಹೊಸ ತಂತ್ರಜ್ಞಾನ, ಕೌಶಲ ಅರಿಯುವ ನಿಟ್ಟಿನಲ್ಲಿ ಇನ್ನುಮುಂದೆ ಮೂರು ತಿಂಗಳಿಗೊಮ್ಮೆ ವಿಚಾರ ಸಂಕಿರಣ ಆಯೋಜಿಸಲಾಗುವುದು. ಭಾಷೆ ಮತ್ತು ನಾಡಿನ ಅಸ್ಮಿತೆಯನ್ನು ಸಿನಿಮಾ ಪ್ರತಿನಿಧಿಸಬೇಕು’ ಎಂದರು. ರಾಜ್ಯ ಸರ್ಕಾರದ ವತಿಯಿಂದ ಕನ್ನಡ ಚಿತ್ರಗಳಿಗಾಗಿ ಒಟಿಟಿ, ಸಬ್ಸಿಡಿ ಹೆಚ್ಚಳ, ಕಲಾವಿದರಿಗೆ ನಿವೇಶನ ಸೇರಿ ಏಳು ಬೇಡಿಕೆಯುಳ್ಳ ಮನವಿಯನ್ನು ಡಾ.ಜಯಮಾಲಾ ನೇತೃತ್ವದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು.
ಜೂನ್‌ನಲ್ಲಿ ರಾಜ್ಯ ಪ್ರಶಸ್ತಿ ಪ್ರದಾನ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ‘ಅಂದಿನ ಕಾಲದಲ್ಲಿ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅವರ ಸಿನಿಮಾಗಳು ಭಾಷೆ, ರೈತ, ಕಾರ್ಮಿಕ ಚಳುವಳಿಗೆ ವೇದಿಕೆಯಾಗಿದ್ದವು. ಇಂದಿನ ಸಿನಿಮಾಗಳು ವಾಣಿಜ್ಯಕ್ಕೆ ಮಾತ್ರ ಸೀಮಿತವಾಗಿವೆ. ಹಾಗಾಗಿ, ಎಷ್ಟು ಗಳಿಕೆ ಮಾಡಿದ್ದೇವೆ ಎನ್ನುವುದಕ್ಕಿಂತ ಎಷ್ಟು ಪ್ರೇಕ್ಷಕರನ್ನು ತಲುಪಿದ್ದೇವೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಪ್ರೇಕಕರಿಗಾಗಿ ಸಿನಿಮಾ ಮಾಡಿ, ಹೀರೋಗಳಿಗಲ್ಲ. ಕರ್ನಾಟಕ ರತ್ನ ಪ್ರಶಸ್ತಿ ಮತ್ತು ಬಾಕಿ ಉಳಿದಿರುವ ರಾಜ್ಯ ಪ್ರಶಸ್ತಿಯನ್ನು ಜೂನ್‌ನಲ್ಲಿ ಪ್ರದಾನ ಮಾಡಲಾಗುವುದು’ ಎಂದು ಹೇಳಿದರು.
"
ಸಿನಿಮಾ ನಿರ್ವಹಣೆ ವೆಚ್ಚ ಹೆಚ್ಚುತ್ತಿದೆ. ಒಂದು ಸಿನಿಮಾ ನಿರ್ಮಾಣವಾಗಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ವಿವಿಧ ರೂಪದಲ್ಲಿ ಅಂದಾಜು 3 ಲಕ್ಷ ಕಟ್ಟುತ್ತೇವೆ ಹೀಗಿರುವಾಗ, 10 ಲಕ್ಷ ಸಬ್ಸಿಡಿ ಸಾಕಾಗುತ್ತದೆಯೇ? ಹೀಗಾಗಿ 25 ಲಕ್ಷಕ್ಕೆ ಸಬ್ಸಿಡಿ ಹೆಚ್ಚಿಸಬೇಕು.
— ಪಿ.ಶೇಷಾದ್ರಿ, ನಿರ್ದೇಶಕ