ರಾಮನಗರದಲ್ಲಿ ಜಂತು ಹುಳು ನಿವಾರಣ ದಿನಾಚರಣೆಯ ಪೋಸ್ಟರ್​ ಅನ್ನು ಜಿಲ್ಲಾಧಿಕಾರಿ ಯಶವಂತ್​ ವಿ. ಗುರುಕರ್​ ಬಿಡುಗಡೆ ಮಾಡಿದರು. ಡಿಎಚ್​ಒ ಡಾ.ಬಿ.ಎಸ್​.ನಿರಂಜನ್​, ಡಿಎಸ್​ ಡಾ.ಮಂಜುನಾಥ್​ ಮುಂತಾದವರು ಇದ್ದರು. 
ಬೆಂಗಳೂರು ದಕ್ಷಿಣ

ಜಂತುಹುಳ ಮುಕ್ತ ಸಮಾಜ ನಿಮಾರ್ಣಕ್ಕೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಯಶವಂತ್​ ವಿ. ಗುರುಕರ್​ ಸೂಚನೆ
  • ಜಿಲ್ಲೆಯಲ್ಲಿ ಶೇ. 100 ಗುರಿ ಸಾಧಿಸಲು ಕ್ರಮ
  • 10ರಂದು ಆರೋಗ್ಯ, ಕುಟುಂಬ ಇಲಾಖೆ ಆಯೋಜನೆ
ರಾಮನಗರ
ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಆ.10 ರಂದು ಆರೋಗ್ಯ ಮತ್ತು ಕುಟುಂಬ ಇಲಾಖೆಯು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯನ್ನು ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಯಶವಂತ್​ ವಿ. ಗುರುಕರ್​ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಜಂತುಹುಳು ರಹಿತ ಮಕ್ಕಳು-ಆರೋಗ್ಯವಂತ ಮಕ್ಕಳು ಎಂಬ ಮಾಹಿತಿಯುಳ್ಳ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಕಾರ್ಯಕ್ರಮದ ಅಂಗವಾಗಿ 1-&19 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಜಂತು ಹುಳು ನಾಶಕ ಮಾತ್ರೆಯನ್ನು ಎಲ್ಲ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಜಂತುಹುಳುಗಳನ್ನು ಹೊಂದಿರುವ ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತ ಹೀನತೆಯಿಂದಾಗಿ ಸದಾ ಬಳಲಿದಂತಿರುತ್ತಾರೆ. ಇದರಿಂದ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಬಲ್ಲದು. ಜಂತುಹುಳುಗಳಿಂದ ಮಕ್ಕಳನ್ನು ರಕ್ಷಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಕ್ಕಳು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿದರು.
ಆ.10ರ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಜಂತುಹುಳು ನಾಶಕ ಮಾತ್ರೆ ನೀಡದೇ ಬಾಕಿ ಇರುವ ಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು. -ದಾಖಲಾಗುವ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಯನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತದೆ. ಮಾತ್ರೆಗಳನ್ನು ತೆಗೆದುಕೊಳ್ಳದೇ ಬಿಟ್ಟು ಹೋದ ಮಕ್ಕಳಿಗೆ ಆ.17 ರಂದು ನಡೆಯುವ ಮಾಪ್​ಆಪ್​ ದಿನದಂದು ಮಾತ್ರೆ ನೀಡುವ ಮೂಲಕ ಜಿಲ್ಲೆಯಲ್ಲಿ ಶೇ. 100 ಗುರಿ ಸಾಧಿಸಬೇಕು. ಜಿಲ್ಲೆಯ ಎಲ್ಲ ಮಕ್ಕಳ ಪೋಷಕರು ಇದರ ಸದುಪಯೋಗ ಪಡೆದುಕೊಂಡು ಜಂತುಹುಳ ಮುಕ್ತ ಸಮಾಜ ನಿಮಾರ್ಣಕ್ಕೆ ಸಹಕರಿಸಬೇಕೆಂದರು.
ತಾಯಿ ಮರಣ ಹಾಗೂ ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಗರ್ಭಿಣಿ-ರು ಮತ್ತು ಬಾಣಂತಿಯರ ಮನೆಗೆ ಭೇಟಿ ನೀಡಿ ನಿಯಮಿತವಾಗಿ ತಪಾಸಣೆ ಮಾಡಿಸಬೇಕು ಎಂದ ಜಿಲ್ಲಾಧಿಕಾರಿ ತಿಳಿಸಿದರು.
ಮಳೆಗಾಲ ಆರಂಭವಾಗಿದ್ದು ಮಲೇರಿಯಾ, ಡೆಂಗ್ಯೂ, ಚಿಕೂನ್​ ಗುನ್ಯಾ ಇನ್ನಿತರ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಲು, ಮನೆಯ ಸುತ್ತಮುತ್ತಲಿನ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಛತೆ ಕಾಪಾಡಪಾಬೇಕು. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಹಾಗೂ ಗ್ರಾಮ-ನಗರ ಪ್ರದೇಶಗಳಲ್ಲಿ ಜನ-ಜಾಗೃತಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್​, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್​, ಜಿಲ್ಲಾ ಆರ್​.ಸಿ.ಎಚ್​ ಅಧಿಕಾರಿ ಡಾ. ಚಂದ್ರಶೇಖರಯ್ಯ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಕುಮಾರ್​, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪದ್ಮಾವತಿ ಸೇರಿ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಇತರರು ಇದ್ದರು.
ಪ್ರಸಕ್ತ ಸಾಲಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಒಟ್ಟು 2,32,084 ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಯನ್ನು ನೀಡಲು ಗುರಿ ಹೊಂದಲಾಗಿದೆ. 1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಹಾಗೂ 2 ರಿಂದ 19 ವರ್ಷದ ಮಕ್ಕಳಿಗೆ ಒಂದು ಸಂಪೂರ್ಣ ಮಾತ್ರೆಯನ್ನು ನೀಡಲಾಗುವುದು.
> ಯಶವಂತ್​ ವಿ. ಗುರುಕರ್​, ಜಿಲ್ಲಾಧಿಕಾರಿ