ಅಚ್ಚಲು ಬೆಟ್ಟದ ಸುಂದರ ನೋಟ.  
ಬೆಂಗಳೂರು ದಕ್ಷಿಣ

ನಾಡಪ್ರಭುಗಳ ನೆಚ್ಚಿನ ತಾಣ ಅಚ್ಚಲು ದುರ್ಗ

ಪ್ರಮುಖ ಮುಖ್ಯಾಂಶಗಳು

  • ಬಾನೆತ್ತರದ ಹೆಬ್ಬಂಡೆ, ಹಸಿರು ವನಸಿರಿ
  • ಝುಳು ಝುಳು ಹರಿವ ಅರ್ಕಾವತಿ ಪಕ್ಕದ ಗ್ರಾಮ
ರಾಮನಗರ
ಒಂದೆಂಡೆ ಇತಿಹಾಸ ಸಾರುವ ಬಾನೆತ್ತರದ ಹೆಬ್ಬಂಡೆ, ಸುತ್ತಲೂ ಹಸಿರು ತುಂಬಿದ ಪ್ರದೇಶ, ಮತ್ತೊಂದೆಡೆ ಜುಳು ಜುಳು ನೀನಾದೊಂದಿಗೆ ಹರಿವ ಅರ್ಕಾವತಿ... ಸುಂದರ ಪ್ರಕೃತಿ, ವನಸಿರಿ ಮಧ್ಯೆ ಕೃಷಿ ಪ್ರಧಾನವಾಗಿ, ಸಾಮಾಜಿಕವಾಗಿ ಗುರುತಿಸಿಕೊಂಡಿರುವುದು ಅಚ್ಚಲು ಗ್ರಾಮ.
ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ಅಚ್ಚಲು ಗ್ರಾಮ ತನ್ನದೇ ಪ್ರಕೃತಿ ಶ್ರೀಮಂತಿಕೆ ಹೊಂದಿದೆ. ಸುಮಾರು 3 ಸಾವಿರ ಹೆಕ್ಟೇರ್ ವಿಸ್ತಾರ ಹೊಂದಿದ ಗ್ರಾಮ ಜಿಲ್ಲಾ ಕೇಂದ್ರದಿಂದ 3 ಕಿಮೀ ಅಂತರದಲ್ಲಿದೆ. 250ಕ್ಕೂ ಹೆಚ್ಚು ಕುಟುಂಬಗಳಿದ್ದು, ಅಂದಾಜು 1200 ಜನಸಂಖ್ಯೆ ಇದೆ.
ಇಲ್ಲಿನ ಬೆಟ್ಟದಲ್ಲಿ ಪಾಳೇಗಾರರು ಆಡಳಿತ ನಡೆಸಿದ್ದರು, ಮಾಗಡಿ ಕೆಂಪೇಗೌಡರು ಬೇಸಿಗೆ ದಿನ ಕಳೆಯಲು ಇಲ್ಲಿಗೆ ಬರುತ್ತಿದ್ದರು ಎಂಬ ಮಾತಿದೆ.

ಉತ್ತಮ ರಸ್ತೆ ಸಂಪರ್ಕ

ಗ್ರಾಮ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, ಕನಕಪುರ-ರಾಮನಗರ ರಾಜ್ಯ ಹೆದ್ದಾರಿಗೆ ಅಂಟಿಕೊAಡಿದೆ. ಕಾಂಕ್ರೀಟ್ ಮನೆ, ಸಿಸಿ ರಸ್ತೆ, ವೈಜ್ಞಾನಿಕ ಚರಂಡಿ ವ್ಯವಸ್ಥೆ ಇದೆ. ಅರ್ಕಾವತಿ ನದಿ ಗ್ರಾಮದ ಕೆಳ ಭಾಗದಲ್ಲಿರುವ ಕಾರಣ ನದಿ ಅಕ್ಕಪಕ್ಕದ ಜಮೀನಿಗಷ್ಟೇ ನೀರಾವರಿ ಸೌಲಭ್ಯ ಇದ್ದು, ಮಿಕ್ಕೆಲ್ಲ ಮಳೆಯಾಶ್ರಿತ ಕೃಷಿ ಪ್ರದೇಶವೇ ಹೆಚ್ಚು. ಮಾವು, ರೇಷ್ಮೆ, ತೆಂಗು ಗ್ರಾಮದ ರೈತರ ಪ್ರಮುಖ ವಾಣಿಜ್ಯ ಬೆಳೆಗಳಾಗಿದ್ದು, ಭತ್ತ, ರಾಗಿ ಪ್ರಮುಖ ಬೆಳೆಗಳಾಗಿವೆ.

ಕೈಹಿಡಿದ ಹೈನುಗಾರಿಕೆ

ಗ್ರಾಮದಲ್ಲಿ 650 ಮತದಾರರಿದ್ದು, 1 ರಿಂದ 5ನೇ ತರಗತಿ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ, ಡೇರಿ ಇದೆ. ಅರ್ಕಾವತಿ ನದಿಯಿಂದಾಗಿ ಅಂತರ್ಜಲ ಉತ್ತಮವಾಗಿದ್ದು, ನದಿ ಅಂಚಿನ ಜಮೀನುಗಳ ಹೆಚ್ಚಿನ ರೈತರು ಕೃಷಿಯೊಂದಿಗೆ ಹೈನುಗಾರಿಕೆಯತ್ತಲೂ ಮುಖ ಮಾಡಿದ್ದಾರೆ.

ಯುವಕರಿಗೆ ಉದ್ಯೋಗ

ಕನಕಪುರ ರಾಮನಗರ ರಸ್ತೆಯ ಗ್ರಾಮಕ್ಕೆ ಹೊಂದಿಕೊAಡAತೆ ಸನಿಹದಲ್ಲೇ ಪ್ರತಿಷ್ಠಿತ ಎರಡು ಕಾರ್ಖಾನೆಗಳಿದ್ದು, ಗ್ರಾಮ ಸೇರಿದಂತೆ ಜಿಲ್ಲೆಯ ನೂರಾರು ಯುವಕರಿಗೆ ಉದ್ಯೋಗ ಸಿಕ್ಕಿದೆ.

ಐತಿಹಾಸಿಕ ಕುರುಹು

ಗ್ರಾಮದ ಪಕ್ಕದಲ್ಲೇ ಎತ್ತರದ ಬೆಟ್ಟವಿದ್ದು, ಸುಂದರ ಪ್ರಕೃತಿ ಸಿರಿ ಕೋಟೆ ಕೊತ್ತಲು ಹೊಂದಿದೆ. ಜಿಲ್ಲಾ ಪ್ರವಾಸಿ ತಾಣಗಳ ಪಟ್ಟಿಯಲ್ಲಿದ್ದರೂ ಪ್ರವಾಸಿತಾಣವಾಗಿಸುವಲ್ಲಿ ಆಡಳಿತ ಸೋತಿದೆ. ನೆಲಮಟ್ಟದಿಂದ ಒಂದು ಸಾವಿರ ಅಡಿಗೂ ಮಿಗಿಲಾದ ಎತ್ತರ ಹೊಂದಿರುವ ಬೆಟ್ಟ ಏಕಶಿಲೆಯಿಂದ ಕೂಡಿದೆ. ಚಾರಣಿಗರಿಗೆ ಉತ್ತಮ ಚಾರಣ ಸ್ಥಳವಾಗಿದೆ. ಬೆಟ್ಟದಲ್ಲಿ ರಾಜರು, ಪಾಳೆಗಾರರು ಆಳ್ವಿಕೆ ಮಾಡಿದ್ದರು, ಸೈನಿಕರು, ಜನವಸತಿ ಇತ್ತೆಂಬುದಕ್ಕೆ ಇಂದಿಗೂ ಬೆಟ್ಟದಲ್ಲಿರುವ ಕಲ್ಲಿನ ಕಟ್ಟಡದ ಕೋಟೆ, ಕಂಬಗಳು, ಅಳಿದುಳಿದ ಮನೆಗಳ ಗುರುತು, ಸುಡು ಬೇಸಿಗೆಯಲ್ಲೂ ತಂಪಾಗಿ ಇರುವ ಸಿಹಿ ನೀರಿನ ಕಲ್ಯಾಣಿ ಇದೆ.
ಬಂಡೆ ಮೇಲೆ ಕೆತ್ತಿರುವ ಆಂಜನೇಯ ವಿಗ್ರಹ, ಸುತ್ತಮುತ್ತಲ ಗ್ರಾಮಗಳ ಅನೇಕ ಕುಟುಂಬಗಳು ಇಂದಿಗೂ ಮನೆ ದೇವರಾಗಿ ಪೂಜಿಸಲ್ಪಡತ್ತಿರುವ ಹೊನ್ನಾರುತ್ತಮ್ಮ ದೇವಾಲಯ, ಬೆಟ್ಟ ಹತ್ತಲು ಮೆಟ್ಟಿಲುಗಳನ್ನು ಆ ಕಾಲದಲ್ಲಿಯೇ ಮಾಡಿರುವುದನ್ನು ಕಾಣಬಹುದಾಗಿದೆ. ಇನ್ನು ದಾಖಲೆಗಳಲ್ಲಿ ಅಚ್ಚಲು ದುರ್ಗವೆಂದು ಕರೆಯುವ ಈ ಪ್ರದೇಶ ಹಿಂದೆ ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿತ್ತು. ಬೇಸಿಗೆಯಲ್ಲಿ ಗೌಡರು ಇದನ್ನು ಗುಪ್ತವಾದ ವಾಸಸ್ಥಳ ಮಾಡಿಕೊಂಡಿದ್ದರು. ಅಶ್ವದಳ, ಸೈನಿಕರ ಅಡಗು ತಾಣವಾಗಿ ಮಾಡಿಕೊಂಡು ಇಲ್ಲಿಂದಲೇ ಆಳ್ವಿಕೆ ನಡೆಸುತ್ತಿದ್ದರೆಂದು ಕೆಲ ಹಿರಿಯರು ಬೆಟ್ಟದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತಾರೆ. ಮತ್ತೆ ಕೆಲವರು ಪಾಳೇಗಾರರು ಆಡಳಿತ ನಡೆಸುತ್ತಿದ್ದರು. ಆದರೆ ಅವರು ಯಾರು ಎಂದು ತಿಳಿದಿಲ್ಲ ಎನ್ನುತ್ತಾರೆ.

ಅಚ್ಚಲಮ್ಮ ಪಾದ

ಗ್ರಾಮದ ಪಕ್ಕದ ಬಂಡೆ ಮೇಲೆ ಅಚ್ಚಲಮ್ಮನ ಪಾದವೆಂದು ಪೂಜಿಸಲಾಗುತ್ತದೆ. ಮಳೆ ಬರದ ಸನ್ನಿವೇಶದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ವಿಶೇಷ ಪೂಜೆ ನಡೆಸಿ ಪರ ಮಾಡಿದರೆ ಮಳೆ ಬರುತ್ತದೆ ಎಂಬುದು ನಂಬಿಕೆ.

ಗ್ರಾಮದ ಇತಿಹಾಸ

ಗ್ರಾಮದಲ್ಲಿ ಈ ಹಿಂದೆ ಮುಸಲ್ಮಾನರು ಹೆಚ್ಚಾಗಿ ಇದ್ದರಂತೆ. ಆದರೆ ಸದ್ಯ ಅವರ ಒಂದು ಮನೆಯೂ ಗ್ರಾಮದಲ್ಲಿಲ್ಲ. ಎಲ್ಲರೂ ರಾಮನಗರಕ್ಕೆ ಬಹು ವರ್ಷಗಳ ಹಿಂದೆಯೇ ಸೇರಿದ್ದಾರೆÉ. ಸದ್ಯ ಕೆಲ ಪೂರ್ವಿಕರು ಸೇರಿದಂತೆ ಬೇರೆ ಬೇರೆ ಊರಿನಿಂದ ಬಂದು ಇಲ್ಲಿ ನೆಲೆ ಕಂಡುಗೊಂಡಿರುವವರು ಹೆಚ್ಚಿದ್ದಾರೆ. ಅಚ್ಚಲಮ್ಮ ಎಂಬ ದೇವರ ಹೆಸರಿನಿಂದ ಗ್ರಾಮ ನಿರ್ಮಾಣವಾಗಿದೆ ಎಂಬುದು ಹಿರಿಯರ ಮಾತು.

ದೇವಾಲಯಗಳು

ಆಂಜನೇಯ, ಲಕ್ಷ್ಮೀ, ಬೊಮ್ಮಲಿಂಗೇಶ್ವರ, ಅಚ್ಚಲಮ್ಮ, ಮಾರಮ್ಮ, ಬೆಟ್ಟದ ಆಂಜನೇಯ, ಹೊನ್ನಾರತಮ್ಮ ದೇವಾಲಯಗಳಿವೆ. ಆಯುಧಪೂಜೆ, ಯುಗಾಧಿ, ಗೌರಿ ಗಣೇಶ ಮತ್ತಿತರ ಸಂಧರ್ಭಗಳಲ್ಲಿ ಉತ್ಸವ, ವಿಶೇಷಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ.

ಅಚ್ಚಲು ಗ್ರಾಮ ಪೂರ್ವಿಕರ ಕಾಲದಿಂದಲೇ ಪ್ರಚಲಿತದಲ್ಲಿದೆ. ಹಚ್ಚ ಹಸಿರಿನ ಪರಿಸರ ಮಧ್ಯೆ ಇರುವ ಸುಂದರ ಗ್ರಾಮ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ. ಅರ್ಕಾವತಿ ನದಿ ಗ್ರಾಮದ ನೀರಿನ ಭವಣೆ ನೀಗಿಸಿದೆ. ಆದರೆ ನಗರದ ಕೊಳಚೆ ನೀರು ಈ ಭಾಗದಲ್ಲಿ ಸಮಸ್ಯೆ ಉಂಟು ಮಾಡಿದ್ದು, ಅಂತರ್ಜಲ ಕಲುಷಿತಗೊಳ್ಳುತ್ತಿದೆ. ನದಿ ನೀರು ಶುದ್ಧೀಕರಣಕ್ಕೆ ಅಧಿಕಾರಿಗಳು ಕ್ರಮವಹಿಸಬೇಕು.
| ವೆಂಕಟರಾಜು
ಅಚ್ಚಲು ಗ್ರಾಮಸ್ಥ

ಅಚ್ಚಲು ಗ್ರಾಮ ಧಾರ್ಮಿಕ, ಶೈಕ್ಷಣಿಕವಾಗಿ ಸಾಮಾಜಿಕ ಕ್ಷೇತ್ರಗಳಲ್ಲಿ ಸದಾ ಮುಂದಿದೆ. ಗ್ರಾಮದ ಸನಿಹದಲ್ಲೇ ಅಚ್ಚಲು ಬೆಟ್ಟವಿದ್ದು, ಒಂದು ದಿನದ ಭೇಟಿಗೆ ಉತ್ತಮ ಪ್ರವಾಸಿ ತಾಣವಾಗಿದೆ. ರಾಜರು, ಪಾಳೇಗಾರರು ಆಡಳಿತ ನಡೆಸಿದ್ದರು ಎನ್ನಲಾಗಿರುವ ಇತಿಹಾಸ ಹೇಳುವ ಅನೇಕ ಕುರುಹುಗಳು ಬೆಟ್ಟದಲ್ಲಿ ರಕ್ಷಣೆ ಇಲ್ಲದೆ ಅಳಿದುಹೋಗುತ್ತಿವೆ. ಬೆಟ್ಟದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜ ನೀಡಬೇಕಿದೆ. ಸೇನಾಪತಿ ವೈಟ್ಲೆ ಕಾರ್ಖಾನೆ ಗ್ರಾಮದ ಯುವಕರಿಗೆ ಉದ್ಯೋಗ ನೀಡಿದೆ. ಸುಂದರ ಪ್ರಕೃತಿ ಹೊಂದಿರುವ ಈ ಗ್ರಾಮದಲ್ಲಿ ಜನಿಸಿರುವ ನಾವೇ ಧನ್ಯರು.
| ಗೋಪಾಲ್
ಅಚ್ಚಲು ಗ್ರಾಮಸ್ಥ.