ರವಿ ಕುಮಾರ್​ ಯಾದವ್​ 
ಬೆಂಗಳೂರು ದಕ್ಷಿಣ

ಜೋಡಿ ಕೊಲೆ ಆರೋಪಿ ಬಂಧನ

ಬಿಡದಿ: ಜೋಡಿ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು 4 ವರ್ಷಗಳ ನಂತರ ಬಿಡದಿ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ರವಿ ಕುಮಾರ್​ ಯಾದವ್​(29) ಬಂಧಿತ. ಬಿಡದಿ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ಈತನನ್ನು ಗುಜರಾತ್​ ರಾಜ್ಯದ ಗಿರಿಪುರ ಗ್ರಾಮದಲ್ಲಿ ಮಂಗಳವಾರ ಬಂಧಿಸಲಾಗಿದೆ.
ಘಟನೆ ಹಿನ್ನೆಲೆ: 2022ರ ಫೆ.8ರಂದು ಬಿಡದಿಯ ಪ್ರತಿಷ್ಠಿತ ಈಗಲ್​ ಟನ್​ ರೆಸಾರ್ಟ್​ನ ವಿಲ್ಲಾದಲ್ಲಿ ರು ರಾಜನ್​ ಹಾಗೂ ಪತ್ನಿ ಆಶಾ ರಾಜನ್​ ದಂಪತಿ ಕೊಲೆಯಾಗಿತ್ತು. ಅವರ ಮನೆ ಕೆಲಸಕ್ಕಿದ್ದ ಜೋಗಿಂದರ್​ ಯಾದವ್​ ಹಾಗೂ ರವಿಕುಮಾರ್​ ಯಾದವ್​ ದಂಪತಿಯನ್ನು ಕೊಲೆ ಮಾಡಿ ಹಣ ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಪ್ರಕರಣದ ಮೊದಲ ಆರೋಪಿ ಜೋಗಿಂದರ್​ ಯಾದವ್​ನನ್ನು ಬಂಧಿಸಲಾಗಿತ್ತು. ಆದರೆ ರವಿಕುಮಾರ್​ ತಲೆ ಮರೆಸಿಕೊಂಡಿದ್ದ. 4 ವರ್ಷಗಳ ಬಳಿಕ ಬಿಡದಿ ಪೊಲೀಸರು ಗುಜರಾತ್​ನಲ್ಲಿ ಬಂಧಿಸಿ ಅಲ್ಲಿನ ಸ್ಥಳಿಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ಬಿಡದಿ ಠಾಣೆಗೆ ಕರೆತಂದರು. ನಂತರ ಬುಧವಾರ ರಾಮನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಧೀಶರ ಆದೇಶದಂತೆ ಜಿಲ್ಲಾ ಕಾರಗೃಹಕ್ಕೆ ರವಾನಿಸಲಾಗಿದೆ.
ಆರೋಪಿ ಮೇಲೆ ನಿಗಾ
ಜೋಡಿ ಕೊಲೆ ಪ್ರಕರಣ ಬಾರಿ ಸದ್ದು ಮಾಡಿತ್ತು. ಪೊಲೀಸರಿಗೆ ಈ ಪ್ರಕರಣ ಕಠಿಣ ಸವಾಲಾಗಿತ್ತು. ಇತ್ತೀಚೆಗಷ್ಟೇ ಠಾಣೆಗೆ ವರ್ಗಾವಣೆಯಾಗಿದ್ದ ಸಿಪಿಐ ವಿಜಯ್​ ಕುಮಾರ್​ ಈ ಪ್ರಕರಣದ ಆರೋಪಿ ಪತ್ತೆಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ರವಿಕುಮಾರ್​ ಗುಜರಾತ್​ ರಾಜ್ಯದಲ್ಲಿ ಇರುವುದು ಗೊತ್ತಾಗುತ್ತಿದಂತೆ, ವಿಜಯ್​ ಕುಮಾರ್​ ನೇತೃತ್ವದಲ್ಲಿ ಪಿಎಸ್​ಐಗಳಾದ ಅಣ್ಣಯ್ಯ, ಏಕಾಂಬರೇಶ್ವರ, ಸಿಬ್ಬಂದಿ ಲಿಂಗರಾಜು, ಕಾಂತರಾಜು, ಅನ್ವರ್​ ಒಳಗೊಂಡ ವಿಶೇಷ ತಂಡ ಗುಜರಾತ್​ಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.