ಕೈಲಾಂಚ: ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟ ಏರುವಾಗ ಕಾಲು ಜಾರಿ, ಕಂದಕಕ್ಕೆ ಬಿದ್ದು ಭಕ್ತನೊಬ್ಬ ಭಾನುವಾರ ಮೃತಪಟ್ಟಿದ್ದಾನೆ.
ರಾಮನಗರ ತಾಲೂಕು ಬಿಡದಿ ಹೋಬಳಿಯ ಬಿಲ್ ಕೆಂಪನಹಳ್ಳಿ ನಿವಾಸಿ, ಬಿಎಂಟಿಸಿ ನಿವೃತ್ತ ಚಾಲಕ ರೇವಣ್ಣ (65) ಮೃತರು. ಅವ್ವೇರಹಳ್ಳಿ ದೇವಾಲಯಕ್ಕೆ ಸಹೋದರನೊಂದಿಗೆ ಬಂದಿದ್ದ ರೇವಣ್ಣ ಅವರು, ಭಾನುವಾರ ಬೆಳಗ್ಗೆ 8.30ರ ಸುಮಾರಿಗೆ ಭೀಮೇಶ್ವರ ದೇವಾಲಯದಿಂದ ಸ್ವಲ್ಪ ದೂರದಲ್ಲಿ ಕಡಿದಾದ ಮೆಟ್ಟಿಲು ಹತ್ತುವಾಗ ಪಕ್ಕದಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದು, ಈ ವೇಳೆ ಆಯತಪ್ಪಿ ಬಂಡೆ ಮೇಲೆ ಉರುಳಿದ್ದಾರೆ. ಬೆಟ್ಟ ಕಡಿದಾದ ಇಳಿಜಾರಿದ್ದ ಕಾರಣ ರೇವಣ್ಣ ಅವರು ನೇರವಾಗಿ ಕಂದಕಕ್ಕೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇಕ್ಕಟ್ಟಾದ, ಗಿಡ&ಗಂಟಿ ಮಧ್ಯೆ ಸಿಕ್ಕಿಕೊಂಡಿದ್ದ ಮೃತ ದೇಹವನ್ನು ದೇವಾಲಯದ ಸ್ವಚ್ಛತಾ ಸಿಬ್ಬಂದಿ ನೆರವಿನೊಂದಿಗೆ ಅಗ್ನಿಶಾಮಕ ದಳ ಹಾಗೂ ಪೊಲೀಸರ ಜೋಲಿ ಕಟ್ಟಿಕೊಂಡು ಮೇಲೆತ್ತಿ, ಮರಣೋತ್ತರ ಪರೀೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಲ್ ಇನ್ಸ್ಪೆಕ್ಟರ್ ಮುರಳಿ, ಸಬ್ಇನ್ಸ್ಪೆಕ್ಟರ್ ಸಿದ್ದರಾಜು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗಂಗರಾಜು ಸ್ಥಳಪರಿಶೀಲಿಸಿದರು. ಅಗಿಶಾಮಕ ದಳದ ಮುತ್ತಣ್ಣ ಲಮಾಣಿ, ವಿಜಯಕುಮಾರ್, ಸಂತೋಷ್ ಪಾಟೀಲ್, ಬಸವನಗೌಡ ಪಾಟೀಲ್ ಇದ್ದರು.