ಕನಕಪುರದ ಪತ್ರ ಬರಹಗಾರರ ಸಂದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ವೃತ್ತಿಪರ ದಸ್ತಾವೇಜು ಬರಹಗಾರರ ಸಂದ ಅಧ್ಯಕ್ಷ ಮುರಳೀಧರ್, ಸಂದ ಸದಸ್ಯರಾದ ಮಂಜುನಾಥ್, ಮಹದೇವಪ್ರಸಾದ್, ಕಾಂತರಾಜು, ಪ್ರೇಮಚಂದ್ರಗುರು ಉಪಸ್ಥಿತರಿದ್ದರು.
ಕನಕಪುರ: ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆರ್ಸಿ ಮತ್ತು ಇತರ ನೋಂದಣಿ ಪ್ರಕ್ರಿಯೆಯನ್ನು ಡಿಜಟಲೀಕರಣಗೊಳಿಸುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ವೃತ್ತಿಪರ ದಸ್ತಾವೇಜು ಬರಹಗಾರರ ಸಂದ ಅಧ್ಯಕ್ಷ ಮುರಳೀಧರ್ ಒತ್ತಾಯಿಸಿದರು.
ನಗರದ ಸಬ್ ರಿಜಿಸ್ಟರ್ ಕಚೇರಿ ಸಮೀಪವಿರುವ ಸಂದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಬ್ರಿಜಿಸ್ಟ್ರರ್ ಕಚೇರಿಯಗಳಲ್ಲಿ ಕಾಗದ ರಹಿತ ನೋಂದಣಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹೊಸ ಡಿಜಿಟಲ್ ವ್ಯವಸ್ಥೆಯಿಂದ ತಾಂತ್ರಿಕ ತೊಂದರೆಗಳು ಮತ್ತು ಅನಾನುಕೂಲಗಳು ಎದುರಾಗಬಹುದು. ಹಾಗಾಗಿ ಈ ವ್ಯವಸ್ಥೆಯನ್ನು ಕೈಬಿಡಬೇಕು ಇಲ್ಲವೇ ಮರುಪರಿಶೀಲಿಸಬೇಕು ಎಂದರು.
ಆಸ್ತಿ ನೋಂದಣಿ ಮಾಡುವ ಕ್ರಯ ಪತ್ರಗಳೊಂದಿಗೆ ಜನರಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ಮುಂದಿನ ತಲೆಮಾರಿನವರಿಗೆ ಕ್ರಯಪತ್ರಗಳನ್ನು ಕೊಡುಗೆಯಾಗಿ ಕೊಡುತ್ತಾರೆ. ಕಷ್ಟದ ಸಮಯದಲ್ಲಿ ಅಡಮಾನವಿಟ್ಟು ಸಾಲ ಸೌಲಭ್ಯ ಪಡೆಯುತ್ತಾರೆ, ಪೇಪರ್ಲೆಸ್ ಕ್ರಯ ಮಾಡುವುದರಿಂದ ಇಂತಹ ವ್ಯವಹಾರಗಳಿಗೆ ಅವಕಾಶ ಇರುವುದಿಲ್ಲ ಎಂದರು. ಗ್ರಾಮೀಣ ಭಾಗದ ಜನರು ಅನಕ್ಷರಸ್ಥರು ಮತ್ತು ಡಿಜಿಟಲ್ ವ್ಯವಸ್ಥೆಯ ಬಗ್ಗೆ ಅರಿವು ಇಲ್ಲದವರು, ಪೇಪರ್ ಲೇಸ್ ಡಿಜಿಟಲ್ ವ್ಯವಸ್ಥೆ ಜಾರಿಗೆ ತರುವುದರಿಂದ ತಾವು ಕ್ರಯ ಮಾಡಿಕೊಳ್ಳುವ ಬಗ್ಗೆ ಅವರಿಗೆ ಅರಿವಿಲ್ಲದಾಗುತ್ತದೆ. ಒಟಿಪಿ ಪಡೆಯುವುದು ಕಷ್ಟವಾಗುತ್ತದೆ ಎಂದರು.
ಕ್ರಯ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾರಾಟಗಾರರು ಮತ್ತು ಖರೀದಿದಾರರ ನಡುವೆ ವ್ಯತ್ಯಾಸವಾಗಿ ನೋಂದಣಿ ರದ್ದಾದರೆ, ನೋಂದಣಿ ಶುಲ್ಕ ವಾಪಸ್ ಆಗುವುದಿಲ್ಲ. ಸಮಸ್ಯೆ ಪರಿಹರಿಸಿಕೊಂಡು ಮುಂದೆ ವ್ಯವಹರಿಸಲು ಕಷ್ಟವಾಗುತ್ತದೆ. ಇದರಿಂದ ಪೇಪರ್ ಲೆಸ್ ನೋಂದಣಿ ಗೊಂದಲವಾಗುತ್ತದೆ ಎಂದರು. ಸಂದ ಜಿಲ್ಲಾ ಸಂಚಾಲಕ ಮಂಜುನಾಥ್, ನಿರ್ದೇಶಕರಾದ ಮೋಹನ್ ಕುಮಾರ್, ಕೆ.ಪಿ.ವೆಂಕಟೇಶ್ ಸೇರಿದಂತೆ ಹಲವರು ಇದ್ದರು.
ಆಸ್ತಿಗಳ ವಿಲ್ ಮಾಡುವ ಸಂದರ್ಭದಲ್ಲಿ ವಿಲ್ಅನ್ನು ಗೌಪ್ಯವಾಗಿಟ್ಟು ಮರಣದ ನಂತರ ವಿಲ್ ಪಡೆದವರಿಗೆ ಅದರ ಹಕ್ಕು ಜಾರಿ ಆಗಬೇಕು. ಆದರೆ, ಡಿಜಿಟಲ್ ನೋಂದಣಿಯಿಂದ ವಿಲ್ ಪ್ರಕ್ರಿಯೆಗೆ ತೊಂದರೆ ಆಗುತ್ತದೆ. ಇದರಲ್ಲಿ ಗೌಪ್ಯತೆ ಇರುವುದಿಲ್ಲ, ದಾಖಲಾತಿಗೂ ಅವಕಾಶ ಇರುವುದಿಲ್ಲ ಎಂದು ಮುರಳೀಧರ್ ಎಚ್ಚರಿಸಿದರು. ನೋಂದಣಿ ಪ್ರಕ್ರಿಯೆ ದಾಖಲಾತಿ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಮೂರು ಬಾರಿ ಒಟಿಪಿ ಕೊಡಬೇಕಿದೆ. ಇದರಿಂದ ಸಾರ್ವಜನಿಕವಾಗಿ ತೊಂದರೆ ಆಗುತ್ತದೆ. ಕೀಪ್ಯಾಡ್ ಫೋನ್ಗಳಿಗೆ ಸರಿಯಾಗಿ ಒಟಿಪಿಯೇ ಬರುವುದಿಲ್ಲ, ಅಲ್ಲದೆ, ಒಟಿಪಿ ಪಡೆದು ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪೇಪರ್ ಲೆಸ್ ನೋಂದಣಿಯಿಂದ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತದೆ ಎಂದು ಮಾಹಿತಿ ನೀಡಿದರು.
ನೊಂದಣಿ ಪ್ರಕ್ರಿಯೆ ನಡೆಸುವ ಪತ್ರ ಬರಹಗಾರರು ಸರ್ಕಾರದಿಂದ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ, ಆದರೆ, ಹೊಸ ವ್ಯವಸ್ಥೆಯಲ್ಲಿ ಪತ್ರ ಬರಹಗಾರರ ಅವಶ್ಯಕತೆಯೇ ಇಲ್ಲದಂತೆ ಮಾಡಿರುವುದರಿಂದ ಪತ್ರ ಬರಹಗಾರರ ಬದುಕಿಗೂ ತೊಂದರೆ ಆಗುತ್ತದೆ. ಅದನ್ನೇ ನಂಬಿರುವ ಸಾವಿರಾರು ಪತ್ರ ಬರಹಗಾರರು ನಿರುದ್ಯೋಗಿಗಳಾಗುತ್ತಾರೆ ಎಂದು ಮುರಳೀಧರ್ ಕಳವವಳ ವ್ಯಕ್ತಪಡಿಸಿದರು.