ಕನಕಪುರ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಪ್ಪನ ಹೊಸಹಳ್ಳಿ ಯುವಕ ಸಾರ್ವಜನಿಕವಾಗಿ ನಡೆದ ಹಲ್ಲೆಯಿಂದ ಮನನೊಂದು ಶುಕ್ರವಾರ ರಾತ್ರಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ಪುಟ್ಟೇಗೌಡ ಅವರ ಪುತ್ರ ನಂದೀಶ್ (20) ಆತ್ಮಹತ್ಯೆ ಮಾಡಿಕೊಂಡವ.
ಗ್ರಾಮದಲ್ಲಿ ಕೋಳಿ ಫಾಮ್ರ್ ನಡೆಸುತ್ತಿದ್ದ ನಂದೀಶನ ಮೇಲೆ ಬಾರ್ ರಾಕೇಶ್, ಪ್ರದಿಪ್, ಶಶಾಂಕ್, ಕಿರಣ್ ಹಾಗೂ ಸಹಚರರು ಸಾರ್ವಜನಿಕವಾಗಿಯೇ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ಮನನೊಂದ ನಂದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಮೃತನ ಸಹೋದರ ಗ್ರಾಮಾಂತರ ಠಾಣೆಗೆ ದೂರು ನೀಡಿ, ಗುರುವಾರ ರಾತ್ರಿ ಮನೆಯಿಂದ ನನ್ನ ಸಹೋದರ ನಂದೀಶ್ನನ್ನು ಕರೆದುಕೊಂಡು ಹೋಗಿ, ಬಲವಂತವಾಗಿ ಮದ್ಯಪಾನ ಮಾಡಿಸಿ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆಯೂ ರಾಕೇಶ್ ಹಾಗೂ ಸಹಚರರು ಕಿರುಕುಳ ನೀಡಿದ್ದರು. ಆಗಲೇ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೆ. ಆದರೆ ಆ ಡೆತ್ನೋಟ್ಅನ್ನು ರಾಕೇಶ್ ಕಿತ್ತುಕೊಂಡಿದ್ದ. ಆದರೂ ಗುರುವಾರ ಬಾರ್ ರಾಕೇಶ್ ಮತ್ತೆ ನನ್ನನ್ನು ಮನೆಯಿಂದ ಕರೆಸಿ, ಸ್ನೇಹಿತರ ಜತೆ ಮದ್ಯಪಾನ ಮಾಡಿಸಿದ್ದ. ಈ ಮಧ್ಯೆ ಶಶಾಂಕ್ ಮತ್ತು ಕೆಲವರು ಜಗಳ ತೆಗೆದು ಹಲ್ಲೆ ಮಾಡಿದರು. ಬಳಿಕ ಇಬ್ಬರೂ ಅಲ್ಲಿಂದ ಕರೆದುಕೊಂಡು ಬಂದು ಮತ್ತೆ ಹಲ್ಲೆ ಮಾಡಿ ನನ್ನನ್ನು ಮನೆಗೆ ಬಿಟ್ಟು ಹೋಗಿದ್ದಾರೆ. ಇತ್ತೀಚೆಗೆ ಪ್ರದಿಪ್ ಎಂಬುವವರ ಜಮೀನಿನಲ್ಲಿ ಪಂಪ್ಸೆಟ್ ಮೋಟಾರ್ಗೆ ಕಲ್ಲುಬಿಟ್ಟು ಹಾಳು ಮಾಡಿ, ಅದಕ್ಕೂ ನನ್ನ ಹೆಸರು ತಳಕುಹಾಕಿ ಎಲ್ಲರೂ ಸೇರಿ ನನ್ನನ್ನು ಅನುಮಾನಿಸಿದ್ದರು. ಹಲ್ಲೆ ಮತ್ತು ದೌರ್ಜನ್ಯ, ಅವಮಾನದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ಇವರೆಲ್ಲರ ಮೇಲೆ ಕಾನೂನು ಕ್ರಮ ಕೈಗೊಂಡು ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಎರಡು ಪುಟಗಳ ಡೆತ್ನೋಟ್ನಲ್ಲಿ ನಂದೀಶ್ ಉಲ್ಲೇಖಿಸಿದ್ದಾರೆ.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಎಸ್ಐ ಆಕಾಶ್ ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.