ಹೊಂಗನೂರು ಕೆರೆ 
ಬೆಂಗಳೂರು ದಕ್ಷಿಣ

ಜಲಕ್ರಾಂತಿ ನಾಡಲ್ಲೇ ಜಲಕ್ಷಾಮ?

ಚನ್ನಪಟ್ಟಣ:

ಸದಾ ನೀರು ತುಂಬಿಕೊಂಡು ಕಂಗೊಳಿಸುತ್ತಿದ್ದ ತಾಲೂಕಿನ ಹಲವು ಕೆರೆಗಳ ಒಡಲು ಖಾಲಿಯಾಗುತ್ತಿದೆ.

ಏತ ನೀರಾವರಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ರಾಜ್ಯದ ಗಮನ ಸೆಳೆದಿದ್ದ ಬೊಂಬೆನಾಡಿನಲ್ಲಿ ಮತ್ತೆ ಖಾಲಿ ಕೆರೆಗಳ ದರ್ಶನವಾಗುವ ಆತಂಕ ಎದುರಾಗಿದೆ.

ಗಡಿಗ್ರಾಮ ಇಗ್ಗಲೂರಿನ ಜಲಾಶಯದಿಂದ ತಾಲೂಕಿನ ಮೂಲೆಮೂಲೆಗೂ ನೀರು ಹರಿದ ರೋಚಕ ಇತಿಹಾಸ ಇಲ್ಲಿದೆ. ಕಣ್ವ ಜಲಾಶಯ ನಿರ್ಮಾಣದಿಂದ ಹಿಡಿದು ಇಗ್ಗಲೂರು ಜಲಾಶಯ, ಗರಕಹಳ್ಳಿ ಏತ ನೀರಾವರಿ ಹಾಗೂ ಕಣ್ವ ಏತ ನೀರಾವರಿ ಯೋಜನೆಗಳ ಮೂಲಕ ತಾಲೂಕಿನ ಹಲವು ಕೆರೆಗಳಿಗೆ ನೀರು ಹರಿಸಲಾಗಿದೆ. ಇದರ ಹಿಂದೆ ಹಲವು ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ಶ್ರಮವೂ ಇದೆ.
ಅಂತರ್ಜಲ ಮಟ್ಟ ಹೆಚ್ಚಳ: ಏತ ನೀರಾವರಿ ಯೋಜನೆಗಳ ಮೂಲಕ ನೀರಿನಿಂದ ನಳನಳಿಸುತ್ತಿದ್ದ ಕೆರೆಗಳ ಸುತ್ತಮುತ್ತ ಅಂತರ್ಜಲ ಮಟ್ಟವೂ ಗಣನೀಯವಾಗಿ ಹೆಚ್ಚಳಗೊಂಡಿತ್ತು. ಕೃಷಿ ಚಟುವಟಿಕೆಗಳು ಚುರುಕುಗೊಂಡು ರೈತರ ಬದುಕು ಹಸನಾಗಿತ್ತು. ಜತೆಗೆ ಕೆರೆಗಳಲ್ಲಿ ಮೀನುಗಾರಿಕೆ ಹಲವರ ಬದುಕಿಗೆ ಆಸರೆಯಾಗಿತ್ತು. ಆದರೆ ಇದೀಗ ಮುಂಗಾರು ಮಳೆ ಕೈಕೊಟ್ಟಿರುವುದು ಹಾಗೂ ಇಗ್ಗಲೂರು ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವುದರಿಂದ ತಾಲೂಕಿನ ಕೆರೆಗಳ ನೀರಿನ ಮಟ್ಟ ಕುಸಿಯುತ್ತಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದ ಕಾರಣ ಕೆಲ ಕೆರೆಗಳಲ್ಲಿ ನೀರಿನ ಸಂಗ್ರಹ ಉಳಿದಿತ್ತು. ಇಲ್ಲವಾದರೆ ಈ ವರ್ಷ ಬಹುತೇಕ ಕೆರೆಗಳು ಸಂಪೂರ್ಣ ಬರಿದಾಗುವ ಪರಿಸ್ಥಿತಿ ಎದುರಾಗುತ್ತಿತ್ತು ಎನ್ನಲಾಗಿದೆ.

ಪಂಪ್​ಗಳು ಸ್ಥಗಿತ

ಮಳೆಯ ಜತೆಗೆ ಏತ ನೀರಾವರಿ ಯೋಜನೆಗಳು ಕೆರೆಗಳ ಒಡಲು ತುಂಬಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಇಗ್ಗಲೂರು ಜಲಾಶಯದಿಂದ ನೀರನ್ನು ಎತ್ತಿ ಕಣ್ವ ಜಲಾಶಯ ಸೇರಿ ತಾಲೂಕಿನ ವಿವಿಧ ಕೆರೆಗಳಿಗೆ ಹರಿಸಲಾಗುತ್ತಿತ್ತು. ಆದರೆ ಜಲಾಶಯದಲ್ಲೆ ನೀರಿನ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಏತ ನೀರಾವರಿ ಯೋಜನೆಯ ಹಲವು ಪಂಪ್​ಗಳನ್ನು ಸ್ಥಗಿತಗೊಳಿಸಲಾಗಿದೆ.

3 ದಿನಗಳಿಂದ ಮತ್ತೆ ನೀರು ಹರಿವು

ಈ ವರ್ಷದ ಆರಂಭದಿಂದ ತಾಲೂಕಿನ ಕೆರೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗಿಲ್ಲ. ಸದ್ಯ ಕಳೆದ ಮೂರು ದಿನಗಳಿಂದ ಇಗ್ಗಲೂರು ಜಲಾಶಯದಿಂದ ಕೆಲವು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಈ ನೀರಿನ ಹರಿವೂ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಗ್ಗಲೂರು ಜಲಾಶಯದಲ್ಲಿ ಕೇವಲ 16 ಅಡಿ ನೀರು

ಇಗ್ಗಲೂರು ಎಚ್​.ಡಿ.ದೇವೇಗೌಡ ಬ್ಯಾರೇಜ್​ನಲ್ಲಿ ಸದ್ಯ ಸುಮಾರು 16 ಅಡಿ ನೀರಿನ ಮಟ್ಟವಿದೆ. ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಕಡಿಮೆಯಾಗಿದ್ದು, ನೀರಿನ ಪ್ರಮುಖ ಮೂಲಗಳು ಬಹುತೇಕ ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ನೀರು ಎತ್ತುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮೂರು ದಿನಗಳಿಂದ ಕೆಲವು ಪಂಪ್​ಗಳನ್ನು ಮತ್ತೆ ಚಾಲನೆಗೊಳಿಸಲಾಗಿದ್ದು, ಜಲಾಶಯದ ನೀರಿನ ಮಟ್ಟ ಮತ್ತಷ್ಟು ಕುಸಿದರೆ ಅವುಗಳನ್ನೂ ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಬೇಸಿಗೆಯ ಕಥೆ ಏನು?

ಒಟ್ಟಾರೆ, ಜಲಕ್ರಾಂತಿಯ ನಾಡಿನಲ್ಲೆ ಇದೀಗ ಜಲಾಮದ ಭೀತಿ ಎದುರಾಗಿದೆ. ಮಳೆಗಾಲದಲ್ಲಿಯೇ ಕೆರೆಗಳ ಒಡಲು ಖಾಲಿಯಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುವಾಗ, ಬೇಸಿಗೆಯಲ್ಲಿ ಪರಿಸ್ಥಿತಿ ಹೇಗಿರಲಿದೆ ಎಂಬ ಚಿಂತೆ ಅನ್ನದಾತರನ್ನು ಕಾಡುತ್ತಿದೆ. ಮಳೆ ಕೈಕೊಟ್ಟರೆ ಹಾಗೂ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಹೆಚ್ಚಾಗದಿದ್ದರೆ, ಮುಂದಿನ ದಿನಗಳಲ್ಲಿ ಕೃಷಿ ಮತ್ತು ಅಂತರ್ಜಲದ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ.