ಮಾರಾಟವಾಗದ ಮಾವನ್ನು ರಾಮನಗರದ ತಾಲೂಕು ಆಡಳಿತ ಸೌಧಧ ಸಮೀಪ ಬೆಂಗಳೂರು&ಮೈಸೂರು ರಸ್ತೆಯಲ್ಲಿ ರೈತರು ರಸ್ತೆ ಪಕ್ಕದಲ್ಲಿ ಸುರಿದು ಹೋಗಿರುವುದು.  
ಬೆಂಗಳೂರು ದಕ್ಷಿಣ

ಬೆಲೆಯಿಲ್ಲದೆ ರಸ್ತೆ ಪಾಲಾದ ಮಾವು

ರಾಮನಗರ: ಬಾಯಲ್ಲಿ ಸಿಹಿ ಮೂಡಿಸುವ ಮಾವಿನ ಹಣ್ಣಿಗೆ ಸೂಕ್ತ ಬೆಲೆಯಿಲ್ಲದೆ ರಸ್ತೆ ಅಕ್ಕಪಕ್ಕ ಸುರಿದು ಹೋಗಲಾಗುತ್ತಿದೆ.
ಹೌದು... ಈ ಬಾರಿ ಮಾವು ಪ್ರಾರಂಭದಿಂದಲೂ ರೈತನಿಗೆ ಸಿಹಿ ತರುವ ಬದಲು ಹುಳಿ ತಂದಿದೆ. ಹವಾಮಾನ ಬದಲಾವಣೆ, ಮಳೆ ಕೊರತೆಯಿಂದ ಹೂ ಬಿಡದೆ ಫಸಲು ಶೇ.15 ರೈತನಿಗೆ ಸಿಕ್ಕಿಲ್ಲ. ಬಂದ ಫಸಲಿನಲ್ಲಿಯಾದರೂ ಲಾಭ ಮಾಡೋಣ ಎಂದರೆ ಬೆಲೆ ಇಳಿಕೆ, ಉತ್ತಮ ಕಾಯಿಗಳು ಸಿಗದೆ ರೈತ ನಷ್ಟದ ದಾರಿಯಲ್ಲಿ ನಡೆಯುವಂತಾಗಿದೆ.
ಮಾರುಕಟ್ಟೆಗೆ ತಂದ ಕಾಯಿಗಳು ಕಪ್ಪಾಗಿ ಊಜಿನೊಣಗಳಿಂದ ಕೂಡಿರುವ ಜತೆಗೆ ಮಳೆಯಿಂದ ಕಾಯಿಗಳ ಮೇಲೆ ಕಲೆಗಳಾಗಿ ಮಾರಾಟಕ್ಕೆ ಯೋಗ್ಯವಿಲ್ಲದ ಕಾರಣ ವರ್ತಕರು ಮಾವು ಖರೀದಿಸದೆ ಇರುವುದರಿಂದ ರೈತರು ಮಾರುಕಟ್ಟೆ ಕಸದ ಗುಡ್ಡೆಗೆ ಸುರಿಯುತ್ತಿದ್ದಾರೆ. ಸಾಲ ಮಾಡಿ ಮಾವಿನ ತೋಟ ನಿರ್ವಹಣೆ ಮಾಡಿದ್ದರೂ ಮಾರುಕಟ್ಟೆಗೆ ತಂದರೆ ಕೇಳುವವರೇ ಇಲ್ಲ. ಕಿಲೋಗೆ 5 ರೂ. ಸಿಗುತ್ತಿಲ್ಲ. ಸಾಗಣೆ ಬಾಡಿಗೆಯೂ ಬರುತ್ತಿಲ್ಲ. ವಿಧಿಇಲ್ಲದೆ ಹಣ್ಣನ್ನು ರಸ್ತೆಗೆ ಸುರಿದು ಹೋಗುವ ಪರಿಸ್ಥಿತಿ ಬಂದಿದೆ ಎಂದು ಮಾವು ಬೆಳೆಗಾರ ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ಸಲ ಹೆಚ್ಚಾಗಿ ಸೆಂಧೂರ ಮಾವು ರೈತರಿಗೆ ಕೈ ಸೇರುತ್ತದೆ. ಬಾದಾಮಿ, ರಸಪೂರಿ ಮಾವು ವಿರಳವಾಗಿತ್ತು. ಈ ಬಾರಿ ಫಸಲಿಲ್ಲದಿದ್ದರೂ ಪ್ರಾರಂಭದಲ್ಲಿ ಸೆಂಧೂರ ಮಾವು 100 ರೂ. ಗಡಿ ತಲುಪಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಕೆಜಿಗೆ 5ರಿಂದ 6 ರೂ.ಗೆ ತಲುಪಿದೆ. ಬಾದಾಮಿ 15 ರೂ. ಇದೆ. ಇದರಿಂದ ಕೂಲಿಯೂ ಸಿಗುವುದಿಲ್ಲ ಎಂದು ಹಲವು ರೈತರು ಮಾವು ಕೊಯ್ಲು ಮಾಡದೆ ತೋಟದಲ್ಲೇ ಬಿಟ್ಟಿದ್ದಾರೆ.
ಮಳೆ ಹೊಡೆತ
ಜೋನಿ ರೋಗ, ಹೂಜಿ ನೊಣ ಮಾವಿನ ಕಾಯಿಗೆ ಮಾರಕವಾಗಿವೆ. ಅಲ್ಲದೇ ಕಳೆದ 15 ದಿನಗಳ ಹಿಂದೆ ಸುರಿದ ಆಲಿಕಲ್ಲು ಮಳೆ ಮಾವಿಗೆ ಬಹುದೊಡ್ಡ ಹೊಡೆತ ನೀಡಿದೆ. ಇದರಿಂದ ಕಾಯಿಗಳ ಮೇಲೆ ಕಲೆಗಳಾಗಿ ಹಣ್ಣು ಉಪಯೋಗಕ್ಕೆ ಬರದಂತಾಗಿರುವ ಕಾರಣ ಮಾರುಕಟ್ಟೆಯಲ್ಲಿ ಕೇಳುವವರಿಲ್ಲದಂತಾಗಿದೆ. ಇನ್ನು ಹೊರ ರಾಜ್ಯದ ಕಾರ್ಖಾನೆಗಳು ಮಾವು ಖರೀದಿಸುತ್ತಿಲ್ಲ. ಜತೆಗೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿಲ್ಲ. ಇನ್ನು ಆಂಧ್ರ, ತಮಿಳುನಾಡಿನಲ್ಲಿ ಹೆಚ್ಚಾಗಿ ತೋತಾಪುರಿ ಬೆಳೆಯಲಾಗುತ್ತಿದ್ದು, ಮಾರುಕಟ್ಟೆ ಪ್ರವೇಶಿಸಿದೆ. ಕಾರ್ಖಾನೆಯವರಿಗೆ ತೋತಾಪುರಿ ಮಾವಿನಲ್ಲಿ ಹೆಚ್ಚು ಉತ್ಪನ್ನ ಸಿಗುವ ಕಾರಣ ಅದರ ಖರೀದಿಗೆ ಒಲವು ತೋರಿಸಿರುವುದರಿಂದ ಸೆಂಧೂರ ಮಾವು ಬೆಲೆ ಕುಸಿಯಲು ಕಾರಣ ಎನ್ನುತ್ತಾರೆ ಕೆಲವು ವರ್ತಕರು.
ಸೆಂಧೂರ ಮಾವು ಗುಜರಾತ್​, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು ಮತ್ತಿತರ ಹೊರ ರಾಜ್ಯದಲ್ಲಿನ ಜ್ಯೂಸ್​ ಕಾರ್ಖಾನೆಗಳಿಗೆ ಹೋಗುತ್ತದೆ. ಆದರೆ, ಅಲ್ಲಿನ ಕಾರ್ಖಾನೆಗಳು ಸೆಂಧೂರ ಮಾವು ಖರೀದಿಗೆ ಒಲವು ತೋರದೆ ಇರುವುದರಿಂದ ಬೆಲೆ ಇಳಿಮುಖ ಕಂಡಿದೆ ಎನ್ನುತ್ತಾರೆ ದಲ್ಲಾಳಿಗಳು.
ಹಣ್ಣು ಮಾರುವವರೂ ಕೊಳ್ಳುತ್ತಿಲ್ಲ
ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ಸ್ಥಳಿಯವಾಗಿ ಮಾವು ಕೊಂಡು ಹಣ್ಣು ಮಾಡಿ ಬೆಂಗಳೂರು, ಮೈಸೂರು ಸೇರಿ ಮತ್ತಿತರ ಕಡೆ ಮಾರಾಟ ಮಾಡುತ್ತಾರೆ. ಆದರೆ, ಈ ಬಾರಿ ಮಾವಿಗೆ ಜೋನಿಬಾಧೆ, ಕಾಯಿ ಕಪ್ಪಾಗಿರುವ ಕಾರಣ ಮಾವಿನಕಾಯಿ ಕೊಂಡು ಹಣ್ಣುಮಾಡಿದರೂ ಲಾಭ ಕಾಣಲು ಆಗುವುದಿಲ್ಲ ಎಂದು ಸ್ಥಳಿಯ ಹಣ್ಣು ಮಾರಾಟಗಾರರು ಕಾಯಿ ಕೊಳ್ಳುತ್ತಿಲ್ಲ.
ಕೊಳೆಯುತ್ತಿರುವ ಹಣ್ಣು
ಕಸದಗುಡ್ಡೆಗೆ ಸುರಿದಿರುವ ಮಾವು ಕೊಳೆತು ನಾರುತ್ತಿದ್ದು, ನೊಣಗಳು ಗುಂಯ್​ಗುಡುತ್ತಿವೆ. ಮಾರುಕಟ್ಟೆಯಲ್ಲಂತೂ ಕೊಳೆತ ಹಣ್ಣಿನ ಚಿತ್ರಗಳು ರಾರಾಜಿಸುತ್ತಿವೆ. ಸಮಸ್ಯೆಯಾಗುವ ಮುನ್ನ ಕೂಡಲೇ ರಸ್ತೆ ಪಕ್ಕದಲ್ಲಿ ಕಸದ ಗುಡ್ಡೆಯಲ್ಲಿರುವ ಮಾವನ್ನು ಸಂಬಂಧಿಸಿದವರು ಸೂಕ್ತ ವಿಲೇವಾರಿ ಮಾಡಿ ಜನರ ಆರೋಗ್ಯ ಕಾಪಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
"

ಸರ್ಕಾರ ಕೂಡಲೇ ಮಾವು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ಜತೆಗೆ ಜಿಲ್ಲೆಯಲ್ಲಿ ಮಾವಿನ ಪಲ್ಪ್​ (ತಿರುಳು) ಮತ್ತು ಜ್ಯೂಸ್​ ತಯಾರಿಸುವ ಕೈಗಾರಿಕೆಗಳನ್ನು ಸ್ಥಾಪಿಸಿ, ನೇರವಾಗಿ ರೈತರಿಂದ ಹಣ್ಣು ಖರೀದಿಸಲು ಉತ್ತೇಜನ ನೀಡಬೇಕು. ಹೊರರಾಜ್ಯ ಹಾಗೂ ವಿದೇಶಗಳಿಗೆ ಮಾವು ರಫ್ತು ಮಾಡಲು ರೈತರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು.

— > ಪುಟ್ಟಸ್ವಾಮಿ, ರೈತ ಮುಖಂಡ ರಾಮನಗರ.
"

ಹೊರ ರಾಜ್ಯದ ಕಾರ್ಖಾನೆಗಳು ಕಾಯಿ ಕೊಳ್ಳಲು ಆಸಕ್ತಿ ವಹಿಸುತ್ತಿಲ್ಲ. ಇದರಿಂದ ರೈತರು ಕಾರ್ಖಾನೆಗೆ ತಂದ ಮಾವು ಬಿಕರಿಯಾಗದೆ ಗುಡ್ಡೆಯಲ್ಲೇ ಹಣ್ಣಾಗಿ ಉಪಯೋಗಕ್ಕೆ ಇಲ್ಲದಂತಾಗುತ್ತಿದೆ. ಜತೆಗೆ ಒಂದೇ ಸಮನೆ ಮಳೆಯೂ ಸುರಿಯುತ್ತಿದ್ದು, ಕಾಯಿ ಕಳಿಸಬೇಡಿ ಎಂದು ಕಾರ್ಖಾನೆಯವರು ಹೇಳುತ್ತಿದ್ದಾರೆ. ಬರುತ್ತಿರುವ ಉತ್ತಮ ಕಾಯಿಗಳನ್ನು ಸ್ಥಳಿಯವಾಗಿ ಮಾರಾಟಗಾರರಿಗೆ ಮಾರಾಟ ಮಾಡುತ್ತಿದ್ದೇವೆ.

— > ಸೈಯದ್​, ಮಂಡಿ ವರ್ತಕ.