ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಸಾಕುಹಂದಿಗಳ ದಾಳಿಗೆ ಸೀಮೆಹಸು ಬಲಿ

ಚನ್ನಪಟ್ಟಣ: ತಾಲೂಕಿನಲ್ಲಿ ಕಾಡಾನೆ ಹಾಗೂ ಚಿರತೆಗಳ ಕಾಟ ಒಂದೆಡೆಯಾದರೆ ಮತ್ತೊಂದೆಡೆ ನಗರದಲ್ಲಿ ಹಂದಿಗಳ ಕಾಟ ಮೀತಿಮೀರುತ್ತಿದೆ.
ಹೌದು..! ನಗರದಲ್ಲಿ ಸಾಕುಹಂದಿಗಳ ಗುಂಪೊಂದು ಸೀಮೆಹಸುವೊಂದರ ಮೇಲೆ ಮಾರಣಾಂತಿಕ ದಾಳಿ ನಡೆಸಿದದ್ದು, ಚಿಕಿತ್ಸೆ ಲಿಸದೆ ಹಸು ಪ್ರಾಣಬಿಟ್ಟಿದೆ. ನಗರದ ವಿವೇಕಾನಂದ ನಗರ, ರಾಜಾಕೆಂಪೇಗೌಡ ಬಡಾವಣೆ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಬೀದಿಹಂದಿಗಳ ಕಾಟ ಮಿತಿಮೀರಿದೆ. ಶುಕ್ರವಾರ ವಿವೇಕಾನಂದನಗರದ 6ನೇ ಅಡ್ಡರಸ್ತೆಯಲ್ಲಿ ಮೇಯಲು ಬಿಟ್ಟಿದ್ದ ಸೀಮೆಹಸುವೊಂದರ ಮೇಲೆ ದಾಳಿ ನಡೆಸಿರುವ ಸಾಕುಹಂದಿಗಳ ಗುಂಪು ಹಸುವಿನ ಹೊಟ್ಟೆಗೆ ತಿವಿದು ತೀವ್ರ ಗಾಯಗೊಳಿಸಿವೆ. ದಾಳಿಯ ತೀವ್ರತೆಗೆ ಹಸುವಿನ ಕರುಳು ಹೊರಬಂದಿದ್ದು, ಹಸುವಿನ ನರಳಾಟ ಕರುಳುಹಿಂಡುವಂತಿತ್ತು. ಪಶು ವೈದ್ಯ ಪುಟ್ಟಸ್ವಾಮಿ ನೇತೃತ್ವದ ತಂಡ ಸ್ಥಳಕ್ಕೆ ಬಂದು ಹಸುವನ್ನು ಬದುಕುಳಿಸಲು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮಂಗಳವಾರಪೇಟೆ ನಿವಾಸಿ ಬೀರಮ್ಮ ಅವರು ಹಸು ಸಾಕಣೆಯಿಂದ ಜೀವನ ಸಾಗಿಸುತ್ತಿದ್ದರು. ಆದರೆ, ಹಂದಿಗಳ ದಾಳಿಯಿಂದ ಸೀಮೆಹಸು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡಾವಣೆಯಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದು, ಮನುಷ್ಯರ ಮೇಲೂ ದಾಳಿ ನಡೆಸುತ್ತಿವೆ. ನಗರಸಭೆ ಹಾಗೂ ಪೊಲೀಸ್​ ಇಲಾಖೆ ಕೂಡಲೇ ಹಂದಿ ಸಾಕಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಗರಸಭಾ ಸದಸ್ಯೆ ಲ್ಮಮ್ಮ ಹಾಗೂ ಮುಖಂಡ ಸತೀಶ್​ ಬಾಬು ಸೇರಿದಂತೆ ಬಡಾವಣೆಯ ನಿವಾಸಿಗಳು ಒತ್ತಾಯಿಸಿದರು.