ಸರ್ಕಾರಿ ಶಾಲೆಗಳ ಸಂಗ್ರಹಚಿತ್ರ
- ಶಿಕ್ಷಣ ಇಲಾಖೆಗೆ ಶಾಪವಾದ ಶಿಕ್ಷಕರ ಕೊರತೆ
- ಗುಣಮಟ್ಟದ ಕಲಿಕೆಗೆ ಬೀಳಲಿದೆ ಹೊಡೆತ
ಶಾಲಾ ಶಿಕ್ಷಣ ಇಲಾಖೆ ಸಮಸ್ಯೆಗಳಿಗೆ ಕೊನೆಯೇ ಇಲ್ಲ. ಒಂದಿಲ್ಲೊಂದು ಸಮಸ್ಯೆಗಳಿಂದಾಗಿ ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಲೇ ಇದೆ. ಶಿಕ್ಷಕರ ಕೊರತೆ ಎನ್ನುವುದು ಇಲಾಖೆಯ ಅವನತಿಗೆ ಪ್ರಮುಖ ಕಾರಣವಾಗುತ್ತಿದ್ದು, ಜಿಲ್ಲೆಯಲ್ಲಿ 440 ಪ್ರಾಥಮಿಕ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವುದು ಶಿಕ್ಷಣದ ಗುಣಮಟ್ಟದ ಬಗ್ಗೆ ಪ್ರಶ್ನೆ ಏಳುವಂತೆ ಆಗಿದೆ.
ಒಬ್ಬರೇ ಶಿಕ್ಷಕರು: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಟ್ಟು 1107 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಇವುಗಳಲ್ಲಿ 673 ಕಿರಿಯ ಪ್ರಾಥಮಿಕ ಶಾಲೆಗಳಾದರೆ, 434 ಹಿರಿಯ ಪ್ರಾಥಮಿಕ ಶಾಲೆಗಳಾಗಿವೆ. ವಿಪರ್ಯಾಸವೆಂದರೆ ಇವುಗಳಲ್ಲಿ ಶೇ.40 ಸರ್ಕಾರಿ ಶಾಲೆಗಳಲ್ಲಿ ಏಕ ಶಿಕ್ಷಕರಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 406 ಪ್ರಾಥಮಿಕ ಶಾಲೆಗಳು ಏಕ ಶಿಕ್ಷಕ ಶಾಲೆಗಳಾವೆ. ಇದರ ಬಹುಪಾಲು ಕನಕಪುರದ್ದೇ ಆಗಿರುವುದು ಮತ್ತೊಂದು ಸೋಜಿಗದ ಸಂಗತಿ. ಚನ್ನಪಟ್ಟಣ ತಾಲೂಕಿನಲ್ಲಿ ಒಟ್ಟು 53, ಮಾಗಡಿಯಲ್ಲಿ 116, ಕನಕಪುರದಲ್ಲಿ 206 ಮತ್ತು ರಾಮನಗರದಲ್ಲಿ 65 ಪ್ರಾಥಮಿಕ ಶಾಲೆಗಳು ಏಕ ಶಿಕ್ಷಕ ಶಾಲೆಗಳಾಗಿವೆ.
ಅತಿಥಿ ಶಿಕ್ಷಕರಿಗೆ ಜವಾಬ್ದಾರಿ:
ಏಕ ಶಿಕ್ಷಕ ಶಾಲೆಗಳಲ್ಲಿ ಬಹುತೇಕ ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ನೇಮಕಗೊಂಡ ಕಾಯಂ ಶಿಕ್ಷಕರು ಇಲ್ಲ. ಬದಲಿಗೆ ಅತಿಥಿ ಶಿಕ್ಷಕರೇ ಈ ಶಾಲೆಗಳಲ್ಲಿ ಕಲಿಕಾ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಸರ್ಕಾರ ಶೂನ್ಯ ಶಿಕ್ಷಕರ ಶಾಲೆಗಳೆಂದು ನಮೂದು ಮಾಡಲು ಅವಕಾಶ ಮಾಡಿಕೊಂಡ ಹಿನ್ನೆಲೆಯಲ್ಲಿ, ಕಾಯಂ ಶಿಕ್ಷಕರು ಇಲ್ಲದ ಕಡೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ, ಅಂತಹ ಶಾಲೆಗಳನ್ನು ಏಕ ಶಿಕ್ಷಕ ಶಾಲೆಗಳೆಂದು ಪರಿಗಣಿಸುವ ಕೆಲಸವನ್ನು ಮಾಡಿದೆ. ಇದರಿಂದಾಗಿ ಯಾವುದೇ ಶಾಲೆಗಳು ಶಿಕ್ಷಕರಿಲ್ಲದೆ ಮುಚ್ಚಿವೆ ಎಂಬ ಆರೋಪದಿಂದ ಮುಕ್ತವಾಗುವ ಜಾಣ ನಡೆಯನ್ನು ಇಲಾಖೆ ಅನುಸರಿಸಿದೆ.
ಪ್ರಭಾರಿಗಳೇ ಹೆಚ್ಚು
ಸರ್ಕಾರಿ ಶಾಲೆಗಳನ್ನು ಮುಚ್ಚಿದೆ ಎನ್ನುವ ಆರೋಪ ಹೊತ್ತು ಕೊಳ್ಳುವುದರಿಂದ ಪಾರಾಗಲು ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಈ ಮೂಲಕ ಒಂದೇ ಮಗು ಇದ್ದರೂ ಅಂತಹ ಶಾಲೆಗೆ ಬೀಗ ಹಾಕಿಲ್ಲ ಎಂದು ಬೀಗುವ ಮಾತುಗಳನ್ನು ಸರ್ಕಾರ ಹೇಳುತ್ತಿದೆ. ಆದರೆ, ಅತಿಥಿ ಶಿಕ್ಷಕರಿಗೆ ಕಲಿಕೆ ಹೊರತುಪಡಿಸಿ ಯಾವುದೇ ಜವಾಬ್ದಾರಿ ನೀಡಿಲ್ಲ. ಆದರೆ, ಶಾಲೆ ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಮತ್ತೊಂದು ಶಾಲೆಯ ಕಾಯಂ ಶಿಕ್ಷಕರಿಗೆ ಪ್ರ‘ಾರ ನೀಡುವ ಮೂಲಕ ಹೆಚ್ಚಿನ ಹೊರೆ ಹಾಕುತ್ತಿದೆ.
ಈಗ ಎಸ್‌ಐಆರ್ ಒತ್ತಡ
ಅತಿಥಿ ಶಿಕ್ಷಕರು ಇರುವ ಏಕ ಶಿಕ್ಷಕ ಶಾಲೆಗಳಿಗೆ ಕಾಯಂ ಶಿಕ್ಷಕರಿಗೆ ಪ್ರಭಾರ ನೀಡಿರುವುದು ಜವಾಬ್ದಾರಿಗಳ ಭಾರದಿಂದ ನಲುಗಿ ಹೋಗಿರುವ ಶಿಕ್ಷಕರಿಗೆ ಇದು ಮತ್ತಷ್ಟು ವೇದನೆ ತಂದಿದೆ. ತಾವು ಇರುವ ಶಾಲೆಗಳಲ್ಲಿ ಮೊಟ್ಟೆ, ಬಿಸಿಯೂಟ ವಿತರಣೆ ಜವಾಬ್ದಾರಿ ಜತೆಗೆ ಮತ್ತೊಂದು ಶಾಲೆಯ ಜವಾಬ್ದಾರಿ ನೀಡಿದರೆ ಕೆಲಸ ಮಾಡುವುದು ಹೇಗೆ? ಇದರ ಜತೆಗೆ ಎಸ್‌ಐಆರ್ ಕೆಲಸವನ್ನೂ ಮಾಡಬೇಕಿದೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆ ಆಗುವುದಿಲ್ಲವೇ ಎನ್ನುವ ಪ್ರಶ್ನೆ ಶಿಕ್ಷಕರದ್ದು.
ಜಿಲ್ಲೆಯಲ್ಲಿ 406 ಸರ್ಕಾರಿ ಶಾಲೆಗಳು ಏಕ ಶಿಕ್ಷಕ ಶಾಲೆಗಳಾಗಿವೆ. ಆದರೆ ಇವುಗಳಲ್ಲಿ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಇಂತಹ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಎಲ್ಲವನ್ನು ನಿಭಾಯಿಸುವುದು ಕಷ್ಟದ ಕೆಲಸ. ಓರ್ವ ಶಿಕ್ಷಕರು ಎಲ್ಲ ತರಗತಿಗಳಿಗೆ ಪಾಠ ಮಾಡಲು ಹೇಗೆ ಸಾಧ್ಯ. ಕೆಲವೆಡೆಗಳಲ್ಲಂತೂ 30-75ರವರೆಗೂ ಮಕ್ಕಳು ದಾಖಲಾಗಿದ್ದು, ಇಂತಹ ಶಾಲೆಗಳಲ್ಲಂತೂ ಶಿಕ್ಷಕರು ಮಕ್ಕಳಿಗೆ ಹಾಲು, ಮೊಟ್ಟೆ, ಬಿಸಿಯೂಟ ನೀಡುವುದರಲ್ಲಿಯೇ ಕಾಲಹರಣ ಮಾಡಬೇಕಾದ ಸನ್ನಿವೇಶ ಇದೆ. ಇದರಿಂದ ಮಕ್ಕಳು ಪರಿಪೂರ್ಣವಾಗಿ ಕಲಿಯಲು ಸಾಧ್ಯವೇ ಎಂಬ ಪ್ರಶ್ನೆ ಶಿಕ್ಷಕ ಸಮುದಾಯದ್ದಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಎಂಬುದು ದೊಡ್ಡ ಪಿಡುಗಾಗಿ ಕಾಡುತ್ತಿದೆ. ಏಕ ಶಿಕ್ಷಕ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾಡಂತೂ ಹೇಳ ತೀರದಾಗಿದೆ.
ಸರ್ಕಾರಕ್ಕೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಇಲ್ಲವಾಗಿದ್ದರೆ ಇಷ್ಟೊಂದು ಸಮಸ್ಯೆಗಳು ಎದುರಾದರೂ ಇದನ್ನು ಸರಿಪಡಿಸದೇ ಸುಮ್ಮನೆ ಇರುತ್ತಿರಲಿಲ್ಲ. ಏಕ ಶಿಕ್ಷಕ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಬಿಸಿಯೂಟ, ಮೊಟ್ಟೆ ಜವಾಬ್ದಾರಿಯಲ್ಲೇ ಹೆಚ್ಚಿನ ಸಮಯ ಕಳೆಯಬೇಕಿದೆ. ಇನ್ನು ಪಾಠ ಮಾಡುವುದು ಎಲ್ಲಿಂದ? ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುವುದು ಎಲ್ಲಿಂದ?
ಉಮೇಶ್ ಗಂಗವಾಡಿ, ಅಧ್ಯಕ್ಷರು ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆ
ಏಕ ಶಿಕ್ಷಕ ಶಾಲೆಗಳ ವಿವರ
ತಾಲೂಕು ಶಾಲೆಗಳು
ಚನ್ನಪಟ್ಟಣ 53
ಕನಕಪುರ 206
ಮಾಗಡಿ 116
ರಾಮನಗರ 65
==============
ಒಟ್ಟು 440