ಬೆಂಗಳೂರು: ತುಂಗಭದ್ರಾ ಜಲಾಶಯದಿಂದ ಅಚ್ಚುಕಟ್ಟು ವ್ಯಾಪ್ತಿಯ ಜಿಲ್ಲೆಗಳಲ್ಲಿನ ಬೆಳೆಗಳಿಗೆ ನ.20ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಆದರೆ ಜಲಾಶಯದಲ್ಲಿ 10.716 ಟಿಎಂಸಿ ನೀರನ್ನು ಕಡ್ಡಾಯವಾಗಿ ಕುಡಿಯಲು ಸಂಗ್ರಹಿಸಿಡಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸೋಮವಾರ ವಿಕಾಸಸೌಧದಲ್ಲಿ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ ಎಸ್. ತಂಗಡಗಿ ನೇತೃತ್ವದಲ್ಲಿ ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳ ಶಾಸಕರು, ರೈತರು ಮತ್ತು ಅಧಿಕಾರಿಗಳ ಜತೆಗೆ ಸಭೆ ನಡೆಯಿತು. ಈ ವೇಳೆ ಪ್ರತಿಯೊಬ್ಬರು ತಮ್ಮ ಭಾಗಕ್ಕೆ ಹೆಚ್ಚಿನ ನೀರು ಕೊಡಬೇಕೆಂದು ಪಟ್ಟು ಹಿಡಿದರು. ತಂಗಡಗಿ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಡಬೇಕಾಯಿತು. ಬೆಳಿಗ್ಗೆ 11 ರಿಂದ 4 ಗಂಟೆವರೆಗೂ ನಿರಂತರ ಚರ್ಚೆಗಳು ನಡೆದು ಕೊನೆಗೆ ಒಮ್ಮತದ ನಿರ್ಧಾರಕ್ಕೆ ಬಂದು ಜಲಾಶಯದಲ್ಲಿ ನೀರಿನ ಮಟ್ಟ ನೋಡಿಕೊಂಡು ಮತ್ತೊಮ್ಮೆ ಸಭೆ ಸೇರುವ ನಿರ್ಧಾರಕ್ಕೆ ಬರಲಾಗಿದೆ.
ಅ.21ರಿಂದ ನ.20ರವರೆಗೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಿಂದ 3,800 ಕ್ಯೂಸೆಕ್ನಂತೆ ಗಣೇಕಲ್ ಜಲಾಶಯಕ್ಕೆ ನೀರು ಒಗಿಸುವುದು. ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಯಿಂದ ಅ.21ರಿಂದ 24ರ ವರೆಗೆ 1 ಸಾವಿರ ಕ್ಯೂಸೆಕ್ನಂತೆ ಹಾಗೂ ನ.1 ರಿಂದ 20ರವರೆಗೆ 12,800 ಕ್ಯೂಸೆಕ್ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ.
ರೈತರು ಇದ್ದರೆ ಈ ರಾಜ್ಯ ಇರಲಿದೆ. ಅಷ್ಟೇ ಮುಖ್ಯ ಕುಡಿಯುವ ನೀರಿಗೂ ಆದ್ಯತೆ ಕೊಡಬೇಕು. ಹಾಗಾಗಿ 10.716 ಟಿಎಂಸಿ ನೀರು ಕಡ್ಡಾಯವಾಗಿ ಸಂಗ್ರಹಿಸಬೇಕು. ತಪ್ಪಿದರೆ ಈ ಸಂಬಂಧ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು.ಶಿವರಾಜ ಎಸ್.ತಂಗಡಗಿ- ಟಿಬಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯಿಂದ ಅ.21 ರಿಂದ ನ.20ರವರೆಗೆ 650 ಕ್ಯೂಸೆಕ್ ಮತ್ತು ರಾಯ ಬಸವಣ್ಣ ಕಾಲುವೆಯಿಂದ ಅ.21 ರಿಂದ 2027ರ ಮೇ 31ರವರೆಗೆ 180 ಕ್ಯೂಸೆಕ್ನಂತೆ ತಿಂಗಳಲ್ಲಿ 10 ದಿವಸಗಳ ನಿಲುಗಡೆ, 10 ದಿವಸ ಹರಿಸುವುದು. ಇನ್ನೂ ವಿಜಯನಗರ ಎಡದಂಡೆ ಕಾಲುವೆಗಳಲ್ಲಿ ಅ.21 ರಿಂದ 2027ರ ಮೇ 10 ವರೆಗೆ 60 ಕ್ಯೂಸೆಕ್ನಂತೆ ನೀರಿನ ಲಭ್ಯತೆಯ ಅನುಸಾರ ಹರಿಸುವುದು ಎಂದು ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ ಎಂದು ಸಚಿವ ತಂಗಡಗಿ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಶಾಸಕರಾದ ಎಸ್. ಬೋಸರಾಜ್, ಬಿ.ನಾಗೇಂದ್ರ, ಕೆ. ರಾಘವೇಂದ್ರ ಹಿಟ್ನಾಳ್, ಶಿವರಾಜ್ ಪಾಟೀಲ್, ನಾಗರಾಜ್, ಹಂಪನ ಗೌಡ ಬಾದರ್ಲಿ, ಗಣೇಶ್, ಬಸವರಾಜ್ ತೂರ್ವಿಹಾಳ್, ಬಸನಗೌಡ ಬಾದರ್ಲಿ ಹಾಜರಿದ್ದರು.
ಬೆಳೆ ಮಾಹಿತಿ ತುಂಗಭದ್ರಾ ಯೋಜನೆಯ ವ್ಯಾಪ್ತಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ 3,57,074 ಎಕರೆಗಳಲ್ಲಿ ಬೆಳೆ ಇದೆ. ತುಂಗಭದ್ರಾ ಕೆಳಮಟ್ಟದ ಕಾಲುವೆ ವ್ಯಾಪ್ತಿಯಲ್ಲಿ 95,079 ಎಕರೆ, ತುಂಗಭದ್ರಾ ಬಲದಂಡೆ ಮೇಲ್ಮಟದ ಕಾಲುವೆ ವ್ಯಾಪ್ತಿಯಲ್ಲಿ 1.36 ಲಕ್ಷ ಎಕರೆ ಹಾಗೂ ವಿಜಯನಗರ ಕಾಲುವೆ ವ್ಯಾಪ್ತಿಯಲ್ಲಿ 17,888 ಎಕರೆ ಬೆಳೆ ಇರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯ ಪ್ರಮುಖಾಂಶಗಳು
-2026-27ನೇ ಸಾಲಿನ ಜಲವರ್ಷದಲ್ಲಿ ಜಲಾಶಯದಲ್ಲಿ 108 ಟಿಎಂಸಿ ಬಳಕೆಗೆ ಲಭ್ಯ
-ಪ್ರಸಕ್ತ ಸಾಲಿನಲ್ಲಿ ಒಳಹರಿವಿನ ಒಟ್ಟು ನೀರಿನ ಪ್ರಮಾಣ 110.41 ಟಿಎಂಸಿ
-ಜಲಾಶಯದಿಂದ ಆವಿಯಾಗುವಿಕೆ ಪ್ರಮಾಣ 6.553 ಟಿಎಂಸಿ
-ಸಿಸ್ಟ್ ಲಾಸ್ 4.036 ಟಿಎಂಸಿ, ಡೆಡ್ ಸ್ಟೋರೆಜ್ 2 ಟಿಎಂಸಿ
-ಕರ್ನಾಟಕದ ಪಾಲು 70.806 ಟಿಎಂಸಿ
-ಆಂಧ್ರಪ್ರದೇಶದ ಪಾಲು 33.877 ಟಿಎಂಸಿ
-ತೆಲಂಗಾಣದ ಪಾಲು 3.316 ಟಿಎಂಸಿ
-ಕುಡಿಯುವ ನೀರಿಗಾಗಿ 10.716 ಟಿಎಂಸಿ ಕಾಯ್ದಿರಿಸಲಾಗಿದೆ