- ಐಸಿಎಆರ್‌ನ ಎಡಿಜಿ ಡಾ. ಸೀಮಾ ಜಗ್ಗಿ ಹೇಳಿಕೆ
- ಜಿಕೆವಿಕೆಯಲ್ಲಿ ಸ್ನಾತಕೋತ್ತರ ವಿಜ್ಞಾನ ಸಪ್ತಾಹ ಉದ್ಘಾಟನೆ
ಬೆಂಗಳೂರು: ಪ್ರಸ್ತುತ ಯುವಜನತೆ ಸಂಶೋಧನೆ ಬಗ್ಗೆ ಹೆಚ್ಚಿನ ಒತ್ತು ನೀಡಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ಐಸಿಎಆರ್) ಸಹಾಯಕ ಮಹಾನಿರ್ದೇಶಕಿ ಡಾ. ಸೀಮಾ ಜಗ್ಗಿ ಹೇಳಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲಿ ವಿವಿಯ ಸ್ನಾತಕೋತ್ತರ ಅಧ್ಯಯನ ನಿರ್ದೇಶನಾಲಯ ಮಂಗಳವಾರ ಆಯೋಜಿಸಿದ್ದ ‘ಸ್ನಾತಕೋತ್ತರ ವಿಜ್ಞಾನ ಸಪ್ತಾಹ’ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಸಪ್ತಾಹವು ಸಂಶೋಧನೆಯ ಮೂಲಭೂತ ಹಾಗೂ ಅನ್ವಯಿಕ ಆಯಾಮಗಳೆರಡನ್ನೂ ಪರಿಚಯಿಸಿದವರ ಜತೆಗೆ ಪರಿಣಾಮಕಾರಿ ಸಂವಹನ ಕೌಶಲವನ್ನು ಸಾಧಿಸಲು ನೆರವಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ ಈ ವಿಜ್ಞಾನ ಸಪ್ತಾಹ ಹೊರಹೊಮ್ಮಲಿದ್ದು, ವಿಜ್ಞಾನ ಹಾಗೂ ಸಮಾಜದ ಮಧ್ಯೆ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ವಿಜ್ಞಾನ ಸಪ್ತಾಹಕ್ಕೆ ನವೋದ್ಯಮಿಗಳ ಆಹ್ವಾನ
ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧಣಾ ಮನೋಭಾವ, ನವೋದ್ಯಮ ಹಾಗೂ ವೈಜ್ಞಾನಿಕ ಚಿಂತನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ನಾತಕೋತ್ತರ ವಿಜ್ಞಾನ ಸಪ್ತಾಹ ಆಯೋಜಿಸಲಾಗುತ್ತಿದೆ. ಈ ಸಪ್ತಾಹದ ಅಂಗವಾಗಿ ವಿಶೇಷ ಉಪನ್ಯಾಸ, ವಿಜ್ಞಾನಿಕ ವಿಚಾರಸಂಕಿರಣ, ಪೋಸ್ಟರ್ ಪ್ರದರ್ಶನ, ವಿಜ್ಞಾನ ಸ್ಪರ್ಧೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದರು.
ಮುಂದಿನ ದಿನಗಳಲ್ಲಿ ಅಂತರ ಕೃಷಿ ವಿವಿಗಳ ವಿಜ್ಞಾನ ಸಪ್ತಾಹ ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ವಿಜ್ಞಾನ ಸಪ್ತಾಹಕ್ಕೆ ನೀತಿ ನಿರೂಪಕರನ್ನು, ಉದ್ಯಾಮಿದಾರರನ್ನು, ನವೋದ್ಯಮಿಗಳನ್ನು ಆಹ್ವಾನಿಸಿ ಸಂಶೋಧನಾ ಫಲಶೃತಿಗಳನ್ನು ಸಂಬಂಧಿಸಿದ ಪಾಲುದಾರರೊಂದಿಗೆ ಹಂಚಿಕೊಳ್ಳಲು ವೇದಿಕೆ ಕಲ್ಪಿಸಬೇಕಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 266 ಸ್ನಾತಕೋತ್ತರ ಸಂಶೋಧನಾ ಫಲಿತಾಂಶದ ಪೋಸ್ಟರ್ಸ್ ಹಾಗೂ 70 ಡಾಕ್ಟೊರಲ್ ಪ್ರಬಂಧಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಡೀನ್ (ಕೃಷಿ) ಡಾ. ವೈ.ಎನ್. ಶಿವಲಿಂಗಯ್ಯ, ಡೀನ್ (ಸ್ನಾತಕೋತ್ತರ) ಡಾ. ಪಿ.ವೆಂಕಟರಮಣ ಹಾಗೂ ಇತರರು ಹಾಜರಿದ್ದರು.