crime  
ಬೆಂಗಳೂರು

ಕಡಿಮೆ ಬೆಲೆಗೆ ಪ್ಲೈಟ್ ಟಿಕೆಟ್ ಕೊಡಿಸುವುದಾಗಿ ಮಹಿಳೆಗೆ ವಂಚನೆ, ಅಸ್ಸಾಂ ಮೂಲದ ಆರೋಪಿ ಬಂಧನ

ಬೆಂಗಳೂರು: ಏರ್‌ಪೋರ್ಟ್‌ನಲ್ಲಿ ಕಡಿಮೆ ಬೆಲೆಗೆ ಪ್ಲೈಟ್ ಟಿಕೆಟ್ ಕೊಡಿಸುವುದಾಗಿ ಹೇಳಿ ಮಹಿಳೆಗೆ ವಂಚಿಸಿ ಆಕೆಯ ಬಳಿಯ 17 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲಕ ಚನುವರ್ ಅಲಿ (36) ಬಂಧಿತ. ಕೆಲಸಕ್ಕೆಂದು ಬಂದು ದೇವನಹಳ್ಳಿ ತಾಲೂಕಿನ ಭಟ್ಟರಮಾರೇನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ. ರಾಜಸ್ಥಾನ ಮೂಲದ ಮಹಿಳೆ ಟಿ.ಪುಷ್ಪ ಎಂಬುವರು ನೀಡಿದ ದೂರಿನ ಮೇರೆಗೆ ಬಾಗಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಸಂತ್ರಸ್ತ ಮಹಿಳೆ ರಾಜಸ್ಥಾನಕ್ಕೆ ತೆರಳಲು ಸಹೋದರ ರಮೇಶ್ ಎಂಬಾತನ ಜತೆ ಅ.14ರಂದು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಬುಕ್ ಮಾಡಿಸಲು ಹೋಗಿದ್ದರು. ಆಗ ಮಹಿಳೆಗೆ ಟಿಕೆಟ್ ಸಿಕ್ಕಿರಲಿಲ್ಲ.

ಇದೇ ವೇಳೆ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ ನನಗೂ ಟಿಕೆಟ್ ಸಿಕ್ಕಿಲ್ಲ. ನಾನು ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ನಿಮಗೆ ಕಡಿಮೆ ಬೆಲೆಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದ.

ಈತನ ಮಾತು ನಂಬಿದ್ದ ಮಹಿಳೆಗೆ ಕ್ಯಾಬ್ ಬುಕ್ ಮಾಡಿಕೊಂಡು ಏರ್‌ಪೋರ್ಟ್‌ಗೆ ಕರೆದುಕೊಂಡು ಬಂದಿದ್ದ ಆರೋಪಿ ಚನುವರ್ ಅಲಿ, ಬಾಗಲೂರು ಬಳಿಯ ಮಯೂರಾ ಬೇಕರಿ ಬಳಿ ಮಹಿಳೆ ಬಳಿ ಏರ್‌ಪೋರ್ಟ್‌ನಲ್ಲಿ ಚಿನ್ನಾಭರಣ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಇಲ್ಲ ಎಂದು ಮಹಿಳೆ ಮೈಮೇಲಿದ್ದ 117 ಗ್ರಾಂ ಚಿನ್ನ, 71.83 ಗ್ರಾಂ ಬೆಳ್ಳಿಯ ವಸ್ತು ಹಾಗೂ ಪರ್ಸ್‌ನ್ನು ತೆಗೆಯಿಸಿ ತನ್ನ ಬ್ಯಾಗನಲ್ಲಿ ಇರಿಸಿಕೊಂಡಿದ್ದ.

ನಂತರ ಏರ್‌ಪೋರ್ಟ್ ಹೊಗಡೆಯೇ ಮಹಿಳೆ ಮತ್ತು ಅವರ ಸಹೋದರನನ್ನು ಕ್ಯಾಬ್‌ನಿಂದ ಇಳಿಸಿದ್ದಾನೆ. ಐಡಿ ಕಾರ್ಡ್ ಝರಾಕ್ಸ್ ಮಾಡಿಸಬೇಕು, ಊಟ ಮಾಡಿಕೊಂಡು ಬರೋಣ ಎಂದು ಬಸ್‌ನಲ್ಲಿ ಮತ್ತೆ ವಾಪಸ್ ಬಾಗಲೂರಿನ ಮಯೂರ ಬೇಕರಿಗೆ ಕರೆದುಕೊಂಡು ಬಂದಿದ್ದಾನೆ. ಟಿಕೆಟ್ ಬುಕ್ ಮಾಡಿಸಲು ರಮೇಶ್‌ನನ್ನು ಅಲ್ಲಿಯೇ ಬಿಟ್ಟು, ಮಹಿಳೆಯನ್ನು ಬಸ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಸ್ಸಿನ ಮುಂಭಾಗ ಕುಳಿತಿದ್ದ ಮಹಿಳೆಯನ್ನು ಅರ್ಧಕ್ಕೆ ಬಿಟ್ಟು ವಾಪಸ್ ಮಯೂರ ಬೇಕರಿಗೆ ಬಂದು, ಮಹಿಳೆ ಸಹೋದರ ರಮೇಶ್ ಬಳಿ ಇದ್ದ ಚಿನ್ನದ ಬ್ಯಾಗ್ ಪಡೆದುಕೊಂಡು ಹೋಗಿದ್ದಾನೆ. ಅರ್ಥಕ್ಕೆ ಬಿಟ್ಟು ಹೋಗಿದ್ದವನ ಮೇಲೆ ಸಂಶಯಗೊಂಡ ಮಹಿಳೆ ವಾಪಸ್ ಮಯೂರ ಬೇಕರೆಗೆ ಬಂದು ಸಹೋದರನಿಗೆ ಚಿನ್ನದ ಬ್ಯಾಗ್ ಎಲ್ಲಿ ಎಂದು ಕೇಳಿದ್ದಾಳೆ. ನಿನ್ನ ಜತೆ ಬಂದ ವ್ಯಕ್ತಿ ಬಂದು ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಿದ್ದಾನೆ. ಆಗ ತಾವುಗಳು ಮೋಸಕ್ಕೆ ಹೋಗಿರುವುದು ಗೊತ್ತಾಗಿದೆ.

ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ, ಕಳ್ಳತನವಾಗಿದ್ದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.