ಕೇಂದ್ರ ಪಾಲಿಕೆ ವ್ಯಾಪ್ತಿಯ ಹಳೇ ವಿಮಾನ ನಿಲ್ದಾಣ ರಸ್ತೆಯ ಯು.ಆರ್. ರಾವ್ ಉಪಗ್ರಹ ಕೇಂದ್ರದ ಬಳಿಯಿರುವ ವಿಂಡ್ ಟನಲ್ ಜಂಕ್ಷನ್ನಲ್ಲಿ ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಕೇಂದ್ರ ಪಾಲಿಕೆ ಅಪರ ಆಯುಕ್ತ ವೆಂಕಟಾ ಚಲಪತಿ, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಹೇಮಲತಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
- ಗುತ್ತಿಗೆದಾರರಿಗೆ ಕೃಷ್ಣ ಬೈರೇಗೌಡ ಸೂಚನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ವಿಂಡ್ ಟನಲ್ ಕೆಳಸೇತುವೆ ಕಾಮಗಾರಿಗೆ ವೇಗ ನೀಡಲು ಗುತ್ತಿಗೆದಾರರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.
ಕೇಂದ್ರ ಪಾಲಿಕೆ ವ್ಯಾಪ್ತಿಯ ಹಳೇ ವಿಮಾನ ನಿಲ್ದಾಣ ರಸ್ತೆಯ ಯು.ಆರ್. ರಾವ್ ಉಪಗ್ರಹ ಕೇಂದ್ರದ ಬಳಿಯಿರುವ ವಿಂಡ್ ಟನಲ್ ಜಂಕ್ಷನ್ಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಜಲಮಂಡಳಿಯ ಪೈಪ್ಲೈನ್, ಒಳಚರಂಡಿ, ಬೆಸ್ಕಾಂ ಕೇಬಲ್ಗಳು, ಒಎಫ್ಸಿ ಕೇಬಲ್ಗಳು ಸೇರಿ ಇತರೆ ಯುಟಿಲಿಟಿಗಳ ಸ್ಥಳಾಂತರ ಕಾರ್ಯ ಪೂರ್ಣಗೊಳಿಸಲಾಗಿದೆ. ಇದೀಗ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು, 3 ತಿಂಗಳಲ್ಲಿ ಪೂರ್ಣಗೊಳಿಸಲು ನಿರ್ದೇಶಿಸಿದರು.
ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ ಕಾಮಗಾರಿ ನಡೆಸಲಾಗುತ್ತಿದೆ. ಜಂಕ್ಷನ್ನ ಎರಡೂ ಬದಿಗಳಲ್ಲಿರುವ ರಕ್ಷಣಾ, ಇಸ್ರೋ, ಎನ್.ಎ.ಎಲ್. ಇಲಾಖೆ ಹಾಗೂ ಖಾಸಗಿ ಜಾಗಗಳಲ್ಲಿ ತಾತ್ಕಾಲಿಕ ರಸ್ತೆಗಳನ್ನು ತ್ವರಿತವಾಗಿ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದರು. ಯುಟಿಲಿಟಿಗಳ ಸ್ಥಳಾಂತರ ಕಾರ್ಯ ಪೂರ್ಣಗೊಲೀಸಲಾಗಿದ್ದು, ತಡೆಗೋಡೆ ಕಾಮಗಾರಿ ಕಾರ್ಯ ಪ್ರಗತಿಯಲ್ಲಿದೆ. ತಡೆಗೋಡೆ ಕಾರ್ಯ ಮುಗಿದ ಬಳಿಕ ಮಧ್ಯಭಾಗಕ್ಕೆ ಸಿದ್ಧಪಡಿಸಿರುವ ಬಾಕ್ಸ್ಗಳನ್ನು ಅಳವಡಿಸಿ, ಕೊನೆಯ ಹಂತದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ವಿಂಡ್ ಟನಲ್ ಜಂಕ್ಷನ್ನಲ್ಲಿ 19 ಕೋಟಿ ರೂ. ವೆಚ್ಚದಲ್ಲಿ 300 ಮೀಟರ್ ಉದ್ದದ ಕೆಳಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಎರಡೂ ಬದಿಗಳಲ್ಲಿ 7.5 ಮೀಟರ್ ಅಗಲದ 4 ಪಥಗಳ ಕೆಳಸೇತುವೆ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಒಂದು ಭಾಗದಲ್ಲಿ ಉಪಯುಕ್ತತೆಗಳ ಸ್ಥಳಾಂತರ, ಆರ್.ಸಿ.ಸಿ. ಗೋಡೆ ನಿಮಾರ್ಣ, ಸರ್ವೀಸ್ ರಸ್ತೆ ನಿಮಾರ್ಣ ಹಾಗೂ ಮಧ್ಯಭಾಗದಲ್ಲಿ ಅಳವಡಿಸಲಾಗುವ ಬಾಕ್ಸ್ಗಳ ತಯಾರಿಕೆ ಸೇರಿ ಶೇ. 75 ಕಾಮಗಾರಿ ಪೂರ್ಣಗೊಂಡಿದೆ.