municipalelections 
ಬೆಂಗಳೂರು

2026ರಲ್ಲಾದರೂ ನಡೆಯುತ್ತಾ ಪಾಲಿಕೆ ಎಲೆಕ್ಷನ್​ ?

ಪ್ರಮುಖ ಮುಖ್ಯಾಂಶಗಳು

  • ಮೂಲಸೌಕರ್ಯ ಕಲ್ಪಿಸದಿದ್ದಲ್ಲಿ ಎಲೆಕ್ಷನ್ ಎದುರಿಸುವುದು ಕಷ್ಟ
  • ಬ್ರ್ಯಾಂಡ್ ಬೆಂಗಳೂರು ಕಾರ್ಯರೂಪಕ್ಕಿಳಿಸಲು ಆದ್ಯತೆ ಅಗತ್ಯ
ಬೆಂಗಳೂರು: ಬಿಬಿಎಂಪಿಗೆ ಚುನಾವಣೆ ನಡೆಸದೆ ಐದು ವರ್ಷ ಕಳೆದ ಬಳಿಕ, ಪಂಚ ಪಾಲಿಕೆಗಳನ್ನು ರಚಿಸಿ ಗ್ರೇಟರ್ ಬೆಂಗಳೂರು ಸ್ವರೂಪ ನೀಡಲಾಗಿದೆ. ಈ ಐದೂ ಕಾರ್ಪೋರೇಷನ್‌ಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸಿ ಚುನಾಯಿತಿ ಸ್ಥಳೀಯಾಡಳಿತವನ್ನು ಅಸ್ತಿತ್ವಕ್ಕೆ ತರಬೇಕಾದ ಗುರುತರ ಹೊಣೆ ರಾಜ್ಯ ಸರ್ಕಾರದ ಮೇಲಿದೆ. 2026ಕ್ಕೆ ಕಾಲಿಟ್ಟಿರುವ ಹೊಸ್ತಿನಲ್ಲಾದರೂ ಚುನಾವಣೆ ನಡೆಯುವ ಆಶಾವಾದ ಕಾರ್ಯರೂಪಕ್ಕೆ ಬರಲಿ ಎಂಬ ಆಶಯ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ರಾಜಧಾನಿ ಬೆಂಗಳೂರು ಇಡೀ ವಿಶ್ವದಲ್ಲೇ ಅತಿ ವೇಗದ ಬೆಳವಣಿಗೆ ಕಾಣುತ್ತಿರುವ ನಗರ ಎಂಬ ಖ್ಯಾತಿ ಪಡೆದಿದೆ. ಈ ಖ್ಯಾತಿಗೆ ತಕ್ಕಂತೆ ನಗರವು ಸಕಲ ಮೂಲಸೌಕರ್ಯ ಹೊಂದುವ ಕನಸು ಈಡೇರಿಲ್ಲ. ನಾಗರಿಕರಿಗೆ ದೈನಂದಿನ ಸೌಲಭ್ಯಗಳನ್ನು ಒದಗಿಸುವ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಕಿವಿಯಾಗುವ ಕಾರ್ಪೋರೇಟರ್‌ಗಳು ಅಧಿಕಾರದಲ್ಲಿ ಇಲ್ಲದಿರುವುದು ಹಾಲಿ ಸಮಸ್ಯೆಗೆ ಮೂಲ ಕಾರಣ. ಇದನ್ನು ಅರ್ಥೈಸಿಕೊಳ್ಳದ ಸರ್ಕಾರ, ಸ್ಥಳೀಯಾಡಳಿತ ವ್ಯವಸ್ಥೆಯನ್ನು ಬಲಪಡಿಸಲು ಬೇಕಾದ ಟಾನಿಕ್ (ಎಲೆಕ್ಷನ್) ನೀಡಲು ಮುಂದಾಗಿಲ್ಲ. ಈ ಲೋಪದಿಂದಾಗಿ ಬೆಂಗಳೂರು ನಗರವು ಅಭಿವೃದ್ಧಿ ಹೊಂದದೆ ಹಿಮ್ಮುಖವಾಗಿ ಚಲಿಸಲಾರಂಭಿಸಲಿದೆ ಎಂಬ ಆಕ್ಷೇಪ ಕೇಳಿಬಂದಿದೆ.
ಹಿಂದಿನ ಬಿಬಿಎಂಪಿ ಆಡಳಿತ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಭರದಲ್ಲಿ ಅವಧಿ ಮುಗಿದ ಬಳಿಕ ಚುನಾವಣೆ ನಡೆಸಲಾಗಲಿಲ್ಲ. ನಂತರದಲ್ಲಿ ಗ್ರೇಟರ್ ಬೆಂಗಳೂರು ಪರಿಕಲ್ಪನೆಯನ್ನು ಮುಂದಿಟ್ಟು ಐದು ಪಾಲಿಕೆಗಳಾಗಿ ವಿಂಗಡಿಸಲಾಯಿತು. ಈ ಹೊಸ ವ್ಯವಸ್ಥೆಯನ್ನು ಪೂರ್ಣವಾಗಿ ಅಸ್ತಿತ್ವಕ್ಕೆ ತರಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಇದನ್ನೇ ನೆಪವಾಗಿಸಿ ಮತ್ತಷ್ಟು ದಿನ ಎಲೆಕ್ಷನ್ ನಡೆಸದಿರುವುದು ಸರ್ಕಾರಕ್ಕೆ ಶೋಭೆ ತರದು ಎಂಬುದಾಗಿ ಮಾಜಿ ಪುರಪಿತೃಗಳು ಹಾಗೂ ನಗರ ಪರಿಣಿತರು ಪ್ರತಿಪಾದಿಸಿದ್ದಾರೆ.

ಅಭಿವೃದ್ಧಿಗೆ ಹಿನ್ನಡೆ:

ಬಿಬಿಎಂಪಿಗೆ ಐದು ವರ್ಷ ಚುನಾವಣೆ ನಡೆಸದೆ ಆಡಳಿತಾಧಿಕಾರಿ ಅಧಿಕಾರ ಇದ್ದ ಸಮಯದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಸಕಾಲದಲ್ಲಿ ಅನುದಾನ ಬಿಡುಗಡೆ ಆಗದೆ ಪ್ರಮುಖ ಮೂಲಸೌಕರ್ಯ ಯೋಜನೆಗಳು ಮುಲೆಗುಂಪಾದವು. ವಸತಿ ಪ್ರದೇಶಗಳಲ್ಲಿ ಸೌಲಭ್ಯ ಕಲ್ಪಿಸಬೇಕಿದ್ದ ಸಣ್ಣಪುಟ್ಟ ಕಾಮಗಾರಿಗಳೂ ನಡೆಯಲಿಲ್ಲ. ಇದರ ಪರಿಣಾಮ ಬೆಂಗಳೂರು ಮಹಾನಗರವು ಮೂಲಸೌಕರ್ಯವಿಲ್ಲದೆ ಬಳಲಿತು. ಈ ಹಂತದಲ್ಲಿ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಮುನ್ನೆಲೆಗೆ ತಂದರೂ ಅಭಿವೃದ್ಧಿಯ ಭರವಸೆ ಈಡೇರಲಿಲ್ಲ. ಕಾಲಕ್ರಮೇಣ ‘ಬ್ರ್ಯಾಂಡ್ ಬೆಂಗಳೂರು - ಬ್ಯಾಡ್ ಬೆಂಗಳೂರು’ ಆಗಿದೆ ಎಂದು ಪ್ರತಿಪಕ್ಷ ಹುಯಿಲೆಬ್ಬಿಸಿದೆ. ಜತೆಗೆ ಐಟಿ ಸಿಟಿ ಸೌಲಭ್ಯಗಳಿಲ್ಲದ ನಗರ ಎಂಬ ಕುಖ್ಯಾತಿಗೆ ಒಳಗಾಗಿದೆ. ಈ ಮಧ್ಯೆ ರಸ್ತೆಗುಂಡಿ ಸಮಸ್ಯೆ ನಗರಕ್ಕೆ ಕಳಂಕ ತಂದಿತು. ಗುಂಡಿ ಮುಚ್ಚಲು ಹರಸಾಹಸಪಟ್ಟ ಅಧಿಕಾರಿ ವರ್ಗಕ್ಕೂ ಈಗ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂಬ ಮನವರಿಕೆಯಾಗುತ್ತಿದೆ.

ಅನುದಾನ ಖೋತಾ?

ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆ ಅನ್ವಯ ಸ್ಥಳೀಯ ಆಡಳಿತದ ಅವಧಿ ಪೂರ್ಣಗೊಂಡ ಬಳಿಕ ಕಾಲಮಿತಿಯೊಳಗೆ ಹೊಸ ಚುನಾಯಿತ ವ್ಯವಸ್ಥೆಗೆ ಅವಕಾಶ ಕಲ್ಪಿಸಬೇಕು. ಇದಕ್ಕೆ ಸರ್ಕಾರದ ಹಸ್ತಕ್ಷೇಪ ಇರಬಾರದು ಎನ್ನುತ್ತದೆ ಕಾಯ್ದೆ. ಆದರೆ, ಆಯಾ ಸರ್ಕಾರಗಳು ತಮ್ಮ ಅವಧಿಯಲ್ಲಿ ಕಾಯ್ದೆಯಲ್ಲಿನ ಅಂಶಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಎಲೆಕ್ಷನ್ ನಡೆಯುತ್ತಿಲ್ಲ. ಬಿಬಿಎಂಪಿ ವಿಚಾರದಲ್ಲೂ ಈ ಅಂಶವೇ ಮುಳುವಾಯಿತು. ಈಗ ಪಂಚ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ಪಾಲಿಕೆಗಳ ಗಡಿ ಗುರುತಿಸುವಿಕೆ, ವಾರ್ಡ್‌ವಾರು ವಿಂಗಡಣೆ ಪೂರ್ಣಗೊಂಡಿದೆ. ಮೀಸಲು ನಿಗದಿ ಇನ್ನಷ್ಟೇ ಆಗಬೇಕಿದೆ. ಈ ಪ್ರಕ್ರಿಯೆ ವೇಗ ಪಡೆಯದಿದ್ದಲ್ಲಿ ಮತ್ತೆ ಚುನಾವಣೆ ಅನಿಶ್ಚಿತತೆಯತ್ತ ಹೊರಳದಿರದು. ಮುಖ್ಯವಾಗಿ ಎಲೆಕ್ಷನ್ ನಡೆಯದಿದ್ದಲ್ಲಿ ಅನುದಾನ ಖೋತಾ ಅಗಿ ಅಭಿವೃದ್ಧಿಯಲ್ಲಿ ಹಿನ್ನಡೆ ಉಂಟಾಗಬಹುದು ಎನ್ನುತ್ತಾರೆ ನಗರ ಪರಿಣಿತರು.

ಸರ್ಕಾರ ಇಚ್ಛಾಶಕ್ತಿ ತೋರುವುದೆ?:

ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರದ ಸೂಚನೆ ಆಧರಿಸಿಯೆ ರಾಜ್ಯ ಚುನಾವಣಾ ಆಯೋಗ ಎಲೆಕ್ಷನ್‌ಗೆ ಭೂಮಿಕೆ ಸಿದ್ಧಪಡಿಸುತ್ತದೆ. ಆಯೋಗಕ್ಕೆ ಸೀಮಿತ ಅಧಿಕಾರ ಇರುವುದರಿಂದ ಸರ್ಕಾರದ ನಿಲುವೇ ಅಂತಿಮ. ಹಾಗಾಗಿ ರಾಜ್ಯ ಸರ್ಕಾರ ಈಗ ಇಚ್ಛಾಶಕ್ತಿ ಪ್ರದರ್ಶನ ಮಾಡುವುದೇ ಎಂಬ ಜಿಜ್ಞಾಸೆ ಮೂಡಿಸಿದೆ.