- ಎಸ್‌ಐಆರ್ ಪ್ರಕ್ರಿಯೆಯಿಂದ ಅಡ್ಡಿಯಾಗುವ ಸಾಧ್ಯತೆ
- ರಾಜ್ಯ ಚುನಾವಣಾ ಆಯೋಗಕ್ಕೆ ಭಾರಿ ಸವಾಲು
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಂಚ ಪಾಲಿಕೆಗಳಿಗೆ ಆ.31ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಅಂತಿಮ ಗಡುವು ನೀಡಿ ಆದೇಶಿಸಿದೆ. ಆದರೆ, ಈ ಗಡುವಿನ ಸಮಯದಲ್ಲಿ ರಾಜಧಾನಿ ಸೇರಿ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುವ ವೇಳೆ ಎಲೆಕ್ಷನ್ ನಡೆಯುವುದೇ ಎಂಬ ಕುತೂಹಲ ಮೂಡಿಸಿದೆ.
ಕಳೆದ ಐದೂವರೆ ವರ್ಷದಿಂದ ಕಾರ್ಪೋರೇಷನ್ ಎಲೆಕ್ಷನ್ ನಡೆದಿಲ್ಲ. ಅಂದಿನಿಂದ ಆಡಳಿತಾಧಿಕಾರಿಗಳೇ ಪಾಲಿಕೆ ಆಡಳತವನ್ನು ನಡೆಸುತ್ತಿದ್ದಾರೆ. ಆಡಳಿತಾಧಿಕಾರಿ ಬದಲು ಚುನಾಯಿತ ಸದಸ್ಯರ ವ್ಯವಸ್ಥೆಯನ್ನು ಮರುಸ್ಥಾಪಿಸಲು ಕೋರಿ ಅಂದಿನಿಂದ ಹಲವು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿದೆ. ಅರ್ಜಿದಾರರ ವಾದದ ಮಧ್ಯೆಯೂ ಸರ್ಕಾರ ವಿವಿಧ ಕಾರಣ ನೀಡಿ ಕಾಲಾವಕಾಶ ಪಡೆಯುತ್ತಲೇ ಬಂದಿದೆ. ಇತ್ತೀಚಿಗೆ ಸ್ವತ: ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ ಕಾರಣಕ್ಕೆ ಎಲೆಕ್ಷನ್‌ಅನ್ನು ನಿಗದಿಯಂತೆ ಜೂ.30ರೊಳಗೆ ಪೂರ್ಣಗೊಳಿಸಲು ಸಾಧ್ಯವಾಗದು ಎಂಬುದನ್ನು ಸುಪ್ರೀಂಗೆ ಪ್ರಮಾಣಪತ್ರ ಸಲ್ಲಿಸಿದ ಬಳಿಕ ಆ.31ರವರೆಗೆ ಕಾಲಾವಕಾಶ ಪಡೆದುಕೊಂಡಿದೆ.
ಸುಪ್ರೀಂಕೋರ್ಟ್ ಬುಧವಾರದ ವಿಚಾರಣೆ ವೇಳೆ ಮತ್ತೆ ಯಾವ ನೆಪವನ್ನೂ ಹೇಳದೆ ಆ.31ರೊಳಗೆ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಕೊನೆಯ ಅವಕಾಶ ನೀಡಿದೆ. ಈ ಆದೇಶ ಅನ್ವಯ ಮುಂದಿನ 100 ದಿನಗಳ ಗಡುವಿನೊಳಗೆ ಕಾರ್ಪೋರೇಷನ್ ಎಲೆಕ್ಷನ್ ನಡೆಸುವುದು ಆಯೋಗದ ಹೆಗಲೇರಿದೆ. ಈ ಅವಧಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ ಚುನಾವಣೆಗೆ ಸಿಬ್ಬಂದಿಯನ್ನು ಹೇಗೆ ಹೊಂದಿಸಿಕೊಳ್ಳಲಿದೆ ಎಂಬ ಜಿಜ್ಞಾಸೆ ಮೂಡಿದೆ. ಮುಖ್ಯವಾಗಿ ಎಸ್‌ಐಆರ್‌ಗೆ ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ನಡೆಯುವ ವೇಳೆ ಅರ್ಧಕ್ಕೆ ನಿಲ್ಲಿಸಿ ಇದೇ ಸಿಬ್ಬಂದಿಯನ್ನು ಎಲೆಕ್ಷನ್‌ಗಾಗಿ ಬಳಸಿಕೊಳ್ಳಲು ತಾಂತ್ರಿಕವಾಗಿ ಸಮಸ್ಯೆ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಮತದಾರರ ಪಟ್ಟಿ ವ್ಯತ್ಯಾಸ ಸಾಧ್ಯತೆ:
ಕಾರ್ಪೋರೇಷನ್ ಎಲೆಕ್ಷನ್ ಸಂಬಂಧ ರಾಜ್ಯ ಚುನಾವಣಾ ಆಯೋಗವು ಕಳೆದ ತಿಂಗಳ ಮಧ್ಯಭಾಗದಲ್ಲಿ ಪಂಚ ಪಾಲಿಕೆಗಳ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರನ್ವಯ 5 ಪಾಲಿಕೆಗಳಲ್ಲಿ ಒಟ್ಟು 88.95 ಲಕ್ಷ ಮತದಾರರು ಇದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಜೂ.20ರಿಂದ ಆರಂಭಗೊಂಡು ವಿವಿಧ ಹಂತಗಳನ್ನು ದಾಟಿ ಅ.7ರಂದು ಅಂತಿಮ ಮತಪಟ್ಟಿ ಹೊರಬೀಳಲಿದೆ. ಸುಪ್ರೀಂ ಆದೇಶದಂತೆ ಆ.31ರೊಳಗೆ ಚುನಾವಣೆ ನಡೆದಲ್ಲಿ ಹಾಲಿ ಮತಪಟ್ಟಿ ಬಳಸಿಕೊಳ್ಳಬೇಕಾಗುತ್ತದೆ. ಎಸ್‌ಐಆರ್ ಮತಪಟ್ಟಿ ಬಳಸಿಕೊಳ್ಳುವಂತೆ ಕೂಗು ಎದ್ದಲ್ಲಿ ಕೆಲವರು ಮತ್ತೆ ನ್ಯಾಯಾಲಯದ ಕದ ತಟ್ಟುವ ಸಾಧ್ಯತೆ ಇದೆ.
ಇತ್ಯರ್ಥ ಕಾಣದ ಅರ್ಜಿಗಳು:
ಸುಪ್ರೀಂಕೋರ್ಟ್ ಎಲೆಕ್ಷನ್ ನಡೆಸಲು ಆ.31ರ ಗಡುವು ನೀಡಿದ್ದರೂ, ಪ್ರಸ್ತುತ ಹೈಕೋರ್ಟ್‌ನಲ್ಲಿ 8 ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಇತ್ಯರ್ಥ ಕಾಣದೆ ಬಾಕಿ ಉಳಿದಿವೆ. ಜತೆಗೆ ಸುಪ್ರೀಂಕೋರ್ಟ್‌ನಲ್ಲೂ 6 ತಕರಾರು ಅರ್ಜಿಗಳು ಇವೆ. ಈ ಅರ್ಜಿಗಳು ವಿಲೇವಾರಿ ಆಗದೆ ಚುನಾವಣೆ ನಡೆಸುವುದು ಸಾಧುವಲ್ಲ ಎಂಬ ಮಾತು ಮಾಜಿ ಪುರಪಿತೃಗಳು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಹೊಸ ಮತದಾರರ ಪಟ್ಟಿ ಅನ್ವಯ ಚುನಾವಣೆ ನಡೆಸಬೇಕು ಎಂದು ಕೋರಿ ಹೊಸದಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಕೆಲವರು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಹಾಗಾಗಿ ಪಂಚ ಪಾಲಿಕೆಗಳ ಚುನಾವಣೆ ನಿಗದಿಯಂತೆ ನಡೆಯುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.
10-15 ಲಕ್ಷ ಮತದಾರರು ಪಟ್ಟಿಯಿಂದ ಹೊರಕ್ಕೆ?:
ಎಸ್‌ಐಆರ್ ಮತಪಟ್ಟಿ ಅಂತಿಮಗೊಂಡಲ್ಲಿ ಜಿಬಿಎ ವ್ಯಾಪ್ತಿಯಲ್ಲಿ 10-15 ಲಕ್ಷ ಮತದಾರರು ಪಟ್ಟಿಯಿಂದ ಹೊರಹೋಗುಳಿಯುವ ಸಾಧ್ಯತೆ ಇದೆ. ಏಕೆಂದರೆ ಮತದಾರರ ಪಟ್ಟಿಯಲ್ಲಿ ಒಂದು ಕಡೆ ಮಾತ್ರ ಹೆಸರು ಇರಬೇಕೆಂಬ ಆಯೋಗದ ನಿಯಮ ಜಾರಿಯಾದಲ್ಲಿ, ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಹೆಸರು ಹೊಂದಿರುವವರು ಅನಿವಾರ್ಯವಾಗಿ ಆಯೋಗದ ನಿಯಮವನ್ನು ಪಾಲಿಸಬೇಕಾಗುತ್ತದೆ. ವಿಶೇಷವೆಂದರೆ ಬೆಂಗಳೂರಿಗೆ ವಲಸೆ ಬಂದಿರುವ ಉತ್ತರ ಕರ್ನಾಟಕ, ಉತ್ತರ ಭಾರತ ಹಾಗೂ ನೆರೆಯ ರಾಜ್ಯದವರು ಹಾಲಿ ಮತಪಟ್ಟಿಯಲ್ಲಿ ಸೇರಿದ್ದಾರೆ. ಇವರ ಪೈಕಿ ಹೆಚ್ಚಿನವರು ಸರ್ಕಾರದ ಸೌಲಭ್ಯ ಹಾಗೂ ಇನ್ನಿತರ ಕಾರಣದಿಂದ ತಮ್ಮ ತವರಿನಲ್ಲೇ ಹೆಸರು ಉಳಿಸಿಕೊಳ್ಳಲು ಬಯಸುವುದುಂಟು. ಹಾಗಾಗಿ ಎಸ್‌ಐಆರ್ ಬಳಿಕ ನಗರದ ಮತದಾರರ ಸಂಖ್ಯೆ 88.95 ಲಕ್ಷದಿಂದ 75 ಲಕ್ಷಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ. ಇದು ನಿಜವಾದಲ್ಲಿ ಪಾಲಿಕೆಗಳ ಮತದಾರರ ಸಂಖ್ಯೆ ವ್ಯತ್ಯಾಸಗೊಂಡು ವಾರ್ಡ್‌ವಾರು ವೋಟರ್ಸ್ ಅಂಕಿ-ಅಂಶ ಏರುಪೇರಾಗುತ್ತದೆ. ಇದನ್ನು ಪ್ರಶ್ನಿಸಿ ರಾಜಕೀಯ ಪಕ್ಷಗಳು ಮತ್ತೊಮ್ಮೆ ಕೋರ್ಟ್ ಮೆಟ್ಟಿಲು ಹತ್ತಲು ಅವಕಾಶವಾಗಲಿದೆ.
ಮುಖ್ಯಾಂಶ:
* ಹಿಂದಿನ ಪಾಲಿಕೆ ಅವಧಿ ಮುಕ್ತಾಯ - 2020ರ ಸೆ.10
* ಪಂಚ ಪಾಲಿಕೆಗಳ ಒಟ್ಟು ವಾರ್ಡ್‌ಗಳು - 369
* ಹಾಲಿ ಮತದಾರರ ಒಟ್ಟು ಸಂಖ್ಯೆ - 88.95 ಲಕ್ಷ
* ಸುಪ್ರೀಂ ಎಲೆಕ್ಷನ್‌ಗೆ ನೀಡಿರುವ ಗಡುವು - 2026ರ ಆ.31
ರಾಜ್ಯದಲ್ಲಿ ಎಸ್‌ಐಆರ್ ವೇಳಾಪಟ್ಟಿ ವಿವರ:
ಚಟುವಟಿಕೆಯ ದಿನ ಪ್ರಕ್ರಿಯೆ ಏನು?
ಜೂ.20-ಜೂ.29 ಸಿದ್ಧತೆ, ತೆರಬೇತಿ, ಮುದ್ರಣ
ಜೂ.30-ಜು.29 ಬಿಎಲ್‌ಒಗಳ ಮನೆ ಮನೆ ಭೇಟಿ
ಜು.29ರೊಳಗೆ ಮತಗಟ್ಟೆಗಳ ಹೊಂದಾಣಿಕೆ
ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟ
ಆ.5-ಸೆ.4 ಹಕ್ಕು/ಆಕ್ಷೇಪಣೆ ಸಲ್ಲಿಕೆ
ಆ.5-ಅ.3 ನೋಟಿಸ್, ಹಕ್ಕು/ಆಕ್ಷೇಪಣೆ ವಿಲೇ
ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ