ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ 
ಬೆಂಗಳೂರು

ಮಸೂದೆಗಳಿಗೆ ಅಧಿವೇಶನ ಸೀಮಿತವಾದರೆ ಸಹಿಸೆವು

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ
  • ಅಧಿಕಾರ ಹಂಚಿಕೆಯ ಹಗ್ಗಜಗ್ಗಾಟದಲ್ಲಿ ಜನರ ಸಮಸ್ಯೆಗಳೇ ಮೂಲೆಗುಂಪು
  • ಉತ್ತರ ಕರ್ನಾಟಕ ಪ್ರಾಂತದ ಜಟಿಲ ಸಮಸ್ಯೆಗಳ ಚರ್ಚೆ, ಪರಿಹಾರದ ಅಗತ್ಯ
ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನವು ಸರ್ಕಾರಿ ಕಾರ್ಯಕಲಾಪಗಳಿಗೆ ಸೀಮಿತವಾದರೆ ಸಹಿಸುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayana swamy) ಎಚ್ಚರಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, 50ಕ್ಕೂ ಹೆಚ್ಚು ಮಸೂದೆಗಳನ್ನು ಮಂಡಿಸಲು ಸರ್ಕಾರ ತಯಾರಿ ನಡೆಸಿದ ಮಾಹಿತಿಯಿದೆ.
ಇದನ್ನು ಗಮನಿಸಿದರೆ ಮಸೂದೆಗಳ ಮಂಡನೆ, ಚರ್ಚೆ ಹಾಗೂ ಅಂಗೀಕಾರಕ್ಕೆ ಅಧಿವೇಶನ ಕರೆದ ಅನುಮಾನ ಬರುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಸರ್ಕಾರಿ ಕಾರ್ಯ-ಕಲಾಪಗಳಿಗೆ ಅಭ್ಯಂತರವಿಲ್ಲ. ಇದೇ ಪ್ರಕ್ರಿಯೆಗೆ ಅಧಿವೇಶನ ಮೀಸಲಿಡುವುದನ್ನು ಒಪ್ಪಲಾಗದು. ಉತ್ತರ ಕರ್ನಾಟಕದ ಅನೇಕ ಸಮಸ್ಯೆಗಳ ಚರ್ಚೆ, ಪರಿಹಾರಕ್ಕೆ ಆದ್ಯತೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಸಿಎಂ ಕುರ್ಚಿಗೆ ಕಿತ್ತಾಟ, ಅಧಿಕಾರ ಹಂಚಿಕೆ ಬಡಿದಾಟದಲ್ಲಿ ಮಂತ್ರಿ ಮಂಡಲ ಮಗ್ನವಾಗಿದ್ದು, ಜನರ ಕುಂದು-ಕೊರತೆಗಳು ನಗಣ್ಯವಾಗಿವೆ ಎಂದು ಕುಟುಕಿದರು.
ಉಭಯ ಸದನಗಳಲ್ಲಿ ಉತ್ತರ ಕರ್ನಾಟಕ ಭಾಗದ ಜಟಿಲ ಸಮಸ್ಯೆಗಳು, ರೈತರು, ಜನರ ಕುಂದು-ಕೊರತೆಗಳ ಬಗ್ಗೆ ಚರ್ಚೆ, ಸರ್ಕಾರದ ಉತ್ತರಕ್ಕೂ ಅವಕಾಶ ಸಿಗಲಿ ಎಂದು ಆಗ್ರಹಿಸಿದರು.

ವೇಣುಗೋಪಾಲ್ ಹೈಕಮಾಂಡ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ದೊಡ್ಡವರು. ಅವರೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಂಬುದು ಇದೀಗ ಸ್ಪಷ್ಟವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಛೇಡಿಸಿದರು.
ವೇಣುಗೋಪಾಲ್ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದಾರೆ. ಯಾವುದೋ ಒಬ್ಬ ವ್ಯಕ್ತಿಯ ಕೈಯಲ್ಲಿ ಹೈಕಮಾಂಡ್‌ನ ಶಕ್ತಿಯಿದೆ. ಕಾಂಗ್ರೆಸ್ ಪರಿಸ್ಥಿತಿಯಿದೆ ಎಂದು ತಿವಿದರು.
ಗೊಂದಲಗಳನ್ನು ಬಗೆಹರಿಸಲು ಖುದ್ದು ಖರ್ಗೆಯವರು ಬೆಂಗಳೂರಿಗೆ ಬಂದಿದ್ದರು. 3-4ದಿನಗಳ ಕಾಲ ಬಿಡಾರ ಹೂಡಿ ಸಿಎಂ, ಡಿಸಿಎಂ, ಸಚಿವರನ್ನು ಕರೆದು ಮಾತುಕತೆ ನಡೆಸಿದ್ದರು.
ಸಂಗ್ರಹಿಸಿದ ಅಭಿಪ್ರಾಯಗಳು, ವ್ಯಕ್ತಪಡಿಸಿದ ಒಲವು-ನಿಲುವುಗಳನ್ನು ಗ್ರಹಿಸಿದ್ದರು. ಈ ಗೊಂದಲ, ಸಮಸ್ಯೆ ನನ್ನಿಂದ ಪರಿಹರಿಸಲು ಸಾಧ್ಯವಿಲ್ಲವೆಂಬ ಬೇಸರ ವ್ಯಕ್ತಪಡಿಸಿ ಹೊರಟು ಹೋಗಿದ್ದರು.
ಹೈಕಮಾಂಡ್‌ನವರು ಬಗೆಹರಿಸುತ್ತಾರೆ ಎಂದು ಸ್ವತಃ ಮಲ್ಲಿಕಾರ್ಜುನ ಖರ್ಗೆಯವರ ಪ್ರತಿಕ್ರಿಯಿ ಗಮನಿಸಿದ ಜನಸಾಮಾನ್ಯರು ಚಕಿತರಾಗಿದ್ದರು.
ಎಐಸಿಸಿ ಅಧ್ಯಕ್ಷರೇ ಕಾಂಗ್ರೆಸ್‌ಗೆ ಹೈಕಮಾಂಡ್ ಅಲ್ಲವೆ ? ಎಂಬ ಜನರ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ ಎಂದು ಛಲವಾದಿ ನಾರಾಯಣಸ್ವಾಮಿ ಮಾರ್ಮಿಕವಾಗಿ ಹೇಳಿದರು.