- ಜಿಕೆವಿಕೆ ಕ್ಯಾಂಪಸ್‌ನ ತೋಟಗಾರಿಕೆ ಕಾಲೇಜಿಗೆ ಸೇರಿದ ಜಾಗ
- ಸಂಶೋಧನಾ ಜಮೀನು ಪರಭಾರೆಗೆ ಪರಿಸರ ತಜ್ಞರ ಆಕ್ಷೇಪ
ಬೆಂಗಳೂರು: ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಕಾರ್ಯಾಚರಿಸುತ್ತಿರುವ ಬಾಗಲಕೋಟದ ತೋಟಗಾರಿಕೆ ಮಹಾವಿದ್ಯಾಲಯದ ಸುಪರ್ದಿಯಲ್ಲಿರುವ ಜಾಗದಲ್ಲಿ, ಪುಪ್ಪ ಮಾರುಕಟ್ಟೆ ಸ್ಥಾಪನೆಗೆ 10 ಎಕರೆ ಜಮೀನು ಪರಭಾರೆಗೆ ಪರಿಸರ ತಜ್ಞರು ಹಾಗೂ ಸ್ಥಳೀಯ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಉದ್ದೇಶಿತ ಮಾರುಕಟ್ಟೆಗಾಗಿ ಗುರುತಿಸಿರುವ ಜಾಗವು ಸಂಶೋಧನಾ ಚಟುವಟಿಕೆ ನಡೆಯುತ್ತಿರುವ ಪ್ರದೇಶವಾಗಿದೆ. ಇಲ್ಲಿ ಗೋಡಂಬಿ, ಚಕ್ಕೋತ, ಹಲಸು, ತೆಂಗು, ಮಹಾಗನಿ ಸೇರಿ ಪ್ರಮುಖ ತೋಟದ ಬೆಳೆಗಳು ಸೇರಿ 942 ಮರಗಳಿವೆ. ಅಪರೂಪದ ಮರಗಿಡಗಳು ಇರುವ ಈ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಯತ್ನ ನಡೆದಿದೆ. ಇದರಿಂದ ಸಂಶೋಧನಾ ಕಾರ್ಯ ಹಾಗೂ ಕ್ಯಾಂಪಸ್ ಕಾರ್ಯಚಟುವಟಿಕೆಗೆ ತೀವ್ರ ಧಕ್ಕೆ ಉಂಟಾಗಲಿದೆ ಎಂದು ಪರಿಸರ ವಿಜ್ಞಾನಿಗಳು ತಗಾದೆ ಎತ್ತಿದ್ದಾರೆ.
ನಗರದಲ್ಲಿ ಸುರಂಗ ರಸ್ತೆ ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ ಮರಗಳ ಹನನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಪುಷ್ಪ ಮಾರುಕಟ್ಟೆ ನಿರ್ಮಾಣಕ್ಕೆ ಗುರುತಿಸಿರುವ ಜಾಗದ ಬಗ್ಗೆಯೂ ಆಕ್ಷೇಪ ಕೇಳಿಬಂದಿದೆ. ಅಭಿವೃದ್ಧಿ ಹೆಸರಿನಲ್ಲಿ ಹಸಿರು ಬಲಿಗೊಟ್ಟು ಪರಿಸರ ಹಾಳು ಮಾಡುವ ನಡೆ ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನೂ ಪರಿಸರ ವಿಜ್ಞಾನಿಗಳು ಮುಂದಿಟ್ಟಿದ್ದಾರೆ. ಇದಕ್ಕೆ ಜಿಕೆವಿಕೆಯ ಕೃಷಿ ವಿವಿ ಹಾಗೂ ಬಾಗಲಕೋಟ ತೋಟಗಾರಿಕೆ ಮಹಾವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ದನಿಗೂಡಿಸಿರುವುದು ಹೋರಾಟಕ್ಕೆ ವೇದಿಕೆ ಕಲ್ಪಿಸಿದೆ.
ಜಾಗ ಬಿಟ್ಟುಕೊಡಲು ಒತ್ತಡ:
ಪ್ರಸ್ತುತ ಪುಷ್ಪ ಮಾರುಕಟ್ಟೆ ಸ್ಥಾಪಿಸಲು ಗುರುತಿಸಿರುವ ಜಾಗವು ಸಂಪೂರ್ಣ ಸಂಶೋಧನಾ ಕಾರ್ಯಕ್ಕೆ ಮೀಸಲಿಡಲಾಗಿದೆ. ಕಳೆದ 10-12 ವರ್ಷಗಳಿಂದ ಇಲ್ಲಿ ಎಂಎಸ್ಸಿ, ಪಿಎಚ್.ಡಿ ವಿದ್ಯಾರ್ಥಿಗಳು ವಿವಿಧ ಬಗೆಯ ಪ್ರಯೋಗ ಕೈಗೊಂಡಿದ್ದಾರೆ. ಆಯಾ ಋತುಗಳಲ್ಲಿ ಬೆಳೆಗಳ ಬೆಳವಣಿಗೆ, ಇಳುವರಿ ಹಾಗೂ ರಫ್ತು ಮಾಡಬಹುದಾದ ತಳಿಗಳನ್ನು ಶೋಧಿಸಿ ಗೋಡಂಬಿ, ಚಕ್ಕೋತ ಹಾಗೂ ಮಾವು ಗಿಡಗಳಿಗೆ ಕಸಿ ಮಾಡಿ ರೈತರಿಗೆ ವಿತರಿಸಲಾಗುತ್ತಿದೆ. ಕೃಷಿಕರಿಗೆ ಪ್ರಾತ್ಯಕ್ಷಿಕೆ ತಾಕುಗಳಲ್ಲಿ ತರಬೇತಿಯನ್ನು ಕೂಡ ನೀಡಲಾಗುತ್ತಿದೆ. ಇಂತಹ ಸಂಶೋಧನಾ ನಿರತ ಜಾಗವನ್ನು ಬೇಗನೆ ಹಸ್ತಾಂತರಿಸುವಂತೆ ಸರ್ಕಾರದಿಂದ ತೋಟಗಾರಿಕೆ ಮಹಾವಿದ್ಯಾಲಯದ ಮೇಲೆ ಒತ್ತಡ ಹಾಕಲಾಗುತ್ತಿದೆ. ಈ ವರ್ಷದ ಜನವರಿಯಲ್ಲಿ ಆರಂಭವಾಗಿರುವ ಪತ್ರ ವ್ಯವಹಾರ ಈಗಲೂ ನಿಂತಿಲ್ಲ. ಬದಲಿ ಜಾಗ ಸೂಚಿಸಿದರೂ, ಇದೇ ಜಾಗಕ್ಕಾಗಿ ಒತ್ತಡ ಹೇರಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ.
ಮಾರುಕಟ್ಟೆ ಸ್ಥಾಪನೆಗೆ ವಿರೋಧ ಏಕೆ?:
* ಪ್ರಸ್ತುತ ಮಾರುಕಟ್ಟೆ ನಿರ್ಮಿಸಲು ಗುರುತಿಸಿರುವ ಜಾಗ ಸಂಶೋಧನಾ ಕಾರ್ಯಕ್ಕೆ ಮೀಸಲು.
* ಮಾರ್ಕೆಟ್ ಬಂದಲ್ಲಿ ಕಾಲೇಜಿನ ಪರಿಸರ, ಅಧ್ಯಯನ ಚಟುವಟಿಕೆಗೆ ಅಡ್ಡಿ.
* ತೋಟಗಾರಿಕೆ ತಾಕುಗಳಲ್ಲಿ ರೈತಸ್ನೇಹಿ ತಂತ್ರಜ್ಞಾನ ಆಧರಿತ ಪ್ರಾತ್ಯಕ್ಷಿಕೆ ಕೈಗೊಂಡಿರುವುದು.
* ಕಾಲೇಜಿಗೆ ಹೊಂದಿಕೊಂಡಿರುವ ಜೀವ ವೈವಿಧ್ಯತೆಯ ಪರಿಸರಕ್ಕೆ ಧಕ್ಕೆ.
* 300 ಮಳಿಗೆಗಳು ಸ್ಥಾಪನೆಯಾದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಕ್ಯಾಂಪಸ್ ಸ್ವರೂಪ ಹಾಳು.
ಶಾಸಕರಿಂದ ಪತ್ರ ರವಾನೆ:
ಪುಷ್ಪ ಮಾರುಕಟ್ಟೆ ಸ್ಥಾಪನೆ ಸಬಂಧ ಸಾರ್ವಜನಿಕರು ಸ್ಥಳೀಯ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಭೇಟಿಯಾಗಿ ಸಮಸ್ಯೆ ಬಗ್ಗೆ ವಿವರಿಸಿದ್ದರು. ಸಂಶೋಧನೆ ಜಾಗ ಆಗಿರುವುದರಿಂದ ಬೇರೆಡೆ ಮಾರುಕಟ್ಟೆ ನಿರ್ಮಿಸಿಕೊಳ್ಳಬಹುದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಇದನ್ನಾಧರಿಸಿ ಶಾಸಕರು ತೋಟಗಾರಿಕೆ ಇಲಾಖಾ ಕಾರ್ಯದರ್ಶಿ ಹಾಗೂ ಮಹಾವಿದ್ಯಾಲಯದ ಕುಲಪತಿಗೆ ಪತ್ರ ಬರೆದು ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.
ಎಷ್ಟು ಮರಗಳಿಗೆ ಕೊಡಲಿ?:
ಆನ್‌ಲೈನ್ ಸಹಿ ಅಭಿಯಾನ:
ತೋಟಗಾರಿಕೆ ಮಹಾವಿದ್ಯಾಲಯದ ಸಂಶೋಧನಾ ಜಾಗವನ್ನು ವಾಣಿಜ್ಯ ಚಟುವಟಿಕೆಗೆ ಬಳಸಿಕೊಳ್ಳುವ ಪ್ರಸ್ತಾಪ ವಿರೋಧಿಸಿ ಪ್ರಾಜೆಕ್ಟರ್ ಕೈಬಿಡುವಂತೆ ಕೋರಿ ‘ಸೇವ್ ಜಿಕೆವಿಕೆ ಕ್ಯಾಂಪಸ್’ ಹೆಸರಿನಲ್ಲಿ ಕ್ಯಾಂಪೇನ್ ಆರಂಭಿಸಲಾಗಿದೆ. ಕೆಲ ದಿನಗಳ ಹಿಂದೆ ಆರಂಭವಾಗಿರುವ ಈ ಅಭಿಯಾನಕ್ಕೆ ಈವರೆಗೆ 20 ಸಾವಿರ ಜನರು ಸಹಿ ಹಾಕಿ ತೊಟಗಾರಿಕೆ ಮಹಾವಿದ್ಯಾಲಯದ ಜಾಗವನ್ನು ಉಳಿಸಲು ಬೆಂಬಲಿಸಿದ್ದಾರೆ.
1976ರ ಮರಗಳ ಕಾಯ್ದೆ ಪ್ರಕಾರ ಸಂಶೋಧನಾ ಚಟುವಟಿಕೆ ನಡೆಯುತ್ತಿರುವ ಅಥವಾ ಜೀವ ವೈವಿಧ್ಯತೆ ತಾಣವೆಂದು ಗುರುತಿಸಿರುವ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ. ಈ ವಿಷಯ ತಿಳಿದಿದ್ದರೂ, ಸರ್ಕಾರ ಇದೇ ಜಾಗಕ್ಕಾಗಿ ಪಟ್ಟು ಹಿಡಿದಿರುವುದು ಏಕೆ? ಫ್ಲವರ್ ಮಾರ್ಕೆಟ್‌ಗೆ ನಮ್ಮ ವಿರೋಧ ಇಲ್ಲ, ಬೇರೆಡೆ ಸ್ಥಾಪನೆ ಮಾಡಿ ಕಾಲೇಜಿನ ಜಾಗ ಉಳಿಸುವಂತೆ ಮನವಿ ಮಾಡಿದ್ದೇವೆ.
- ವಿಜಯ್ ನಿಶಾಂತ್, ಟ್ರೀ ಡಾಕ್ಟರ್