a-car-without-an-engine 
ಬೆಂಗಳೂರು

ಇಂಜಿನ್ ಇಲ್ಲದ ಕಾರು ಕೊಟ್ಟಂತೆ ಎಂದು ಬಿಜೆಪಿ ಸಂಸದ ಹೇಳಿದ್ದು ಯಾರಿಗೆ ಗೊತ್ತಾ !?

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಸಚಿವರಿಗೆ ಅಪೂರ್ಣ ಖಾತೆ ಹಂಚಿಕೆಗೆ ಆಕ್ಷೇಪ
  • ವಿನೂತನ ಅಭಿಯಾನ ಆರಂಭಿಸಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು: ಮುಖ್ಯಮಂತ್ರಿಯವರು ಬೆಂಗಳೂರು ಅಭಿವೃದ್ಧಿ ಸಚಿವರಿಗೆ ಬಿಡಿಎ ಹಾಗೂ ಬಿಎಂಆರ್‌ಡಿಎ ಸಂಸ್ಥೆಗಳ ಹೊಣೆಯನ್ನು ನೀಡದಿರುವುದು ಇಂಜಿನ್ ಇಲ್ಲದ ಕಾರು ಕೊಟ್ಟಂತಾಗಿದೆ ಎಂದು ಬಿಜೆಪಿ ಸಂದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.
ರಾಜಧಾನಿಗೆ ಸಂಪೂರ್ಣ ಅಧಿಕಾರವಿರುವ ಒಬ್ಬರೇ ಬೆಂಗಳೂರು ಅಭಿವೃದ್ಧಿ ಸಚಿವರನ್ನು ನೇಮಿಸಬೇಕು ಎಂದು ಆಗ್ರಹಿಸಿ ಸೋಮವಾರ ಅಭಿಯಾನವೊಂದನ್ನು ಆರಂಭಿಸಿದ ಅವರು, ಸರ್ಕಾರದೊಳಗಿನ ಆಂತರಿಕ ಜಗಳದಿಂದಾಗಿ ಮೂಲಸೌಕರ್ಯ ಮತ್ತು ನಾಗರಿಕ ಸಮಸ್ಯೆಗಳಿಂದ ಕಂಗಾಲಾಗಿರುವ ಬೆಂಗಳೂರಿಗೆ ಜವಾಬ್ದಾರಿಯುತ ನಾಯಕತ್ವ ಇಲ್ಲದಂತಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಡಿಎ ಮತ್ತು ಬಿಎಂಆರ್‌ಡಿಎ ಸಂಸ್ಥೆಗಳ ನೇರ ನಿಯಂತ್ರಣವನ್ನು ತಮ್ಮ ಬಳಿಯೇ ಇಟ್ಟುಕೊಂಡು, 5 ಪಾಲಿಕೆಗಳು, ಜಲಮಂಡಳಿ ಹಾಗೂ ಬಿಎಂಆರ್‌ಸಿಎಲ್ ಸಂಸ್ಥೆಗಳ ಜವಾಬ್ದಾರಿಯನ್ನು ಮಾತ್ರ ಬೆಂಗಳೂರು ಅಭಿವೃದ್ಧಿಗೆ ಸಚಿವರಿಗೆ ವಹಿಸಿದ್ದಾರೆ. ಇದು ಯಾರಿಗಾದರೂ ಕಾರು ಚಲಾಯಿಸಲು ಕೊಟ್ಟು, ಅದರ ಇಂಜಿನ್ ಅನ್ನು ತಾವೇ ಇಟ್ಟುಕೊಂಡ ಹಾಗೆ. ಹೀಗಾದರೆ ಬೆಂಗಳೂರು ಅಭಿವೃದ್ಧಿ ಸಚಿವರು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ? ಎಂದು ಸೂರ್ಯ ಪ್ರಶ್ನಿಸಿದರು.

ಬೆಂಗಳೂರಿಗೆ ಶಕ್ತಿಶಾಲಿ ಸಚಿವರ ಅಗತ್ಯ:

ಮುಖ್ಯಮಂತ್ರಿಯವರು ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ ಅಥವಾ ಬೇರೆ ಯಾರಿಗಾದರೂ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ವಹಿಸುವುದು ಅವರ ವಿವೇಚನೆಗೆ ಬಿಟ್ಟಿದ್ದು. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಬೆಂಗಳೂರಿನ ಬಗ್ಗೆ ಗಮನಹರಿಸಲು ಒಬ್ಬ ಶಕ್ತಿಶಾಲಿ ಸಚಿವರ ಅಗತ್ಯವಿದೆ, ಆಗ ಮಾತ್ರ ಜನ ಅವರನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ. ಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರ ಮಧ್ಯೆ ಜವಾಬ್ದಾರಿಗಳನ್ನು ಹಂಚುವುದರಿಂದ ಗೊಂದಲ ಉಂಟಾಗುವ ಜತೆಗೆ ಆಡಳಿತ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಸಂಸದರು ಅನುಮಾನ ವ್ಯಕ್ತಪಡಿಸಿದರು.

ಸಿಎಂಗೆ ನಿತ್ಯ ನೆನಪೋಲೆ:

ಬೆಂಗಳೂರಿಗೆ ಸಂಪೂರ್ಣ ಜವಾಬ್ದಾರಿಯುತ ಸಚಿವರನ್ನು ನೇಮಿಸುವವರೆಗೆ ತಮ್ಮ ಕಚೇರಿಯು ಪ್ರತಿದಿನ ಸಾಮಾಜಿಕ ಮಾಧ್ಯಮಗಳ ಮೂಲಕ ಮುಖ್ಯಮಂತ್ರಿಯವರಿಗೆ ನೆನಪೋಲೆಯನ್ನು ಕಳುಹಿಸಲಾಗುವುದು. ಈ ವಿನೂತನ ಅಭಿಯಾನವನ್ನು ರಾಜಧಾನಿಯ ಜನರ ಹಿತದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಈ ವಿಚಾರದಲ್ಲಿ ಸಿಎಂ ಪ್ರತಿಷ್ಠೆಗೆ ಅಂಟಿಕೊಳ್ಳದೆ ಬೆಂಗಳೂರು ಅಭಿವೃದ್ಧಿಯನ್ನು ಗಮನಿಸಿ ಖಾತೆ ಹಂಚಿಕೆಯಲ್ಲಾಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಸಂಸದರು ಒತ್ತಾಯಿಸಿದರು.