- ಜಲಮಂಡಳಿ ಅಧ್ಯೆ ಡಾ. ಮಂಜುಳಾ ಸೂಚನೆ
- ವಲಯವಾರು ಮುಖ್ಯ ಇಂಜಿನಿಯರ್ಗಳೊಂದಿಗೆ ಸಭೆ
ಬೆಂಗಳೂರು: ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಚಿತವಾಗಿಯೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯೆ ಡಾ.ಎನ್. ಮಂಜುಳಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಲಮಂಡಳಿಯ ಕಚೇರಿಯಲ್ಲಿ ಮಂಗಳವಾರ ವಲಯವಾರು ಮುಖ್ಯ ಇಂಜಿನಿಯರ್ಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಳೆ ಕೊರತೆಯಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ನೀರಿನ ಅಭಾವವನ್ನು ಎದುರಿಸುವ ಸಿದ್ಧತೆಗಳ ಕುರಿತು ಪರಿಶೀಲಿಸಿದರು. ಸದ್ಯ ಕೆಆರ್ಎಸ್ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಹಾಗೂ ಅದನ್ನು ಅತ್ಯಂತ ಎಚ್ಚರಿಕೆಯಿಂದ ಬಳಕೆ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಮುಂದೆ ಎದುರಾಗಬಹುದಾದ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಅಗತ್ಯವಿರುವ ಎಲ್ಲ ಸೂಕ್ತ ವ್ಯವಸ್ಥೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಆದೇಶಿಸಿದರು.
ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಮತ್ತಷ್ಟು ಹೆಚ್ಚಾದರೆ, ನಗರಕ್ಕೆ ಪೂರೈಸುವ ದೈನಂದಿನ ನೀರಿನ ಪ್ರಮಾಣದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಅಲ್ಲದೆ, ಪರ್ಯಾಯ ವ್ಯವಸ್ಥೆಯಾಗಿ ಹೇಮಾವತಿ ಮತ್ತು ಕಬಿನಿ ಜಲಾಶಯಗಳಿಂದ ನಗರಕ್ಕೆ ನೀರು ಸರಬರಾಜು ಮಾಡುವ ಸಾಧ್ಯಾಸಾಧ್ಯತೆಗಳ ಬಗ್ಗೆಯೂ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಬೆಂಗಳೂರು ಜಲಮಂಡಳಿ ಪ್ರಧಾನ ಮುಖ್ಯ ಇಂಜಿನೀಯರ್ ಬಿ.ಎಸ್.ದಲಾಯತ್, ಮುಖ್ಯ ಇಂಜಿನಿಯರ್ಗಳಾದ ಎಸ್.ವಿ. ವೆಂಕಟೇಶ್, ದೇವರಾಜು, ಗಂಗಾಧರ್, ರಾಜಶೇಖರ್ ಹಾಗೂ ಮಹದೇವೇಗೌಡ ಉಪಸ್ಥಿತರಿದ್ದರು.
ನಗರದ ಅಂತರ್ಜಲಮಟ್ಟ ಹಾಗೂ ಪ್ರಸ್ತುತ ಬಳಕೆಯಲ್ಲಿರುವ ಕೊಳವೆಬಾವಿಗಳ ವಾಸ್ತವಿಕ ಸ್ಥಿತಿಗತಿಗಳ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯಿಂದ ಸಮಗ್ರ ವರದಿಯನ್ನು ಪಡೆದುಕೊಳ್ಳುವಂತೆ ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಎದುರಾಗದಂತೆ ಎಚ್ಚರಿಕೆ ವಹಿಸುವಂತೆ ಡಾ. ಮಂಜುಳಾ ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.