- ಅಂತರ್ಜಲ ಮಟ್ಟ ಕುಸಿತ ಹಿನ್ನೆಲೆಯಲ್ಲಿ ಜಲಸಂರಕ್ಷಣೆಗೆ ಹೊಸ ಸವಾಲು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವುದು ಹಾಗೂ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾವೇರಿ ನೀರಿನ ಬಳಕೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಕಟ್ಟುನಿಟ್ಟಿನ ರ್ನಿಬಂಧಗಳನ್ನು ಜಾರಿಗೊಳಿಸಿದೆ. ಈಗಾಗಲೇ ಹಲವೆಡೆ ಅಸಮರ್ಪಕ ನೀರು ಪೂರೈಕೆ, ಕಡಿಮೆ ಒತ್ತಡ, ಖಾಸಗಿ ಟ್ಯಾಂಕರ್ಗಳ ಅವಲಂಬನೆ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ನಾಗರಿಕರಿಗೆ ಈ ಕ್ರಮ ಮತ್ತಷ್ಟು ಆತಂಕ ಮೂಡಿಸಿದೆ.
ಬಿಡಬ್ಲ್ಯುಎಸ್ಎಸ್ಬಿ ಕಾಯ್ದೆಯ ಸೆಕ್ಷನ್ 33 ಮತ್ತು 34ರಡಿ ಹೊರಡಿಸಿರುವ ಆದೇಶದಂತೆ ಕುಡಿಯುವ ನೀರನ್ನು ಕಟ್ಟಡ ನಿಮಾರ್ಣ, ರಸ್ತೆ ಕಾಮಗಾರಿ, ವಾಹನ ತೊಳೆಯುವುದು, ಮನರಂಜನಾ ಚಟುವಟಿಕೆಗಳು ಸೇರಿ ಅನಿವಾರ್ಯವಲ್ಲದ ಉದ್ದೇಶಗಳಿಗೆ ಬಳಸುವುದನ್ನು ಸಂಪೂರ್ಣ ನಿಷೆೇಧಿಸಲಾಗಿದೆ. ಅಪಾರ್ಟ್ಮೆಂಟ್ಗಳು, ವಾಣಿಜ್ಯ ಕಟ್ಟಡಗಳು, ಶಾಪಿಂಗ್ ಮಾಲ್ಗಳು, ಸರ್ಕಾರಿ ಕಚೇರಿಗಳು, ಹೋಟೆಲ್ಗಳು, ಉಪಾಹಾರ ಗೃಹ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಜು.31ರೊಳಗೆ ನೀರು ಉಳಿತಾಯ ಮಾಡುವ ಫ್ಲೋ ರಿಸ್ಟ್ರಿಕ್ಟರ್ ಅಥವಾ ಏರೇಟರ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ.
ಆದರೆ, ರಾಜಧಾನಿಯ ಕೆಲವು ಭಾಗದಲ್ಲಿ ನೀರು ಪೂರೈಕೆಯೇ ಅಸಮರ್ಪಕವಾಗಿದೆ. ಎತ್ತರದ ಪ್ರದೇಶಗಳಲ್ಲಿ ನೀರಿನ ಒತ್ತಡ ಕಡಿಮೆ ಇದ್ದು, ಈ ಹಿಂದೆ ದಿನಕ್ಕೆ ಸರಾಸರಿ ಬರುವ ನೀರು ಸಾಕಾಗುತ್ತಿತ್ತು. ಆದರೆ, ನೀರಿನ ಲಭ್ಯತೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಊರೈಕೆಯ ಅವಧಿ ಕಡಿತವಾಗುತ್ತಿದ್ದು, ಕೆಲವು ಭಾಗದ ಜನರಿಗೆ ಅಗತ್ಯಕ್ಕೆ ಬೇಕಾದ ನೀರು ಕೂಡ ಸಿಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರ ಹೊರವಲಯದ ಅನೇಕ ಬಡಾವಣೆಗಳಲ್ಲಿ ಕಾವೇರಿ ನೀರು ಇನ್ನೂ ಸಮರ್ಪಕವಾಗಿ ತಲುಪದಿರುವುದು, ಕೆಲವೆಡೆ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆ ಆಗುತ್ತಿರುವುದು, ಕಡಿಮೆ ಒತ್ತಡದಿಂದ ಮೇಲಂತಸ್ತುಗಳಿಗೆ ನೀರು ತಲುಪದಿರುವುದು ಹಾಗೂ ಖಾಸಗಿ ಟ್ಯಾಂಕರ್ಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡುವ ಪರಿಸ್ಥಿತಿ ನಿಮಾರ್ಣವಾಗಿರುವುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಮಳೆ ಕೊರತೆಯ ನಡುವೆ ನೀರಿನ ಸಂರಕ್ಷಣೆಗೆ ಒತ್ತು ನೀಡುವ ಜತೆಗೆ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವ ಸವಾಲು ಕೂಡ ಜಲಮಂಡಳಿ ಎದುರಿಸುತ್ತಿದೆ.
ಈ ವರ್ಷ ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯಕ್ಕಿಂತ ಶೇ.28 ಮಳೆ ಕೊರತೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಎಲ್ನಿನೊ ಪರಿಣಾಮ, ದುರ್ಬಲ ನೈಋತ್ಯ ಮುಂಗಾರು ಹಾಗೂ ಅಸಮ ಪ್ರಮಾಣದ ಮಾರುತಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಅದರ ಪರಿಣಾಮ ಅಂತರ್ಜಲ ಮಟ್ಟವೂ ಇಳಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.