- ಸಂಚಾರಿ ಸಿಂಟೆಕ್ಸ್ ಮೂಲಕ ಸರಬರಾಜು
- ವಿಜಯವಾಣಿ' ವರದಿ ಪರಿಣಾಮ
ಬೆಂಗಳೂರು: ರಾಜಧಾನಿಯ ಚಾಮುಂಡಿನಗರ ಪ್ರದೇಶದ ನಿವಾಸಿಗಳು ವರ್ಷಪೂರ್ತಿ ತೀವ್ರ ಕುಡಿಯುವ ನೀರಿನ ಸಂಕಷ್ಟಕ್ಕೆ ಜಲಮಂಡಳಿ ಕೊನೆಗೂ ಸ್ಪಂದಿಸಿದ್ದು, ಟ್ಯಾಂಕರ್ಗಳ ಮೂಲಕ ಉಚಿತವಾಗಿ ನೀರು ಪೂರೈಸುವ ಪ್ರಕ್ರಿಯೆಯನ್ನು ಶನಿವಾರ ಆರಂಭಿಸಿದೆ.
ಬೆಂಗಳೂರು ಸೇರಿ ರಾಜ್ಯಾದ್ಯಂತ ನೀರಿನ ಸಮಸ್ಯೆ ಬಗ್ಗೆ "ವಿಜಯವಾಣಿ' ಶನಿವಾರ "ಕುಡಿಯುವ ನೀರಿಗೆ ಬರ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಅದನ್ನು ಗಮನಿಸಿದ ಜಲಮಂಡಳಿ ಅಧಿಕಾರಿಗಳು, ಚಾಮುಂಡಿನಗರ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದಾರೆ.
ಚಾಮುಂಡಿನಗರ ಪ್ರದೇಶವು ಜಲಮಂಡಳಿಯ ಉಪವಿಭಾಗದ ರಾಜಾಜಿನಗರ ಸೇವಾಠಾಣೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಪ್ರದೇಶಕ್ಕೆ ಪರ್ಯಾಯ ದಿನಗಳಲ್ಲಿ (ದಿನ ಬಿಟ್ಟು ದಿನ) ನೀರು ಸರಬರಾಜು ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ 2 ಕೊಳವೆಬಾವಿಗಳಿದ್ದು, ಎರಡೂ ಕಾರ್ಯನಿರ್ವಹಿಸುತ್ತಿವೆ. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ನೋಡಿಕೊಳ್ಳುವ ಹಾಗೂ ಸಾರ್ವಜನಿಕರಿಗೆ ಸಮರ್ಪಕ ನೀರು ಸರಬರಾಜು ಆಗುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಜಲಮಂಡಳಿ ನೀರಿನ ಸಮಸ್ಯೆ ಇರುವ ರಸ್ತೆಗಳಲ್ಲಿ ಸಿಂಟೆಕ್ಸ್ ಟ್ಯಾಂಕ್ಗಳನ್ನು ಅಳವಡಿಸಲಾಗಿದೆ. ಅಲ್ಲದೆ 2,000 ಲೀಟರ್ ಸಾಮರ್ಥ್ಯದ ಸಂಚಾರಿ ಸಿಂಟೆಕ್ಸ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ನೀರಿನ ಸರಬರಾಜು ಸರಿಯಾಗಿ ನಡೆಯದಿದ್ದರೂ ಜಲಮಂಡಳಿಯಿಂದ ಬಿಲ್ ಬರುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಪ್ರದೇಶದಲ್ಲಿ ಕಾವೇರಿ ನೀರಿನ ನಿರಂತರ ಪೂರೈಕೆ ಇಲ್ಲದ ಕಾರಣ, ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದರು. ಸುಮಾರು 3 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಮಸ್ಯೆ ತಲೆದೋರಿತ್ತು. ಇದೀಗ ಇಲ್ಲಿನ ಸಾರ್ವಜನಿಕರ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಲಮಂಡಳಿ ಗಮನಹರಿಸಿದೆ.