- ಅಲ್ಲಲ್ಲಿ ರಸ್ತೆ ಬದಿ ಕಸ ಹಾಕಿದರೆ ಭಾರೀ ದಂಡ!
- ಇದುವರೆಗೆ 3.6 ಕೋಟಿ ದಂಡ ವಸೂಲಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದಲ್ಲಿ ಕಸ ನಿರ್ವಹಣೆಗೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು,ವಿವಿಧ ರಸ್ತೆಗಳ ಮೂಲೆಗಳಲ್ಲಿ ಕಸದ ರಾಶಿ ನಿಮಾರ್ಣವಾಗುವ ಹಿನ್ನೆಲೆ ದಂಡ ಪ್ರಯೋಗ ತೀಕ್ಷವಾಗುತ್ತಿದೆ.
ರಾಜಧಾನಿಯ ಸಂಚಾರ ಸಮಸ್ಯೆಯಂತೆಯೇ ಕಸದ ನಿರ್ವಹಣೆಯೂ ದಿನದಿನಕ್ಕೆ ತಲೆನೋವಾಗುತ್ತಿದೆ. ಒಂದು ದಿನ ಮನೆಯಿಂದ ಕಸ ತೆರವು ಮಾಡದೆ ಇದ್ದರೆ ಮನೆ, ಬೀದಿ ಎಲ್ಲ ಗಬ್ಬು ನಾರುತ್ತದೆ. ಇದೇರೀತಿ ಕಸವನ್ನು ಅಲ್ಲಲ್ಲಿ ಹಾಕುತ್ತಿದ್ದರೆ ಭಾರೀ ದಂಡ ತೆರಬೇಕಾಗುತ್ತದೆ.
ನಗರದಲ್ಲಿ ಕಸ ಎಸೆಯುವವರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. 82 ಸಾವಿರ ಪ್ರಕರಣಗಳಲ್ಲಿ ಒಟ್ಟಾರೆ 3.6 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ದಂಡ ಹಾಕುವ ಜತೆಗೆ ಸ್ವಚ್ಛತೆಯ ಪಾಠವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಇನ್ನು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಹಾಗೂ ಉಗುಳುವುದು ಸೇರಿ ವಿವಿಧ ಪ್ರಕರಣಗಳಿಗೆ ದಂಡ ವಿಧಿಸಲಾಗುತ್ತಿದೆ.
ಮೂಲೆ ಮೂಲೆಯಲ್ಲಿ ಸಿಸಿಟಿವಿ ಹಾಕಿರುವ ಕಾರಣಕ್ಕೆ ಯಾರು ಕಸತಂದು ರಸ್ತೆಬದಿಯಲ್ಲಿ ಬಿಸಾಕುತ್ತಾರೆ ಎಂಬುದು ಅಧಿಕಾರಿಗಳಿಗೆ ಸುಲಭವಾಗಿ ತಿಳಿಯುತ್ತಿದೆ. ಇದರಿಂದ ಅವರ ಮನೆಗೆ ಹೋಗಿ ಕಸವನ್ನು ಹಾಕಿ ಅವರಿಗೆ ಸ್ವಚ್ಛತೆಯ ಪಾಠ ಮಾಡಿ ಬರುತ್ತಿದ್ದಾರೆ. ಇದರೊಂದಿಗೆ ಸಾರ್ವಜನರಿಕರು ಸಹ ಸಹಾಯವಾಣಿ ಮೂಲಕ ಕರೆ ಮಾಡಿ ದೂರು ನೀಡುತ್ತಾರೆ. ಈ ದೂರು ಆಧರಿಸಿಯೂ ದಂಡ ವಿಧಿಸಲಾಗುತ್ತಿದೆ.
ಕಸದ ಸಮಸ್ಯೆ: ಕೆಲವು ದಿನಗಳ ಹಿಂದೆ ಬೆಂಗಳೂರು ಕಸವನ್ನು ತಂದು ಇಲ್ಲಿ ಹಾಕಬೇಡಿ ಎಂದು ಬೆಳ್ಳಹಳ್ಳಿ, ಮಿಟ್ಟಗಾನಹಳ್ಳಿ ಜನರು ಆಗ್ರಹಿಸಿದ್ದರು. ಡಂಪಿಂಗ್ ಯಾರ್ಡ್ಗಳಿಗೆ ಕಸ ಹೊತ್ತೊಯ್ಯುವ ಲಾರಿಗಳನ್ನು ಸ್ಥಳಿಯರು ತಡೆದಿದ್ದರು. ಕಳೆದ ಎರಡು ವರ್ಷಗಳಿಂದ ಈ ಗ್ರಾಮಗಳ ಅಭಿವೃದ್ಧಿಗೆ ಬರಬೇಕಿದ್ದ ಅನುದಾನ ಬಿಡುಗಡೆಯಾಗಿಲ್ಲ ಮತ್ತು ನಿರಂತರ ಕಸ ವಿಲೇವಾರಿಯಿಂದ ರಸ್ತೆಗಳು ಹಾಳಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂಬುದು ಗ್ರಾಮಸ್ಥರ ದೂರಾಗಿತ್ತು. ಫೆಬ್ರವರಿ 19ರ ಸುಮಾರಿಗೆ ಸರ್ಕಾರವು ಸುಮಾರು 550 ಕೋಟಿ ರೂ.ಗಳ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿದ ಬಳಿಕ ಪ್ರತಿಭಟನೆ ತಾತ್ಕಾಲಿಕ ಅಂತ್ಯ ಕಂಡಿದೆ.
2025ರ ಆಗಸ್ಟ್ನಲ್ಲಿ ಒಟ್ಟು 6,168 ಪ್ರಕರಣಗಳಲ್ಲಿ 25.1 ಲಕ್ಷ ರೂ.ದಂಡ ವಿಧಿಸಲಾಗಿತ್ತು. ಅದೇ ವರ್ಷ ಸೆಪ್ಟೆಂಬರ್ನಲ್ಲಿ 21,257 ಪ್ರಕರಣ ದಾಖಲಾಗಿದ್ದು, 98 ಲಕ್ಷ ರೂ. ದಂಡ ವಸೂಲಿಯಾಗಿದೆ. 2025ರ ಅಕ್ಟೋಬರ್ನಲ್ಲಿ 12,625 ದೂರು ಬಂದಿದ್ದು, 56 ಲಕ್ಷ ರೂ. ದಂಡ, 2025ರ ನವೆಂಬರ್ನಲ್ಲಿ 14,337 ಜನರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದ್ದು, 61.8 ಲಕ್ಷ ರೂ.ದಂಡ, 2025ರ ಡಿಸೆಂಬರ್ನಲ್ಲಿ 13,095 ಪ್ರಕರಣಕ್ಕೆ 56.5 ಲಕ್ಷ ರೂ. ದಂಡ, 2026ರ ಜನವರಿಯಲ್ಲಿ 15,011 ಪ್ರಕರಣ ದಾಖಲಾಗಿದ್ದು, 66 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ರಸ್ತೆ ಬದಿ ಕಸ ಹಾಕಿ ಹೋಗುವವರಿಗೆ ಇದೀಗ 2 ಸಾವಿರ ರೂ.ದಂಡ ವಿಧಿಸಲಾಗುತ್ತಿದೆ. ಈ ದುಬಾರಿ ದಂಡದಿಂದಾಗಿ ಸಾಕಷ್ಟು ಜನರು ಎಚ್ಚೆತ್ತುಕೊಂಡಿದ್ದಾರೆ. ಇನ್ನು ಮೂತ್ರ ವಿಸರ್ಜನೆ ಕುರಿತು 308 ಪ್ರಕರಣ, ರಸ್ತೆ ಬದಿ ಉಗಿದ 183 ಪ್ರಕರಣಳಿಂದ ಒಟ್ಟಾರೆ 45,100 ರೂ. ದಂಡ ವಸೂಲಿ ಮಾಡಲಾಗಿದೆ.