ಜಿಬಿಎ 
ಬೆಂಗಳೂರು

ತ್ಯಾಜ್ಯ ನಿರ್ವಹಣೆಗೆ ಹಸಿರು ಜ್ಞಾನ ಕಲಿಕಾ ಕೇಂದ್ರ ಲೋಕಾರ್ಪಣೆ| waste management

ಪ್ರಮುಖ ಮುಖ್ಯಾಂಶಗಳು

  • ಜೆ.ಪಿ.ನಗರದಲ್ಲಿ ಸುಸ್ಥಿರ ಬದುಕಿನ ಅರಿವು ಮೂಡಿಸುವ ವಿಶಿಷ್ಟ ಉಪಕ್ರಮ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಜೀವನಶೈಲಿಯ ಅರಿವು ಮೂಡಿಸುವ ಉದ್ದೇಶದಿಂದ ವುಮೆನ ಆಫ್​ ವಿಸ್ಡಂ ತಂಡದ ವತಿಯಿಂದ ಜೆ.ಪಿ.ನಗರದಲ್ಲಿ ಸ್ಥಾಪಿಸಲಾದ "ಹಸಿರು ಜ್ಞಾನ ಕಲಿಕಾ ಕೇಂದ್ರ"ವನ್ನು ಶಾಸಕ ಸಿ.ಕೆ.ರಾಮಮೂರ್ತಿ ಉದ್ಘಾಟಿಸಿದರು.
ಸಂಸ್ಥೆಯ ಉಪಕ್ರಮವಾಗಿ ಈ ಕೇಂದ್ರವನ್ನು ಸಾಕ್ರೆಟಸ್​ ಫೌಂಡೇಶನ್​ ಹಾಗೂ ಎಲ್​ವಿಬಿಎಲ್​ ಆಕ್ಸಿಲರೇಟರ್​ ಸಹಯೋಗದಲ್ಲಿ, ಜಯನಗರ ಶಾಸಕರ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲಾಗಿದೆ.
ಸುಸ್ಥಿರ ಅಭ್ಯಾಸಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಸಂವಾದಾತ್ಮಕ ಅನುಭವ ವಲಯ ಹಾಗೂ ಕಾರ್ಯನಿರತ ಪ್ರಧಾನ ಕಚೇರಿಯಾಗಿ ಈ ಕೇಂದ್ರವನ್ನು ರೂಪಿಸಲಾಗಿದೆ. ಇಲ್ಲಿ ನೈಜ-ಸಮಯದ ಪ್ರದರ್ಶನಗಳು, ಮಾರ್ಗದರ್ಶಿ ಚರ್ಚೆಗಳು ಹಾಗೂ ಪ್ರಾಯೋಗಿಕ ಅನುಷ್ಠಾನಗಳ ಮೂಲಕ ಪರಿಸರಸ್ನೇಹಿ ಜೀವನಶೈಲಿಯ ಮಹತ್ವವನ್ನು ಸಂದರ್ಶಕರಿಗೆ ಮನವರಿಕೆ ಮಾಡಿಕೊಡಲಾಯಿತು.
ತ್ಯಾಜ್ಯ ವಿಂಗಡಣೆ, ಸಾವಯವ ಗೊಬ್ಬರ ತಯಾರಿಕೆ, ಮರುಬಳಕೆ ಹಾಗೂ ವೃತ್ತಾಕಾರದ ಆರ್ಥಿಕತೆಯ ಪರಿಕಲ್ಪನೆಗಳ ಪ್ರಾಯೋಗಿಕ ಮಾದರಿಗಳನ್ನು ಕೇಂದ್ರದಲ್ಲಿ ಪ್ರದರ್ಶಿಸಲಾಗಿದ್ದು, ಸುಸ್ಥಿರತೆಯನ್ನು ಕೇವಲ ಪರಿಕಲ್ಪನೆಯಾಗಿ ಅಲ್ಲದೆ ಅನುಸರಿಸಬಹುದಾದ ಜೀವನ ವಿಧಾನವಾಗಿ ಪರಿಚಯಿಸಲಾಗಿದೆ.
ಆಡಳಿತ, ತರಬೇತಿ ಹಾಗೂ ಸಾರ್ವಜನಿಕ ಜಾಗೃತಿ ಕೇಂದ್ರವಾಗಿ ಕಾರ್ಯನಿರ್ವಹಿಸಲಿರುವ ಈ ಹಸಿರು ಜ್ಞಾನ ಕಲಿಕಾ ಕೇಂದ್ರವು ನಾಗರಿಕರು, ಶಿಕ್ಷಣ ಸಂಸ್ಥೆಗಳು ಹಾಗೂ ಸ್ಥಳಿಯ ಸಂಸ್ಥೆಗಳಿಗೆ ಸುಸ್ಥಿರ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಲಿದ್ದು, ರಚನಾತ್ಮಕ ತ್ಯಾಜ್ಯ ನಿರ್ವಹಣಾ ಪದ್ಧತಿಗಳ ಅನುಷ್ಠಾನಕ್ಕೆ ವೇದಿಕೆಯಾಗಲಿದೆ ಎಂದು ಆಯೋಜಕರು ತಿಳಿಸಿದರು. 
ನಟ ಅನಿರುದ್ಧ, ಬಿಬಿಎಂಪಿ ಮಾಜಿ ಕಾಪೋರ್ರೇಟರ್​ಗಳಾದ ಬಿ.ಸೋಮಶೇಖರ್​, ಚಂದ್ರಶೇಖರ್​, ನಾಗರತ್ನಾ ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತ್​ ಕುಮಾರ್ ಮತ್ತಿತರರು ಹಾಜರಿದ್ದರು.